ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಸ್ಥಾನದ ಪೈಪೋಟಿಯಲ್ಲಿ ಅಭಿವೃದ್ಧಿ ಕುಂಠಿತ: ಶಾಸಕ ಜನಾರ್ದನ ರೆಡ್ಡಿ

Published 2 ನವೆಂಬರ್ 2023, 17:44 IST
Last Updated 2 ನವೆಂಬರ್ 2023, 17:44 IST
ಅಕ್ಷರ ಗಾತ್ರ

ಮುನಿರಾಬಾದ್‌: ‘ಮುಖ್ಯಮಂತ್ರಿ ಸ್ಥಾನದ ಆಸೆಯ ಪೈಪೋಟಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ’ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿಯಾಗಬೇಕು ಎಂದು ಪೈಪೋಟಿಗೆ ಬಿದ್ದವರು ಅನೇಕ ಜನ ಇದ್ದಾರೆ. ಇದರಿಂದ ಅಭಿವೃದ್ಧಿ ಮರೀಚಿಕೆಯಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕೂಡ ಸರಿಯಾಗಿ ಆಗುತ್ತಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದು ಐದಾರು ತಿಂಗಳಲ್ಲಿಯೇ ಅಧಿಕಾರ ಹಂಚಿಕೆ ಕಿತ್ತಾಟ ನಡೆಯುತ್ತಿದೆ’ ಎಂದರು.

ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ‘ಮುಂದೆ ಯಾರು ಸಿ.ಎಂ ಆಗಿರುತ್ತಾರೆ ಎನ್ನುವುದು ಕಾಂಗ್ರೆಸ್‌ ಪಕ್ಷದ ಆಂತರಿಕ ವಿಚಾರ. ಆದರೆ ಇದೊಂದು ವಿಷಯಕ್ಕೆ ರಾಜ್ಯದ ಅಭಿವೃದ್ಧಿ ಕುಂಠಿತವಾಗಬಾರದು. ಆ ಪಕ್ಷಕ್ಕೆ ದೇವರು ಅಧಿಕಾರ ಕೊಟ್ಟಿದ್ದಾನೆ. ಜನರ ಅಭಿವೃದ್ಧಿಗೆ ಆದ್ಯತೆ ನೀಡಬೇಕು’ ಎಂದರು.

‘ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಗಂಗಾವತಿ ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ₹ 22 ಕೋಟಿ ಮಾತ್ರ ಅನುದಾನ ಬಂದಿದೆ. ನಾನು ₹125 ಕೋಟಿ ನಿರೀಕ್ಷೆ ಮಾಡಿದ್ದೆ. ಹೀಗಾದರೆ ಅಭಿವೃದ್ಧಿ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಅಂಜನಾದ್ರಿ ಅಭಿವೃದ್ಧಿ ಬಗ್ಗೆ ಕೇಂದ್ರದ ಜೊತೆ ಮಾತುಕತೆಯಾಗಿದೆ. ಪ್ರವಾಸೋದ್ಯಮ ಇಲಾಖೆಗೆ ₹1000 ಕೋಟಿ ಪ್ರಸ್ತಾವ ಕೋರಿ ಜಿಲ್ಲಾಡಳಿತ ಮೂಲಕ ಮನವಿ ಸಲ್ಲಿಸಲಾಗಿದೆ. ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಈ ತಿಂಗಳ ಅಂತ್ಯದಿಂದ ಹೋರಾಟ ಮಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT