ಯಲಬುರ್ಗಾ: ಮಠಕ್ಕೆ ಯಾವುದೇ ರೀತಿಯ ಸಂಬಂಧ ಇಲ್ಲದವರು ಮಠದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು, ಭಕ್ತರೊಂದಿಗೆ ಶ್ರೀಗಳ ಅಗೌರವದಿಂದ ನಡೆದುಕೊಳ್ಳುವುದು ಸೇರಿ ಇತರ ಚಟುವಟಿಕೆಯಿಂದಾಗಿ ಸಂಸ್ಥಾನ ಹಿರೇಮಠಕ್ಕೆ ಧಕ್ಕೆ ಆಗುತ್ತಿದೆ. ಹಾಗಾಗಿ ಮಠದ ಪೀಠಾಧಿಪತಿಯಾದ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಕೂಡಲೇ ಸ್ಥಾನ ತ್ಯಾಗಮಾಡಬೇಕು ಎಂದು ಭಕ್ತರು ತಾಕೀತು ಮಾಡಿದ ಘಟನೆ ಪಟ್ಟಣದಲ್ಲಿ ಜರುಗಿತು.
ಮಠದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಹೊರಹಾಕಿದ ಹಿನ್ನೆಲೆಯಲ್ಲಿ ನೂರಾರು ಸಂಖ್ಯೆಯ ಭಕ್ತರು ಮಠಕ್ಕೆ ಭೇಟಿ ನೀಡಿ ಶ್ರೀಗಳ ವಿರುದ್ದ ಹರಿಹಾಯ್ದರು. ಈ ಸಂದರ್ಭದಲ್ಲಿ ಭಕ್ತರು ಮತ್ತು ಶ್ರೀಗಳ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು. ನಂತರದಲ್ಲಿ ಸಭೆ ಸೇರಿದ ಭಕ್ತರು ಮಠದಲ್ಲಿ ಆಗಬೇಕಾದ ನಡಾವಳಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರನಗೌಡ ಬನ್ನಪ್ಪಗೌಡ ಮಾತನಾಡಿ, ಭಕ್ತರಿಂದ ಮಠ ಎಂಬುದನ್ನು ಮರೆತು ಶ್ರೀಗಳು ನಡೆದುಕೊಳ್ಳುತ್ತಿದ್ದಾರೆ. ಮಠಕ್ಕೆ ಸೇರಿದ ನೂರಾರು ಎಕರೆ ಆಸ್ತಿಯ ಮೇಲೆ ತಮ್ಮ ವಾರಸುದಾರಿಕೆಯ ಹಕ್ಕು ಸಾಧಿಸುತ್ತಿದ್ದಾರೆ. ಪೀಠಕ್ಕೆ ಬಂದಾಗಿನಿಂದಲೂ ಭಕ್ತರ ಯಾವುದೇ ಸಲಹೆ ಸೂಚನೆಗಳಿಗೆ ಮಾನ್ಯತೆ ಕೊಡದೇ ತಮ್ಮಷ್ಟದಂತೆ ನಡೆದುಕೊಳ್ಳುತ್ತಾರೆ. ಪೂರ್ವಾಶ್ರಮದ ಸದಸ್ಯರೊಬ್ಬರು ಮಠದಲ್ಲಿ ಆಡಳಿತ ನಡೆಸುತ್ತಾರೆ. ಈಗಿನ ಶ್ರೀಗಳಿಂದ ಮಠಕ್ಕಾಗಲಿ, ಭಕ್ತರಿಗಾಗಲಿ ಯಾವುದೇ ಪ್ರಯೋಜನವಿಲ್ಲ, ಈ ಕಾರಣದಿಂದ ಇವರು ಪೀಠ ತ್ಯಾಗಮಾಡುವುದು ಸೂಕ್ತ ಎಂದು ಒತ್ತಾಯಿಸಿದರು.
ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಬೇಲೇರಿ ಮಾತನಾಡಿ, ಮಠದಲ್ಲಿ ಸೇವೆ ಮಾಡಿಕೊಂಡಿದ್ದ ಸಿದ್ದಯ್ಯಸ್ವಾಮಿ ಎಂಬುವರನ್ನು ಮಠದಿಂದ ಹೊರ ಹಾಕಿದ್ದಾರೆ. ಪ್ರಸ್ತುತ ಅವರು ಸಿದ್ದರಾಮೇಶ್ವರ ವಿದ್ಯಾಪೀಠದಲ್ಲಿ ನೌಕರನಾಗಿದ್ದು, ಅವರನ್ನು ಕಾನೂನುಬಾಹಿರವಾಗಿ ಶ್ರೀಗಳು ಹೊರ ಹಾಕಿದ್ದಾರೆ ಎಂದು ಆರೋಪಿಸಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶಗೌಡ ಮಾತನಾಡಿ, ವಿವಿಧ ಸಮುದಾಯಗಳಿಗೆ ಸೇರಿದ ಭಕ್ತರನ್ನು ಒಗ್ಗೂಡಿಸಿ ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಮಾಡಬೇಕಾದ ಶ್ರೀಗಳು, ಅಕ್ರಮವಾಗಿ ಜಮೀನು ಕಬಳಿಸುವ ಕೆಲಸ ಮಾಡುತ್ತಿರುವುದು ಅಕ್ಷಮ್ಯ ಎಂದು ಬೇಸರ ವ್ಯಕ್ತಪಡಿಸಿದರು.
ಪ.ಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಶಿವನಗೌಡ ಬನ್ನಪ್ಪಗೌಡ್ರ, ಸಂಗಪ್ಪ ಕೊಪ್ಪಳ, ರವಿತೇಜ ಅಧಿಕಾರಿ ಇತರರು ಮಾತನಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ಸಿದ್ರಾಮೇಶ ಬೇಲೇರಿ, ಮಂಜುನಾಥ ಬೇಲೇರಿ, ಅಪ್ಪಣ್ಣ ಬನ್ನಿಮರದ, ಸಂಗಪ್ಪ ಹಳ್ಳಿ, ಎಸ್.ಕೆ.ದಾನಕೈ, ಪಿ.ಟಿ.ಉಪ್ಪಾರ, ಮುದಕಪ್ಪ ನರೆಗಲ್, ಕುಮಾರ ಹಡಪದ, ಉಮೇಶಗೌಡ ಮಾಲಿಪಾಟೀಲ್, ಕುಬೇರಗೌಡ ಮಾಲಿಪಾಟೀಲ್, ಕಲ್ಲಪ್ಪ ಗಾಂಜಿ ಹಾಗೂ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.