ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಮುಗಿಯದ ಬೆಳೆ ವಿಮೆ ಗೊಂದಲ

Last Updated 14 ಸೆಪ್ಟೆಂಬರ್ 2020, 8:50 IST
ಅಕ್ಷರ ಗಾತ್ರ

ಕೊಪ್ಪಳ: ರೈತರಿಗೆ ಆಸರೆಯಾಗುವ ಬೆಳೆ ವಿಮೆ ವಿವಿಧ ಗೊಂದಲಗಳಿಂದ ಬ್ಯಾಂಕ್ ಖಾತೆಗೆ ಬಾರದೇ ಕಳೆದ ಪರದಾಡುವಂತೆ ಆಗಿದೆ. ಕಳೆದ ಮೂರು ವರ್ಷದಿಂದ ಇದೇ ಸಮಸ್ಯೆ ಆಗಿದೆ.

ವಿಮಾ ಕಂಪೆನಿ, ಅಧಿಕಾರಿಗಳು, ಬ್ಯಾಂಕ್ ಅಕೌಂಟ್ ನಂಬರ್, ಬೆಳೆ ವಿಮಾ ತುಂಬುವಲ್ಲಿನ ಗೊಂದಲದಿಂದ ಅರ್ಹ ರೈತರಿಗೆ ಹಣ ಬಾರದೇ ಚಾತಕ ಪಕ್ಷಿಯಂತೆ ಕಾಯುವಂತೆ ಆಗಿದೆ. ಒಂದೇ ಗ್ರಾಮದ ಅಕ್ಕಪಕ್ಕದ ಜಮೀನುಗಳ ರೈತರಲ್ಲಿ ಒಬ್ಬರಿಗೆ ಬಂದರೆ ಒಬ್ಬರಿಗೆ ಬಾರದೇ ಕೃಷಿ ಇಲಾಖೆ ಅಧಿಕಾರಿಗಳು ಇಲ್ಲದ ಸಬೂಬು ಹೇಳುತ್ತಾ ವರ್ಷಾನುಗಟ್ಟಲೆ ರೈತರನ್ನು ಅಲೆದಾಡಿಸುತ್ತಾರೆ.

ರೈತರಿಗೆ ಬೆಳೆ ವಿಮೆ ತುಂಬುವ ಪೂರ್ವದಲ್ಲಿ ಪೂರ್ಣ ಮಾಹಿತಿ ನೀಡುವುದಿಲ್ಲ. ವಿಮೆ ನೀಡುವ ಕಂಪೆನಿಗಳು ಹಣ ಬಂದಿಲ್ಲ ಎಂಬ ನೆಪ ಹೇಳುತ್ತವೆ. ತಾಂತ್ರಿಕ ತೊಂದರೆಯನ್ನು ಪರಿಹರಿಸದೇ ವಿಳಂಬ ಮಾಡುತ್ತಿರುವುದರಿಂದ ಕೆಲವು ರೈತರು ಬೆಳೆ ಹಾಳಾದರೂ ವಿಮೆ ತುಂಬುವ ಗೋಜಿಗೆ ಹೋಗುವುದಿಲ್ಲ. ಮೊದಲೇ ಸಾಲಸೋಲ ಮಾಡಿಕೊಂಡು ಬಿತ್ತನೆ ಮಾಡಿ ಬೆಳೆಯನ್ನು ಕಳೆದುಕೊಂಡು ವಿಮೆಗೆ ಹಣ ತುಂಬಿದರೂ ಅವರಿಗೆ ಹಣ ಬಂದಿಲ್ಲ.

ಜಿಲ್ಲೆಯ ರೈತರಿಗೆ ವಿಮೆ ಹಣ ನೀಡಲು 7 ಖಾಸಗಿ ವಿಮಾ ಕಂಪೆನಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಲೀಡ್ ಬ್ಯಾಂಕ್, ಕೃಷಿ ಇಲಾಖೆ ಸಹಯೋಗದೊಂದಿಗೆ ಪರಿಶೀಲನೆ ನಡೆಸಿ ರೈತರ ಖಾತೆಗೆ ಹಣವನ್ನು ಸಂದಾಯ ಮಾಡಬೇಕು. ಆದರೆ ಸಕಾಲಕ್ಕೆ ಸರ್ಕಾರ ಕೂಡಾ ಕೆಲವೊಮ್ಮೆ ವಿಮೆ ಹಣವನ್ನು ಬಿಡುಗಡೆ ಮಾಡಿಲ್ಲ. ಈ ಕುರಿತು ಅನೇಕ ಬಾರಿ ಮನವಿಯನ್ನು ರೈತರು ಸಲ್ಲಿಸಿದ್ದಾರೆ.

ಅನಕ್ಷರಸ್ಥ ರೈತರಿಗೆ ಬೆಳೆ ವಿಮೆ ತುಂಬುವುದು ಹೊರೆಯಾಗದಂತೆ ಆಯಾ ರೈತ ಸಂಪರ್ಕ ಕೇಂದ್ರಗಳೇ ಸಹಾಯ ಮಾಡಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಗೊಂದಲಗಳು ಇಲ್ಲದಂತೆ ಅರ್ಜಿಯನ್ನು ತುಂಬಲು ಕೃಷಿ ಇಲಾಖೆ ಅಧಿಕಾರಿಗಳು, ವಿಮಾ ಕಂಪೆನಿಗಳು ಸಹಾಯ ಮಾಡಬೇಕು. ರೈತರು ಎಲ್ಲ ಫಾರ್ಮ್ ಭರ್ತಿ ಮಾಡಿದ ಮೇಲೆ ವಿವಿಧ ಕಾರಣ ನೀಡಿ ವಿಮೆ ಹಣ ನೀಡಲು ನಿರಾಕರಿಸುತ್ತಿರುವುದು ಸಲ್ಲದು.

ತಿಳಿವಳಿಕೆ ಕೊರತೆಯಿಂದ ಯಾವ ಬೆಳೆಯನ್ನು ನಮೂದಿಸಬೇಕು ಎಂಬ ಮಾಹಿತಿ ರೈತರಿಗೆ ಇರುವುದಿಲ್ಲ. ವಿಮೆ ಕಂಪೆನಿಯ ಬೆಳೆ ಮಾದರಿಯೇ ಬೇರೆ, ರೈತರು ತುಂಬುವ ಮಾಹಿತಿಯೇ ಬೇರೆ ಇದರಿಂದ ಅನೇಕ ರೈತರಿಗೆ ಬೆಳೆ ವಿಮೆ ಹಣ ಬಂದಿಲ್ಲ. ಆದ್ದರಿಂದ ರೈತರನ್ನು ಅನಗತ್ಯವಾಗಿ ತೊಂದರೆಗೆ ಸಿಲುಕಿಸದೇ ಸರ್ಕಾರದ ಯೋಜನೆಗಳು ತಲುಪುವಂತೆ ಕೃಷಿ ಇಲಾಖೆಯೇ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ.

ಭತ್ತ ಸೇರಿದಂತೆ ಅನೇಕ ಬೆಳೆಗಳು ಮಳೆ ಕೊರತೆಯಿಂದ ಹಾಳಾದರೂ ನಮಗೆ ವಿಮೆ ಹಣ ಬಂದಿಲ್ಲ. ಪ್ರತಿ ಸಾರಿ ವಿಮಾ ಹಣಕ್ಕಾಗಿ ಮನವಿ ಮಾಡಿದರೂ ಪ್ರಯೋಜನವಾಗುವುದಿಲ್ಲಅಗಳಕೇರಿಯ ರೈತಬಸವರಾಜ ಕರ್ಕಿಹಳ್ಳಿ ಹೇಳಿದ್ದಾರೆ.

'ಬೆಳೆ ವಿಮಾ ಹಣ ಬಿಡುಗಡೆಗಾಗಿ ಪ್ರತಿವರ್ಷ ಪ್ರತಿಭಟನೆ ಮಾಡುವಂತೆ ಆಗಿದೆ. ಸರ್ಕಾರ ಮತ್ತು ಅಧಿಕಾರಿಗಳು ಮಾಡುವ ತಪ್ಪಿನಿಂದ ಅನೇಕ ರೈತರು ಸೌಲಭ್ಯದಿಂದ ವಂಚಿತಗೊಂಡಿದ್ದಾರೆ' ಎಂದು ರೈತ ಮುಖಂಡಹನಮಂತಪ್ಪ ಹೊಳೆಯಾಚೆ ಪ್ರತಿಕ್ರಿಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT