ಭಾನುವಾರ, ಏಪ್ರಿಲ್ 18, 2021
33 °C
ಮತದಾರರ ಪಟ್ಟಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ರಶ್ಮಿ ಮಹೇಶ ಸೂಚನೆ

ಕೊಪ್ಪಳ: ಮತದಾರರ ಅಂತಿಮ ಪಟ್ಟಿ ಪ್ರಕಟಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿ ಅನ್ವಯ ಮತದಾರರ ಪಟ್ಟಿ ಪರಿಷ್ಕರಣೆ ಅವಧಿ ಮುಕ್ತಾಯಗೊಂಡಿದ್ದು, ವೇಳಾಪಟ್ಟಿಯಂತೆ ಜ.18 ರಂದು ಜಿಲ್ಲೆಯಲ್ಲಿ ಮತದಾರರ ಅಂತಿಮ ಪಟ್ಟಿ ಪ್ರಕಟಿಸಲು ಅಗತ್ಯ ಕ್ರಮ ಕೈಗೊಳ್ಳಿ’ ಎಂದು ಮತದಾರರ ಪಟ್ಟಿ ವೀಕ್ಷಕಿ ವಿ.ರಶ್ಮಿ ಮಹೇಶ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮತದಾರರ ಪಟ್ಟಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜ.1, 2021 ಕ್ಕೆ ಅನ್ವಯವಾಗುವಂತೆ 18 ವರ್ಷ ಪೂರ್ಣಗೊಂಡ ಯುವ ಮತದಾರರು ಹಾಗೂ ಮರಣ ಹೊಂದಿದ, ಬಿಟ್ಟು ಹೋದವರ ಹೆಸರುಗಳನ್ನು ಪರಿಷ್ಕರಿಸಿ ಮತದಾರರ ಪಟ್ಟಿ ಸಿದ್ಧಪಡಿಸಲು ಭಾರತ ಚುನಾವಣಾ ಆಯೋಗದಿಂದ ಸೂಚನೆ ನೀಡಿತ್ತು. ವೇಳಾಪಟ್ಟಿಯನ್ವಯ ಎಲ್ಲ ಕ್ರಮಗಳನ್ನು ಕೈಗೊಂಡು ಮಾಹಿತಿ ಸಂಗ್ರಹಿಸಲಾಗಿದೆ’ ಎಂದರು.

ಮಿಂಚಿನ ನೋಂದಣಿ ಮೂಲಕ ಹೊಸ ಮತದಾರರ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದೆ. ಅದರಂತೆ ಆಯೋಗದ ನಿರ್ದೇಶನದಂತೆ ಜ.18 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಬೇಕಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅಂತಿಮಗೊಂಡ ಪಟ್ಟಿಯನ್ನು ತಹಶೀಲ್ದಾರರಿಗೆ ನೀಡಬೇಕು. ತಹಶೀಲ್ದಾರರು ಬೂತ್ ಮಟ್ಟದ ಅಧಿಕಾರಿಗಳಿಗೆ ತಲುಪಿಸಿ, ಮತಗಟ್ಟೆಗಳಲ್ಲಿ, ತಹಶೀಲ್ದಾರರ ಕಚೇರಿಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಸೂಚನೆ ನೀಡಿದರು.

‘ನಮೂನೆ-6 ರಲ್ಲಿ ಅಂಗವಿಕಲರ ಹೆಸರು ಸೇರ್ಪಡೆಗೆ ಮಾಹಿತಿಯನ್ನು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಿಂದ ಪಡೆದು, ಸ್ವಮೋಟೋದಿಂದ ಹೆಸರು ಸೇರ್ಪಡೆ ಮಾಡಬೇಕು. ಗಣ್ಯ ವ್ಯಕ್ತಿಗಳು, ಜನಪ್ರತಿನಿಧಿಗಳು, ಸಾಹಿತಿಗಳು ಮುಂತಾದ ಪ್ರಮುಖರ ಹಾಗೂ ಅವರ ಕುಟುಂಬದವರ ಹೆಸರು ಸೇರ್ಪಡೆ, ಪರಿಷ್ಕರಣೆ ಕುರಿತು ಕ್ರಮ ಕೈಗೊಳ್ಳಲು ಈ ಹಿಂದೆ ಸೂಚನೆ ನೀಡಲಾಗಿತ್ತು. ಅದನ್ನು ಇನ್ನೊಮ್ಮೆ ಪರಿಶೀಲಿಸಿಕೊಂಡು ಅಂತಿಮ ಪಟ್ಟಿಯನ್ನು ಪ್ರಕಟಿಸಿ. ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ ನಂತರ ಅತಿ ಶೀಘ್ರದಲ್ಲಿ ಮತದಾರರ ಚೀಟಿ ವಿತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಸೇರಿದಂತೆ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು