ಸೋಮವಾರ, ಆಗಸ್ಟ್ 8, 2022
22 °C
ಪ್ರಯಾಣಿಕರಿಗೆ ನೆರಳು ನೀಡುವ ಗಿಡ, ಮರಗಳು: ಹುತಾತ್ಮ ಯೋಧರ ಸ್ಮರಣಾರ್ಥ ಸಸಿ ನಾಟಿ

ಮುನಿರಾಬಾದ್: ಯೋಧರ ಸ್ಮರಣಾರ್ಥ 42 ಗಿಡ ನೆಟ್ಟ ರೈಲ್ವೆ ಇಲಾಖೆ ಸಿಬ್ಬಂದಿ

ಗುರುರಾಜ ಅಂಗಡಿ Updated:

ಅಕ್ಷರ ಗಾತ್ರ : | |

ಮಕ್ಕಳೊಂದಿಗೆ ಚುನ್ನಿಲಾಲ್‌

ಹುಲಿಗಿ (ಮುನಿರಾಬಾದ್): ಮುನಿರಾಬಾದ್ ರೈಲು ನಿಲ್ದಾಣದ ಆವರಣ ಪ್ರವೇಶಿದ ತಕ್ಷಣ ಗಿಡ, ಮರಗಳು ಸ್ವಾಗತಿಸುತ್ತವೆ. ಇದಕ್ಕೆ ಕಾರಣ ಇಲಾಖೆಯ ಸಿಬ್ಬಂದಿ ಚುನ್ನಿಲಾಲ್‌.

ಇಲ್ಲಿನ ನಿಲ್ದಾಣದಲ್ಲಿ ಕಮರ್ಷಿಯಲ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸಿದ ಚುನ್ನಿಲಾಲ್ ಮೂಲತಃ ರಾಜಸ್ಥಾನದ ಪಾಲಿ ಜಿಲ್ಲೆಯ ಕನೆಲಾವ್ ಗ್ರಾಮದವರು.

ಸುಮಾರು ಎಂಟು ವರ್ಷ ಇಲ್ಲಿನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸಿದ ಇವರಿಗೆ ಪರಿಸರ ಮತ್ತು ಯೋಧರ ಮೇಲೆ ಅಪಾರ ಅಭಿಮಾನ.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥ ಅವರು ಸುಮಾರು 42 ಗಿಡಗಳನ್ನು ನೆಟ್ಟಿದ್ದಾರೆ.

ಹುಟ್ಟುಹಬ್ಬದ ಸಂದರ್ಭದಲ್ಲಿ ಕೇಕ್ ಕತ್ತರಿಸುವ ಸಂಪ್ರದಾಯ ವಿರೋಧಿಸುವ ಚುನ್ನಿಲಾಲ್, ತಮ್ಮ ಇಬ್ಬರು ಹೆಣ್ಣು ಮಕ್ಕಳ ಹುಟ್ಟುಹಬ್ಬದ ಪ್ರಯುಕ್ತ ನಿಲ್ದಾಣದ ಎರಡೂ ಪ್ಲಾಟ್‌ಫಾರ್ಮ್‌ ಪಕ್ಕದಲ್ಲಿ ಸಸಿ ನೆಟ್ಟು ಪೋಷಿಸುತ್ತಿದ್ದಾರೆ.

‘ಪರಿಸರ ದಿನದ ಸಂದರ್ಭದಲ್ಲಿ ಸಸಿ ನೆಟ್ಟು ಮರೆತು ಬಿಡುವುದಲ್ಲ. ಅವುಗಳ ಪೋಷಣೆ ಮಾಡುತ್ತಿರುವ ಸಿಬ್ಬಂದಿ ಕಾರ್ಯ ಶ್ಲಾಘನೀಯ’ ಎಂದು ಉಪನ್ಯಾಸಕ ಬಸವರಾಜ ಮೇಟಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಬಿಡುವಿನ ವೇಳೆಯಲ್ಲಿ ಮಕ್ಕಳ ಜತೆ ಗಿಡಗಳಿಗೆ ನೀರುಣಿಸುವ ಚುನ್ನಿಲಾಲ್ ಸುಮಾರು ₹40-50 ಸಾವಿರ ಖರ್ಚು ಮಾಡಿದ್ದಾರೆ. ಗಿಡಗಳ ಆರೈಕೆಗೆ ವ್ಯಕ್ತಿಯೊಬ್ಬರನ್ನು ನೇಮಿಸಿ ಪ್ರತಿ ತಿಂಗಳು ಅವರಿಗೆ ಸಂಬಳ ಕೂಡ ನೀಡುತ್ತಿದ್ದಾರೆ. ಸುಮಾರು 8 ವರ್ಷಗಳಿಂದ ಗಿಡ-ಮರಗಳ ಸೇವೆ ಮಾಡುತ್ತಿರುವ ಅವರು, ನೆರಳು ನೀಡುತ್ತಿರುವ ಮರಗಳನ್ನು ಕಂಡು ಸಂತಸವಾಗುತ್ತದೆ ಎಂದು ಸಂಭ್ರಮ ಹಂಚಿಕೊಂಡರು.

ಯೋಧರ ಸ್ಮರಣಾರ್ಥ 42, ಮಕ್ಕಳ ಜನ್ಮದಿನದ ಸವಿನೆನಪಿಗಾಗಿ 66 ಸೇರಿ ಒಟ್ಟು 88 ಗಿಡಗಳು ರೈಲು ನಿಲ್ದಾಣ ಮತ್ತು ಅದರ ಮುಂಭಾಗದಲ್ಲಿ ಬೆಳೆದು ನಿಂತಿರುವುದೇ ಚುನ್ನಿಲಾಲ್ ಅವರ ಪರಿಸರ ಪ್ರಜ್ಞೆಗೆ ಸಾಕ್ಷಿಯಾಗಿದೆ.

ಇಲಾಖೆಗೆ ಸೇರಿದ ಮೊದಲು 8 ವರ್ಷ ಮುನಿರಾಬಾದ್‌ನಲ್ಲಿ ಸೇವೆ ಸಲ್ಲಿಸಿದ ಅವರು, ಕಳೆದ ಒಂದು ವರ್ಷದಿಂದ ಬಳ್ಳಾರಿ ಜಿಲ್ಲೆಯ ತೋರಣಗಲ್ ನಿಲ್ದಾಣದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮರಗಳ ಆರೈಕೆ ಮಾತ್ರ ನಿರಂತರವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು