ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ | ಸೊಸೆ ಹೆಸರಿಗೆ ಸರ್ಕಾರಿ ಜಾಗ: ಕಾರ್ಯದರ್ಶಿ ಕುತಂತ್ರ

ಅಂಟರಠಾಣಾ ಗ್ರಾ.ಪಂ ಪಿಡಿಒ ಹೆಸರಿನಲ್ಲಿ ನಕಲಿ ಸಹಿ, ತನಿಖೆಗೆ ಗ್ರಾಮಸ್ಥರ ಒತ್ತಾಯ
Published : 14 ಆಗಸ್ಟ್ 2024, 6:05 IST
Last Updated : 14 ಆಗಸ್ಟ್ 2024, 6:05 IST
ಫಾಲೋ ಮಾಡಿ
Comments

ಕುಷ್ಟಗಿ: ನಕಲಿ ದಾಖಲೆ ಸೃಷ್ಟಿಸಿ ಮತ್ತು ಅಭಿವೃದ್ಧಿ ಅಧಿಕಾರಿ ಸಹಿ ನಕಲು ಮಾಡಿದ ತಾಲ್ಲೂಕಿನ ಅಂಟರಠಾಣಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಂಗನಗೌಡ ರಾಯನಗೌಡರ ಎಂಬುವರು ಸರ್ಕಾರಿ ಜಾಗವನ್ನು ತಮ್ಮ ಸೊಸೆಯ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.

ಯರಿಗೋನಾಳ ಗ್ರಾಮವು, ಅಂಟರಠಾಣಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಕಾರ್ಯದರ್ಶಿ ಸಂಗನಗೌಡ ಅವರು, ಯರಿಗೋನಾಳದ ನಿವಾಸಿ ಆಗಿದ್ದಾರೆ. ಆದರೆ ಪಂಚತಂತ್ರ ವೆಬ್‌ಸೈಟ್‌ದಲ್ಲಿ ಪಿಡಿಒ ಲಾಗಿನ್‌ ಐಡಿಯನ್ನು ದುರ್ಬಳಕೆ ಮಾಡಿಕೊಂಡು ಮನಬಂದಂತೆ ನಕಲಿ ದಾಖಲೆ ಸೃಷ್ಟಿಸಿ, ಗ್ರಾಮದ ಸಾರ್ವಜನಿಕ ಜಾಗವನ್ನು ತಮ್ಮ ಕಿರಿಯ ಸಹೋದರನ ಪತ್ನಿ ಶಶಿಕಲಾ ರಾಯನಗೌಡ್ರ ಎಂಬುವರ ಹೆಸರಿನಲ್ಲಿ ಇ-ಸ್ವತ್ತು ಅರ್ಜಿಯ ಮೂಲಕ ಅಕ್ರಮವಾಗಿ ಖಾತಾ ಬದಲಾವಣೆ ಮಾಡಿ, ಅಕ್ರಮ ಎಸಗಿದ್ದಾರೆ ಎಂದು ದೂರು ಬಂದಿದೆ.

ಈ ಕುರಿತು ಗ್ರಾಮಸ್ಥರಾದ ವಕೀಲ ಶ್ರೀಕಾಂತ ಅಮ್ಮಣ್ಣವರ, ಮುತ್ತಪ್ಪ ಚಲವಾದಿ, ದುರುಗೇಶ ನವಲಹಳ್ಳಿ, ಬಸವರಾಜ ಬೇವಿನಕಟ್ಟಿ ಎಂಬುವವರು ಮಂಗಳವಾರ ಇಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿಗೆ ದಾಖಲೆಗಳ ಸಹಿತ ದೂರು ಸಲ್ಲಿಸಿದ್ದು, ಕಾರ್ಯದರ್ಶಿ ಸಂಗನಗೌಡ ಅವರನ್ನು ಅಂಟರಠಾಣಾ ಪಂಚಾಯಿತಿಯಿಂದ ವರ್ಗ ಮಾಡಬೇಕು. ಕರ್ತಲೋಪದ ಆಧಾರದಲ್ಲಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಂತ್ರಗಾರಿಕೆ: ಸರ್ಕಾರಿ ಜಾಗ ಲಪಟಾಯಿಸಲು ಕಾರ್ಯದರ್ಶಿ ವಿವಿಧ ರೀತಿಯಲ್ಲಿ ತಂತ್ರಗಾರಿಕೆ ನಡೆಸಿರುವುದು ಗೊತ್ತಾಗಿದೆ. ಆಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಅಮರೇಶ ಕರಡಿ ಅವರ ಗಮನಕ್ಕೆ ಬಾರದ ರೀತಿಯಲ್ಲಿ ಪಂಚತಂತ್ರ ಐಡಿ ಮೂಲಕ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಶಶಿಕಲಾ ಅವರ ಹೆಸರಿನಲ್ಲಿ ಇ-ಸ್ವತ್ತು ದಾಖಲೆ ಮೂಲಕ ಪಂಚಾಯಿತಿಯಿಂದ ಸರ್ವೆ ಇಲಾಖೆಗೆ ಸಲ್ಲಿಸಿದ ಅರ್ಜಿಗೆ ನೋಟಿಸ್‌ ಅನ್ನು ಸ್ವತಃ ಸಿದ್ಧಪಡಿಸಿ ತಮ್ಮದೇ ಮೊಬೈಲ್‌ ಸಂಖ್ಯೆ ನೀಡಿದ್ದಾರೆ. ಪಿಡಿಒ ಮೊಹರು ಬಳಸಿ, ಅದಕ್ಕೂ ತಾವೇ ಸಹಿ ಹಾಕಿದ್ದಾರೆ. ಪೂರಕ ದಾಖಲೆ ಇಲ್ಲದಿದ್ದರೂ ಪಿತ್ರಾರ್ಜಿತ ಆಸ್ತಿ ಎಂದು ನಮೂದಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಳೆದ ವರ್ಷದ ಸೆಪ್ಟೆಂಬರ್‌ 17ರಂದು (ರಜೆ ದಿನ ಇದ್ದರೂ) ಸರ್ವೆ ನಡೆಸುವ ಕುರಿತು ಅರ್ಜಿದಾರಳಾದ ಶಶಿಕಲಾ ಅವರ ಹೆಸರಿಗೆ ನೀಡಿದ ನೋಟಿಸ್‌ನಲ್ಲೂ ಪಿಡಿಒ ಹೆಸರಿನಲ್ಲಿ ತಾವೇ ಸಹಿ ಮಾಡಿರುವ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ. ನಂತರ ಕಳೆದ ಮೇ 30ರಂದು ಆನ್‌ಲೈನ್ ದಾಖಲೆ (ನಮೂನೆ-9) ವಿತರಿಸಲಾಗಿದೆ. ಅಲ್ಲದೆ ಭೂ ಮಾಪನ ಅಧಿಕಾರಿ ನೀಡಿದ ದಾಖಲೆಯಲ್ಲಿ ‘ಅಭಿವೃದ್ಧಿ ಅಧಿಕಾರಿ ಸಮಕ್ಷಮದಲ್ಲೇ ಸರ್ವೆ ನಡೆಸಲಾಗಿದೆ’ ಎಂಬ ಮಾಹಿತಿ ಇರುವುದು ಅಚ್ಚರಿ ಮೂಡಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹಿಂದಿನ ಅಭಿವೃದ್ಧಿ ಅಧಿಕಾರಿ ಅಮರೇಶ ಕರಡಿ, ಸಹಿ ತಮ್ಮದಲ್ಲ, ಸರ್ಕಾರಿ ಜಾಗದ ಆಸ್ತಿ ಹಕ್ಕು ಬದಲಾವಣೆ.. ಹೀಗೆ ಯಾವ ವಿಚಾರವೂ ತಮ್ಮ ಗಮನಕ್ಕೆ ಬಂದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕಾರ್ಯದರ್ಶಿ ನಕಲಿ ದಾಖಲೆ ಸೃಷ್ಟಿಸಿರುವ ಬಗ್ಗೆ ಪೂರಕ ದಾಖಲೆ ಸಹಿತ ದೂರು ಬಂದಿವೆ. ಮೇಲ್ನೋಟಕ್ಕೆ ಕರ್ತವ್ಯಲೋಪ ಎಸಗಿರುವುದು ಕಂಡುಬಂದಿದ್ದು ತನಿಖೆಗೆ ಕ್ರಮಕೈಗೊಳ್ಳಲಾಗುತ್ತದೆ
-ನಿಂಗನಗೌಡ ಪಾಟೀಲ ತಾ.ಪಂ ಪ್ರಭಾರ ಇಒ
ನನ್ನ ಹೆಸರಿನಲ್ಲಿ ಕಾರ್ಯದರ್ಶಿ ನಕಲಿ ಸಹಿ ಮಾಡಿರುವುದು ಮತ್ತು ಆ ಜಾಗ ಸರ್ಕಾರದ ಆಸ್ತಿ ಎಂಬುದೂ ಗೊತ್ತಿಲ್ಲ. ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಮೇಲಧಿಕಾರಿಗಳಿಗೆ ಪತ್ರ ಬರೆಯುತ್ತೇನೆ
- ಅಮರೇಶ ಕರಡಿ ಪಿಡಿಒ

40 ಆಸ್ತಿಗಳಿಗೆ ಮೂಲದಾಖಲೆಗಳೇ ಇಲ್ಲ!

ಮೂಲ ದಾಖಲೆಗಳಿಲ್ಲದೆ ಸೊಸೆ ಹೆಸರಿನಲ್ಲಿ ಖಾತಾ ಬದಲಾವಣೆ ಮಾಡಿದ ಬಗ್ಗೆ ತಮ್ಮ ವಿರುದ್ಧದ ದೂರಿನ ಕುರಿತು ‘ಪ್ರಜಾವಾಣಿ’ಗೆ ಸಂಪರ್ಕಿಸಿದರೆ ಕಾರ್ಯದರ್ಶಿ ಸಂಗನಗೌಡ ರಾಯನಗೌಡ್ರ ಸ್ಪಷ್ಟ ಮಾಹಿತಿ ನೀಡಲಿಲ್ಲ. ಆದರೆ ಅಂಟರಠಾಣಾ ಪಂಚಾಯಿತಿಯಲ್ಲಿ 40ಕ್ಕೂ ಅಧಿಕ ಆಸ್ತಿಗಳಿಗೆ ಮೂಲದಾಖಲೆಗಳೇ ಇಲ್ಲ. ಮತ್ತು ಮೂಲ ದಾಖಲೆಗಳು ಇಲ್ಲದ ಕಾರಣ ತಮ್ಮ ಸೊಸೆ ಹೆಸರಿನಲ್ಲಿ ಖಾತಾ ಬದಲಾವಣೆಯಾಗಿದ್ದನ್ನು ರದ್ದುಪಡಿಸಲಾಗಿದೆ ಎಂದು ಹೇಳಿದರು. ಈ ಕುರಿತು ಪ್ರತಿಕ್ರಿಯಿಸಿದ ಪಿಡಿಒ ಅಮರೇಶ  ‘ಒಂದು ಬಾರಿ ಖಾತಾ ಬದಲಾವಣೆಯಾದರೆ ಅದನ್ನು ರದ್ದುಪಡಿಸುವುದು ಸುಲಭದ ಕೆಲಸವಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT