ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಕನೂರು | ಕಸ ವಿಲೇವಾರಿ ಸಮಸ್ಯೆ: ಪಟ್ಟಣದಲ್ಲಿ ನಿತ್ಯ 40 ಟನ್ ತ್ಯಾಜ್ಯ ಸಂಗ್ರಹ

ಮಂಜುನಾಥ್ ಅಂಗಡಿ
Published 7 ಜುಲೈ 2024, 6:59 IST
Last Updated 7 ಜುಲೈ 2024, 6:59 IST
ಅಕ್ಷರ ಗಾತ್ರ

ಕುಕನೂರು: ಪಟ್ಟಣದಲ್ಲಿ ನಿತ್ಯ ಸಂಗ್ರಹವಾಗುವ ತ್ಯಾಜ್ಯವನ್ನು ತಾಲ್ಲೂಕಿನ ಗಾವರಾಳ ಗ್ರಾಮದ ರಸ್ತೆಯ ಬದಿ ಸುರಿಯಲಾಗುತ್ತಿದ್ದು ಗ್ರಾಮದಲ್ಲಿ ರೋಗದ ಭೀತಿ ಎದುರಾಗಿದೆ.

70 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದ 19 ವಾರ್ಡ್‌ಗಳಲ್ಲಿ ನಿತ್ಯ 40 ಟನ್ ಕಸ ಸಂಗ್ರಹವಾಗುತ್ತದೆ. ಸದ್ಯ 20 ಕಿ.ಮೀ ವಿಸ್ತೀರ್ಣ ಹೊಂದಿರುವ ಪಟ್ಟಣದ ವ್ಯಾಪ್ತಿಗೆ ಮತ್ತಷ್ಟು ಪ್ರದೇಶಗಳು ಸೇರ್ಪಡೆಯಾಗುತ್ತಿದ್ದು ಕಸ ಉತ್ಪಾದನೆಯ ಪ್ರಮಾಣವೂ ಹೆಚ್ಚಲಿದೆ.

ಮಳೆಯಾದಾಗ ಹರಿಯುವ ನೀರಿನೊಂದಿಗೆ ಕಸದ ರಾಶಿ ಜಮೀನುಗಳ ಮೂಲಕ ಬೆಣಕಲ್ ಕೆರೆ ಸೇರುತ್ತಿದ್ದು ಕೆರೆ ನೀರು ಕಲುಷಿತಗೊಳ್ಳುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಗಾವರಾಳ ಗ್ರಾಮದ ಸರ್ವೆ ನಂ 98ರ ಸರ್ಕಾರಿ ಜಮೀನಿನಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ಸುತ್ತ ಜಮೀನು ಹೊಂದಿರುವ ರೈತರಿಗೆ ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಅಲ್ಲದೇ ಈ ರಸ್ತೆಯಲ್ಲಿ ತೆರಳುವವರು ದುರ್ವಾಸನೆಯಿಂದ ಮೂಗು ಮುಚ್ಚಿಕೊಮಡು ಅಡ್ಡಾಡುವ ಪರಿಸ್ಥಿತಿ ಎದುರಾಗಿದ್ದು ಇಲ್ಲಿ ಕಸ ವಿಲೇವಾರಿಗೆ ವಿರೋಧ ವ್ಯಕ್ರತವಾಗಿದೆ.

ಪೈಪ್‌ಲೈನ್ ಮೇಲೆ ತ್ಯಾಜ್ಯ ಸಂಗ್ರಹ: ತ್ಯಾಜ್ಯ ಸಂಗ್ರಹ ಸ್ಥಳದ ಹತ್ತಿರ ಪಟ್ಟಣ ಹಾಗೂ ಗಾವರಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 9 ಬೋರ್‌ವೆಲ್‌ಗಳ ಪೈಪ್‌ಲೈನ್ ಗಳ ಮೇಲೆ ಕಸ ಸುರಿಯಲಾಗಿದೆ. ಅಲ್ಲಲ್ಲಿ ಪೈಪ್‌ಲೈನ್ ಒಡೆದು ಕುಡಿಯುವ ನೀರಿನೊಂದಿಗೆ ಕಸ ಸೇರುತ್ತಿದ್ದು ಜನರು ರೋಗ ಭೀತರಾಗಿದ್ದಾರೆ. 

ತ್ಯಾಜ್ಯದಿಂದ ಉಂಟಾಗುತ್ತಿರುವ ಸಮಸ್ಯೆ ಪರಿಹಾರಕ್ಕೆ ಪಟ್ಟಣ ಪಂಚಾಯಿತಿ ಮುಂದಾಗಿಲ್ಲ. ಸಂಗ್ರಹವಾದ ತ್ಯಾಜ್ಯವನ್ನು ಬೇರೆಡೆ ವಿಲೇವಾರಿ ಮಾಡಲು ಕ್ರಮ ಕೈಗೊಂಡಿಲ್ಲ. ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ನಿರ್ಲಕ್ಷ್ಯ ತೋರಿದೆ ಎಂದು ಗ್ರಾಮಸ್ಥ ಅಶೋಕ್ ಚನ್ನಪನಹಳ್ಳಿ ದೂರಿದರು.

ಕಸ ವಿಲೇವಾರಿಗೆ ಜಾಗ ಖರೀದಿ ಮಾಡಲಾಗಿದೆ. ಆದರೆ ಸಂಪರ್ಕ ಕಲ್ಪಿಸುವ ರಸ್ತೆಯು ತಾಂತ್ರಿಕ ಸಮಸ್ಯೆಯಿಂದ ಬಗೆಹರಿಯುತ್ತಿಲ್ಲ. ಸದ್ಯದಲ್ಲೇ ಸಮಸ್ಯೆ ಇತ್ಯರ್ಥಗೊಳಿಸಿ ತ್ಯಾಜ್ಯ ಸ್ಥಳಾಂತರಗೊಳಿಸಲಾಗುವುದು
ರವಿ ಬಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT