ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ದೊಡ್ಡನಗೌಡ ಲಿಂಗಾಯತರ ನಾಯಕ’

ಕಾಂಗ್ರೆಸ್‌ ಆರೋಪಕ್ಕೆ ಬಿಜೆಪಿ ಖಂಡನೆ
Published 13 ಜೂನ್ 2024, 6:51 IST
Last Updated 13 ಜೂನ್ 2024, 6:51 IST
ಅಕ್ಷರ ಗಾತ್ರ

ಕುಷ್ಟಗಿ: ‘ಶಾಸಕ ದೊಡ್ಡನಗೌಡ ಪಾಟೀಲ ತಾಲ್ಲೂಕಿನ ವೀರಶೈವ ಲಿಂಗಾಯತರಿಗೆ ಪ್ರಶ್ನಾತೀತ ನಾಯಕ. ಅವರನ್ನು ಹೊರತುಪಡಿಸಿದರೆ ಆ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಬಿಜೆಪಿ ಹೇಳಿದೆ.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕು ಬಿಜೆಪಿ ಅಧ್ಯಕ್ಷ ಮಹಾಂತೇಶ ಬದಾಮಿ, ಪ್ರಮುಖರಾದ ರವಿಕುಮಾರ ಹಿರೇಮಠ, ಕೆ.ಮಹೇಶ ಇತರರು, ಲಿಂಗಾಯತ ನಾಯಕತ್ವವನ್ನು ಶಾಸಕ ದೊಡ್ಡನಗೌಡ ಪಾಟೀಲ ಬೆಳೆಯಲು ಬಿಡುತ್ತಿಲ್ಲ ಎಂದು ಕಾಂಗ್ರೆಸ್‌ ಮುಖಂಡರು ಮತ್ತು ಡಿಸಿಸಿ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಅವರ ಬೆಂಬಲಿಗರು ಈಚೆಗೆ ನೀಡಿದ ಹೇಳಿಕೆಯನ್ನು ಖಂಡಿಸಿದರು.

‘ವೀರಶೈವ ಲಿಂಗಾಯತ ಸಮುದಾಯದ ಬಗ್ಗೆ ಬಯ್ಯಾಪುರ ಮತ್ತಿರರು ಪದೇಪದೇ ಅಪಾರ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. ವಾಸ್ತವದಲ್ಲಿ ಲಿಂಗಾಯತ ಸಮುದಾಯವನ್ನು ತುಳಿಯುತ್ತ ಬಂದಿರುವವರೇ ಅವರು. ರುದ್ರಭೂಮಿಯನ್ನೂ ಕೊಡಿಸಲು ಸಾಧ್ಯವಾಗದ ಬಯ್ಯಾಪುರ ಲಿಂಗಾಯತ ಸಮುದಾಯಕ್ಕೆ ನೀಡಿರುವ ಕೊಡುಗೆ ಶೂನ್ಯ. ನಿಜವಾಗಿಯೂ ಅಷ್ಟೊಂದು ಪ್ರೇಮ ಇದ್ದಿದ್ದರೆ ಹಿಂದೆ ವಿಧಾನಪರಿಷತ್ತಿನ ಚುನಾವಣೆಯಲ್ಲಿ ತಮ್ಮ ಅಣ್ಣನ ಮಗನ ಬದಲು ಕಾಂಗ್ರೆಸ್‌ ಪಕ್ಷದಲ್ಲಿದ್ದ ಲಿಂಗಾಯತರಿಗೆ ಅವಕಾಶ ಕಲ್ಪಿಸಬೇಕಿತ್ತು’ಎಂದರು.

‘ಬಯ್ಯಾಪುರ ಅವರಿಗೆ ಲಿಂಗಾಯತ ಸಮುದಾಯದ ಬಗ್ಗೆ ಅಭಿಮಾನ ಇದ್ದಿದ್ದರೆ 2008ರಲ್ಲಿ ಈ ಕ್ಷೇತ್ರಕ್ಕೆ ತಾವು ಕಾಲಿಟ್ಟು ಕೆ.ಶರಣಪ್ಪ ಅವರನ್ನು ಸೋಲಿಸುತ್ತಿರಲಿಲ್ಲ’ ಎಂದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಬೇರೆ ಬೇರೆ ಕಾರಣಗಳೂ ಇವೆ ಎಂದ ಕೆ.ಮಹೇಶ್‌, ಶಾಸಕ ದೊಡ್ಡನಗೌಡ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಬಹಳಷ್ಟು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ನಮ್ಮ ಕುಟುಂಬ ಮೊದಲಿನಿಂದಲೂ ಪಕ್ಷ ನಿಷ್ಠೆ ಮರೆತಿಲ್ಲ. ಆದರೆ ಮತದಾರರನ್ನು ಸೂಕ್ತ ರೀತಿಯಲ್ಲಿ ತಲುಪಲು ನಮಗೆ ಸಾಧ್ಯವಾಗಲಿಲ್ಲ. ಕುರುಬ ಸಮುದಾಯ ಹೆಚ್ಚಿಗೆ ಇರುವ ಅನೇಕ ಮತಗಟ್ಟೆಗಳಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿವೆ. ವಸ್ತುಸ್ಥಿತಿ ಹೀಗಿದ್ದರೂ ಸೋಲಿಗೆ ದೊಡ್ಡನಗೌಡರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.

ಪ್ರಮುಖರಾದ ಶಶಿಧರ ಕವಲಿ, ಜಿ.ಕೆ.ಹಿರೇಮಠ, ವೀರಣ್ಣ ಗಜೇಂದ್ರಗಡ, ಬಾಲಪ್ಪ ಚಾಕ್ರಿ, ಸಂಗಪ್ಪ ಲಮಾಣಿ, ಪ್ರಭುಶಂಕರಗೌಡ, ಸುರೇಶ ಸೇಬಿನಕಟ್ಟಿ, ಈರಣ್ಣ ಸೊಬರದ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT