ಗುರುವಾರ , ಡಿಸೆಂಬರ್ 2, 2021
19 °C
ಕಳ್ಳರಿಂದ ವಶಪಡಿಸಿಕೊಂಡ ವಸ್ತುಗಳು ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು

‘ಆಮಿಷಗಳಿಗೆ ಒಳಗಾಗಿ ಮೋಸ ಹೋಗದಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ನಮ್ಮ ಸ್ವತ್ತಾದ ಯಾವುದೇ ವಸ್ತುಗಳಿಗೆ ನಾವೇ ಜವಾಬ್ದಾರರಾಗಿರಬೇಕು. ನಮ್ಮ ಜವಾಬ್ದಾರಿಯನ್ನು ಇನ್ನೊಬ್ಬರ ಮೇಲೆ ಹಾಕಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಹೇಳಿದರು.

ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ 2020 ಮತ್ತು 2021ನೇ ಸಾಲಿನಲ್ಲಿ ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತನ್ನು ವಾರಸುದಾರಿರಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರು ಯಾವುದೇ ಊರಿಗೆ, ಮದುವೆ ಮತ್ತು ಜಾತ್ರೆಗಳಿಗೆ ಹೋಗುವಾಗ ತಮ್ಮ ಮನೆ ಮತ್ತು ಇತರ ಸ್ವತ್ತಿನ ಕುರಿತು ಎಚ್ಚರಿಕೆಯಿಂದ ಇರಬೇಕು. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗಿ ಸಾರ್ವಜನಿಕರು ಮೋಸ ಹೋಗಬಾರದು ಎಂದರು.

ನಮ್ಮ ಅಧಿಕಾರಿಗಳ ಶ್ರಮದಿಂದ ಕಾನೂನು ಬದ್ದವಾಗಿ ವಶಪಡಿಸಿಕೊಂಡಿರುವ ಕಳ್ಳತನವಾದ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುತ್ತಿದ್ದು, 2020 ಮತ್ತು 2021 ರ ಅಕ್ಟೋಬರ್ ಮಾಹೆವರೆಗಿನ ಕೊಪ್ಪಳ ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳಲ್ಲಿ ವರದಿಯಾಗಿದ್ದ ಸ್ವತ್ತಿನ ಪ್ರಕರಣಗಳನ್ನು ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಪ್ರಾಮಾಣಿಕ ಪ್ರಯತ್ನದಿಂದ ಪತ್ತೆ ಮಾಡಲಾಗಿದೆ ಎಂದರು.

ನಮ್ಮ ಬೆರಳಚ್ಚು ಅಧಿಕಾರಿಯಾದ ಚಂದ್ರಶೇಖರ್ ಅವರು ಸ್ವಯಂ ಆಸಕ್ತಿಯಿಂದ ಹಲವಾರು ಪ್ರಕರಣಗಳನ್ನು ಭೇದಿಸಲು ವಿಶೇಷ ಆಸಕ್ತಿ ತೋರಿಸಿದ್ದಾರೆ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಈಗಾಗಲೇ ಸೂಕ್ತ ಬಹುಮಾನ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಮಾತನಾಡಿ, ಪೊಲೀಸರು ಹಗಲಿರುಳು ಶ್ರಮಪಟ್ಟು ಪ್ರಕರಣಗಳನ್ನು ಬೇಧಿಸುತ್ತಾರೆ. ಇಂತಹ ಪ್ರಕರಣಗಳಲ್ಲಿ ಸಾರ್ವಜನಿಕರ ಸಹಕಾರವು ನಮಗೆ ಮುಖ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಬಸ್ಸುಗಳಲ್ಲಿ ಜನರನ್ನು ಯಾಮಾರಿಸಿ ಕಳ್ಳತನ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಈ ಕುರಿತು ಎಚ್ಚರದಿಂದ ಇರಬೇಕು ಎಂದರು.

ಸ್ವತ್ತಿನ ವಾರಸುದಾರರಾದ ಗಂಗಾ ಹನುಮಂತಪ್ಪ ಗಡಗಿ ಮಾತನಾಡಿ, ನಮ್ಮ ಮನೆಯಲ್ಲಿ ಕಳ್ಳತನವಾದಾಗ ಪೋಲಿಸರಿಗೆ ಕರೆ ಮಾಡಿದೆ. ಅವರು ಬಂದು ಯಾರ ಮೇಲೆ ಸಂಶಯವಿದೆ ಎಂದರು. ಒಬ್ಬರ ಹೆಸರನ್ನು ಹೇಳಿದ 2 ತಾಸಿನಲ್ಲಿ ಅವನನ್ನು ಹಿಡಿದರು ಎಂದು ಪೊಲೀಸರ ಕಾರ್ಯಕ್ಕೆ ಧನ್ಯವಾದ ತಿಳಿಸಿದರು.

ಇನ್ನೊಬ್ಬ ವಾರಸುದಾರರಾದ ವೆಂಕಟೇಶ ಅಮರ ಜ್ಯೋತಿ ಮಾತನಾಡಿ, ನಮ್ಮ ಮನೆಯಲ್ಲಿ ಕೆಲಸ ಮಾಡುವವನೇ ಕಳ್ಳತನ ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದರು. ಹಾಗಾಗಿ ನಾವು ಯಾವಾಗಲೂ ಎಚ್ಚರದಿಂದ ಇರಬೇಕು ಎಂದರು.

ಡಿವೈಎಸ್ಪಿ ಗೀತಾ ಬೇನಾಳ, ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಪೊಲೀಸ್ ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್ ಹಾಗೂ ಪೊಲೀಸ್ ಕಾನ್‌ಸ್ಟೆಬಲ್‌ಗಳು ಮತ್ತು ಸ್ವತ್ತಿನ ವಾರಸುದಾರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು