ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ: ಮಕ್ಕಳು ಅಸ್ವಸ್ಥ; ಅಡುಗೆ ಸಿಬ್ಬಂದಿ ಬದಲಿಸಲು ಶಿಫಾರಸು

ಬಿಜಕಲ್‌ ಶಾಲೆಗೆ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯ, ಅಧಿಕಾರಿಗಳ ಭೇಟಿ
Published 24 ಆಗಸ್ಟ್ 2024, 14:04 IST
Last Updated 24 ಆಗಸ್ಟ್ 2024, 14:04 IST
ಅಕ್ಷರ ಗಾತ್ರ

ಕುಷ್ಟಗಿ: ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥಗೊಂಡ ಘಟನೆ ನಡೆದ ತಾಲ್ಲೂಕಿನ ಬಿಜಕಲ್‌ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ.ಜಿ.ರಾಮತ್ನಾಳ ಶನಿವಾರ ಭೇಟಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು, ಶಾಲೆಯ ಮಕ್ಕಳು, ಪಾಲಕರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಅಡುಗೆ ಕೋಣೆ, ಆಹಾರ ಸಾಮಗ್ರಿ ದಾಸ್ತಾನು ಕೊಠಡಿಗಳಲ್ಲಿನ ವಸ್ತುಗಳನ್ನು ಖುದ್ದಾಗಿ ಪರಿಶೀಲಿಸಿ ಅಲ್ಲಿಯ ಅವ್ಯವಸ್ಥೆಗೆ ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಶಾಲೆಯಲ್ಲಿ ನಿರುಪಯುಕ್ತಗೊಂಡ ಮೂತ್ರಾಲಯ, ಶೌಚಾಲಯಗಳ ಅವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳ ಕುರಿತು ವಿವರ ಪಡೆದರು.

ನಂತರ ಅಧಿಕಾರಿಗಳು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಅಡುಗೆಯವರನ್ನು ಬದಲಾಯಿಸುವಂತೆ ಸ್ವತಃ ಪಾಲಕರು, ಗ್ರಾಮಸ್ಥರೇ ಒತ್ತಾಯಿಸಿದ್ದು ಸದ್ಯ ಕೆಲಸ ನಿರ್ವಹಿಸುತ್ತಿರುವ ಅಡುಗೆದಾರರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ತೆಗೆದುಹಾಕಿ ಬೇರೆಯವರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಬಿಸಿಯೂಟ ತಯಾರಿಸಲು ತಾತ್ಕಾಲಿಕವಾಗಿ ಬೇರೆಯವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ನಿಗಾವಹಿಸದ ಮುಖ್ಯಶಿಕ್ಷಕಿ ಮೇಲೆ ಇಲಾಖೆ ನಿಯಮಗಳ ಅನುಸಾರ ಶಿಸ್ತುಕ್ರಮ ಜರುಗಿಸುವಂತೆ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದರು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಮತ್ತು ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಯ ಬಳಿ ಜಮಾಯಿಸಿದ ಗ್ರಾಮಸ್ಥರು ‘ಘಟನೆ ನಡೆದಾಗಲಷ್ಟೇ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ, ಉಳಿದ ಸಂದರ್ಭದಲ್ಲಿ ಇಲ್ಲಿಗೆ ಕಾಲಿಡುವುದಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ತಾಕೀತು: ಶೌಚಾಲಯ ಮತ್ತು ಬಾಲಕಿಯರಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲದಿರುವುದು, ಇದ್ದರೂ ಹಾಳು ಬಿದ್ದಿರುವ ಶೌಚಾಲಯಗಳನ್ನು ಗಮನಿಸಿದ ಸದಸ್ಯ ಶೇಖರಗೌಡ, ಶಿಕ್ಷಕರು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ವಾರದ ಒಳಗೆ ಈ ಸೌಲಭ್ಯಗಳ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು, ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವ ಬಗ್ಗೆ ಲಿಖಿತ ಮಾಹಿತಿ ನೀಡುವಂತೆ ತಾಕೀತು ಮಾಡಿದರು.

ಗ್ರೇಡ್‌ 2 ತಹಶೀಲ್ದಾರ್ ಮುರಳೀಧರ ಮುಕ್ತೇದಾರ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯ ಮಹಾಂತಪ್ಪ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ಅಕ್ಷರದಾಸೋಹ ಯೋಜನೆ ಜಿಲ್ಲಾ ಅಧಿಕಾರಿ ಅನಿತಾಬಾಯಿ, ಸಹಾಯಕ ನಿರ್ದೇಶಕ ಕೆ.ಶರಣಪ್ಪ, ಪಿಎಸ್‌ಐ ಹನುಮಂತಪ್ಪ ತಳವಾರ, ಬಿಆರ್‌ಸಿ ಸಮನ್ವಯಾಧಿಕಾರಿ ಜಗದೀಶಪ್ಪ, ಸಿಡಿಪಿಒ ಯಲ್ಲಮ್ಮ ಹಂಡಿ, ಪಿಡಿಒ ಆನಂದರಾವ ಕುಲಕರ್ಣಿ ಇತರರು ಇದ್ದರು.

ಈ ಮಧ್ಯೆ ವಾಂತಿಯಿಂದ ಅಸ್ವಸ್ಥಗೊಂಡಿದ್ದ ಎಲ್ಲ ಮಕ್ಕಳು ಚೇತರಿಸಿಕೊಂಡಿದ್ದು ಮನೆಗೆ ಕಳಿಸಲಾಗಿದೆ. ಸದ್ಯ ಯಾರಲ್ಲಿಯೂ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು ಹೇಳಿದರು.

ತುಂಗಭದ್ರಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಅವರೂ ಬಿಜಕಲ್‌ ಶಾಲೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ಮತ್ತು ಬಿಸಿಯೂಟದ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.

ಆಹಾರ ಆರೋಗ್ಯ ಇಲಾಖೆಗಳ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ವಸತಿ ಶಾಲೆ ಹಾಸ್ಟೆಲ್‌ ಅಂಗನವಾಡಿಗಳಿಗೆ ಆಗಾಗ್ಗೆ ಭೇಟಿ ನೀಡಿ ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟ ಪರೀಕ್ಷಿಸುವ ಪರಿಪಾಠ ಇಟ್ಟಿಕೊಳ್ಳಬೇಕಿದೆ
-ಶೇಖರಗೌಡ.ಜಿ.ರಾಮತ್ನಾಳ ಸದಸ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT