ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ | ನಿರಂತರ ಮಳೆ: ಜಲಮೂಲಗಳಿಗೆ ಜೀವಕಳೆ

ತುಂಬುತ್ತಿರುವ ಕೆರೆ, ನಾಲಾ ನರೇಗಾದಡಿ ಕೂಲಿಕಾರರಿಂದ ಹೂಳೆತ್ತುವಿಕೆ
ವಿಜಯ ಎನ್‌.
Published 19 ಜೂನ್ 2024, 5:11 IST
Last Updated 19 ಜೂನ್ 2024, 5:11 IST
ಅಕ್ಷರ ಗಾತ್ರ

ಗಂಗಾವತಿ: ನಿರಂತರವಾಗಿ ಸುರಿದ ಮಳೆಯಿಂದ ಕಾಲುವೆಗಳು ತುಂಬಿದ್ದು, ಕೆರೆಗಳಿಗೆ ಜೀವಕಳೆ ಬಂದಿದೆ. ತಾಲ್ಲೂಕಿನಲ್ಲಿ ನರೇಗಾದಡಿ ಹೂಳೆತ್ತಿದ ಕೆರೆಗಳು ಮಳೆ ನೀರಿನಿಂದ ಭರ್ತಿಯಾಗಿ ಕಂಗೊಳಿಸುತ್ತಿವೆ.

ಯಾವೆಲ್ಲ ಕೆರೆಗಳು ಭರ್ತಿ: ಗಂಗಾವತಿ ತಾಲ್ಲೂಕಿನ ಸೂರ್ಯನಾಯಕ ತಾಂಡಾ ಕೆರೆ, ಮಲ್ಲಾಪುರ ಬಳಿಗಾರ ಊಟಿಕೆರೆ, ಗಡ್ಡಿಕೆರೆ, ತಿರುಮಲಾಪುರ ಕೆರೆ, ಹಂಪಸದುರ್ಗಾದ ತುರುಕನಕೊಳ್ಳ, ಬಸವನದುರ್ಗಾದ ಡುಮ್ಕಿಕೊಳದಲ್ಲಿ ಮಳೆನೀರು ಸಂಗ್ರಹಗೊಂಡಿದೆ. ಚಿಕ್ಕಬೆಣಕಲ್, ಆಗೋಲಿ ಗ್ರಾಮದಲ್ಲಿ ಕೂಲಿಕಾರರು ಹೂಳೆತ್ತಿದ್ದ ಹಳ್ಳ, ನಾಲಾಗಳು ಮಳೆ ನೀರಿಗೆ ತುಂಬಿ ಹರಿಯುತ್ತಿವೆ. ವಿಠಲಾಪುರದಲ್ಲಿ ಕಂದಕು ಬದುಗಳಲ್ಲಿ ಮಳೆ ನೀರು ಇಂಗಿಸಲಾಗಿದ್ದು, ಮಣ್ಣಿನ ಸವಕಳಿ ತಡೆಯಲಾಗಿದೆ.

ಅಮೃತ ಸರೋವರ: ಎರಡು ವರ್ಷಗಳ ಹಿಂದೆ ವಿವಿಧ ಗ್ರಾ.ಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೆರೆಗಳನ್ನು ಅಮೃತ ಸರೋವರಗಳನ್ನಾಗಿಸಲು ಹೂಳು ತೆಗೆದು ಒಡ್ಡುಹಾಕಿ, ಪಿಚ್ಚಿಂಗ್ ಮಾಡಿ ಅಭಿವೃದ್ಧಿ ಸ್ಪರ್ಶ ನೀಡಲಾಗಿತ್ತು. ಈ ಕೆರೆಗಳಲ್ಲಿ ಈಗ ಅಪಾರ ಪ್ರಮಾಣದ ಮಳೆ ನೀರು ಸಂಗ್ರಹಗೊಂಡಿದ್ದು, ಭರ್ತಿಯಾಗಿದೆ. ಕೆರೆಗಳ ಸುತ್ತಲಿನ ರೈತರ ಜಮೀನುಗಳಲ್ಲಿನ ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಹೆಚ್ಚಿದೆ. ಪ್ರಸಕ್ತ 2024-25ನೇ ಸಾಲಿನಲ್ಲಿ ತಾಲ್ಲೂಕಿನ 18 ಗ್ರಾ.ಪಂ ವ್ಯಾಪ್ತಿಯಲ್ಲಿ ಒಟ್ಟು 5,03,249 ಮಾನವ ದಿನಗಳ ಸೃಜನೆಯಾಗಿದೆ.

ಸಂಘಟನೆಗಳಿಂದ ನೀರು ಪೂರೈಕೆ: ಬೇಸಿಗೆಯಲ್ಲಿನ ಬಿಸಿಲಿನ ತಾಪಮಾನಕ್ಕೆ ತಾಲ್ಲೂಕಿನಲ್ಲಿ ಸಣ್ಣ-ಪುಟ್ಟ ಕೆರೆಗಳು ಸಂಪೂರ್ಣ ಬತ್ತಿಹೋಗಿ, ಬೆಟ್ಟ-ಗುಡ್ಡಗಳಲ್ಲಿ ನಿವಾಸ ಮಾಡುವ ವನ್ಯಜೀವಿಗಳು ಹಾಗೂ ಮೇಯಲು ಹೋಗುವ ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯೆ ಉಂಟಾಗಿತ್ತು. ಇದನ್ನು ಮನಗಂಡ ಚಾರಣ ಬಳಗ, ಕ್ಲೀನ್ ಆಂಡ್ ಗ್ರೀನ್ ಪೋರ್ಸ್ ತಂಡ, ಪರಿಸರ ಪ್ರೇಮಿಗಳು ಸ್ವಯಂ ಪ್ರೇರಿತವಾಗಿ ವನ್ಯಜೀವಿಗಳಿಗೆ ಬೆಟ್ಟ-ಗುಡ್ಡಗಳ ಬಳಿಯ ಕೆರೆ, ಜಾನುವಾರುಗಳಿಗೆ ಗಂಗಾವತಿ ನಗರದ ಪ್ರಮುಖ ರಸ್ತೆ, ವಾರ್ಡ್‌ಗಳಲ್ಲಿ ತೊಟ್ಟಿಗಳನ್ನು ಇರಿಸಿ ನೀರು ಪೂರೈಸಿದ್ದವು. ಸದ್ಯ ಮಳೆಯಾಗಿರುವುದರಿಂದ ನೀರಿನ ಸಮಸ್ಯೆ ಪರಿಹಾರವಾದಂತಾಗಿದೆ.

ನರೇಗಾದಡಿ ತಾಲ್ಲೂಕಿನ ಗ್ರಾಮೀಣ ಭಾಗದ ಕೂಲಿಕಾರರು ಕೆರೆ, ನಾಲಾಗಳಲ್ಲಿ ಹೂಳೆತ್ತುವ ಕೆಲಸ ಮಾಡಿದ್ದು, ಮಳೆಗೆ ಸಣ್ಣ–ಸಣ್ಣ ಕಾಲುವೆ, ಹಳ್ಳ–ಕೊಳ್ಳ, ಗುಡ್ಡಗಾಡಿನ ಇಳಿಜಾರು ಪ್ರದೇಶದಿಂದ ಮಳೆ ನೀರು ಹರಿದು ಕೆರೆಗಳಲ್ಲಿ ಸಂಗ್ರಹವಾಗಿ ಪ್ರಾಣಿಗಳಿಗೆ, ಜಾನುವಾರುಗಳಿಗೆ ಕುಡಿಯಲು ಉಪಯೋಗವಾಗುವ ಜತೆಗೆ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆ.

ನಿರಂತರ ಮಳೆಗೆ ಕೆರೆಗಳು ಭರ್ತಿ ನೀರು ಸಂಗ್ರಹದಿಂದ ಅಂರ್ತಜಲ ಹೆಚ್ಚಳ ನರೇಗಾದಡಿ 5,03,249 ಮಾನವ ದಿನ ಸೃಜನೆ

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರಿಂದ ಕೆರೆ ನಾಲಾಗಳ ಹೂಳೆತ್ತಲು ಆದ್ಯತೆ ನೀಡಲಾಗಿತ್ತು. ಒಂದು ವಾರದಿಂದ ಉತ್ತಮ ಮಳೆ ಸುರಿದ ಪರಿಣಾಮ ಕೆರೆ ನಾಲಾಗಳು ತುಂಬಿ ಹರಿಯುತ್ತಿದ್ದು ಅಂತರ್ಜಲ ವೃದ್ಧಿಸುತ್ತಿದೆ.

-ಲಕ್ಷ್ಮೀದೇವಿ ತಾ.ಪಂ. ಇಒ ಗಂಗಾವತಿ

ಕೆರೆಗಳು ಇಲ್ಲದೆ ಹೋದರೆ ಮೂಕ ಪ್ರಾಣಿಗಳು ಕುಡಿಯಲು ನೀರಿಲ್ಲದೆ ಪರದಾಡುವ ಸ್ಥಿತಿ ಬೆಟ್ಟಗಳಲ್ಲಿದ್ದು ಉದ್ಯೋಗ ಖಾತ್ರಿಯಿಂದ ಕೆರೆಗಳು ನಿರ್ಮಾಣವಾಗಿ ಮಳೆನೀರು ಸಂಗ್ರಹವಾಗಿದ್ದು ಖುಷಿಯಾಗಿದೆ.

-ಹನುಮಂತ ಕನಕಾಪುರ ಕುರಿಗಾಹಿ ಆಗೋಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT