ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಟ್ಕಾ ತಂದುಕೊಡದ ಕಾರಣಕ್ಕೆ ಬಾಲಕಿಯ ಕೊಲೆ! ಪ್ರಕರಣ ಭೇದಿಸಿದ ಕೊಪ್ಪಳ ಪೊಲೀಸರು

Published 16 ಜೂನ್ 2024, 13:05 IST
Last Updated 16 ಜೂನ್ 2024, 13:05 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ ಏಪ್ರಿಲ್‌ನಲ್ಲಿ ನಡೆದಿದ್ದ ಏಳು ವರ್ಷದ ಅನುಶ್ರೀ ಮಡಿವಾಳರ ಎಂಬ ಬಾಲಕಿಯ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಪತ್ತೆ ಹೆಚ್ಚಿದ್ದು, ಗುಟ್ಕಾ ತಂದುಕೊಡದ ಕಾರಣಕ್ಕೆ ಆರೋಪಿ ಕೃತ್ಯ ಎಸಗಿದ್ದಾನೆ ಎನ್ನುವ ಮಾಹಿತಿ ಗೊತ್ತಾಗಿದೆ.

ಆರೋಪಿ ಅದೇ ಗ್ರಾಮದ ಸಿದ್ದಲಿಂಗಯ್ಯ ನಾಯ್ಕಲ್‌ ಬಾಲಕಿಯ ಮನೆ ಪಕ್ಕದಲ್ಲಿಯೇ ವಾಸವಾಗಿದ್ದ. ಗ್ರಾಮದ 7ನೇ ವಾರ್ಡ್‌ನ ರಾಘವೇಂದ್ರ ಮಡಿವಾಳರ ಅವರ ಪುತ್ರಿ ಅನುಶ್ರೀ ಏಪ್ರಿಲ್ 19ರಂದು ಮಧ್ಯಾಹ್ನ ಕಾಣೆಯಾಗಿದ್ದಳು. ಎರಡು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಳು.

‘ಘಟನೆ ನಡೆದ ದಿನ ಬಾಲಕಿಯ ಮನೆಯ ಸುತ್ತಮುತ್ತಲಿನ ಬಹುತೇಕರು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಇರಲಿಲ್ಲ. ಮೆಕ್ಯಾನಿಕ್‌ ಕೆಲಸ ಮಾಡುವ ಸಿದ್ದಲಿಂಗಯ್ಯ ಪಾನಮತ್ತನಾಗಿ ಮನೆಯಲ್ಲಿದ್ದ. ಅವರ ಸಹೋದರರ ನಡುವಿನ ಜಗಳದಲ್ಲಿ ಕಾಲಿಗೆ ಪೆಟ್ಟಾಗಿದ್ದರಿಂದ ಬೇಗನೆ ಎದ್ದು ಓಡಾಡಲೂ ಆಗುತ್ತಿರಲಿಲ್ಲ. ಆದ್ದರಿಂದ ಸಿದ್ದಲಿಂಗಯ್ಯ ಘಟನೆ ನಡೆದ ಬೆಳಿಗ್ಗೆ ಒಂದು ಸಲ ಅನುಶ್ರೀಗೆ ಹೇಳಿ ಗುಟ್ಕಾ ತರಿಸಿಕೊಂಡಿದ್ದ. ಅದೇ ದಿನ ಮತ್ತೊಂದು ಸಲ ಗುಟ್ಕಾ ತಂದುಕೊಡುವಂತೆ ಹೇಳಿದಾಗ ಇದಕ್ಕೆ ಅನುಶ್ರೀ ಒಪ್ಪಿಲ್ಲ. ಇದೇ ಸಿಟ್ಟಿಗೆ ಆರೋಪಿ ಪಕ್ಕದಲ್ಲಿದ್ದ ಕಟ್ಟಿಗೆಯಿಂದ ಬಾಲಕಿಯ ತಲೆಗೆ ಜೋರಾಗಿ ಹೊಡೆದಿದ್ದರಿಂದ ಅನುಶ್ರೀ ಮೃತಪಟ್ಟಿದ್ದಾಳೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸವಾಲಿನ ಪ್ರಕರಣವನ್ನು ನಮ್ಮ ತಂಡದವರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ. ಆರೋಪಿಯನ್ನು ತಿಳಿಸಿದವರಿಗೆ ₹25 ಸಾವಿರ ಬಹುಮಾನ ಘೋಷಿಸಲಾಗಿತ್ತು. ಈಗ ಅದನ್ನು ನಮ್ಮ ಸಿಬ್ಬಂದಿಗೆ ಕೊಡಲಾಗುವುದು.
ಯಶೋಧಾ ವಂಟಗೋಡಿ, ಎಸ್‌.ಪಿ. ಕೊಪ್ಪಳ

ಆರೋಪಿ ಕೃತ್ಯಕ್ಕೆ ಬಳಸಿದ ಕೋಲು, ಮುಚ್ಚಿಟ್ಟಿದ್ದ ಬಾಲಕಿಯ ಚಪ್ಪಲಿ ಮತ್ತು ಮೃತದೇಹ ಕಾಣದಂತೆ ಅಡ್ಡಲಾಗಿ ಇರಿಸಿದ್ದ ನೀರಿನ ಸ್ಟೀಲ್ ಟ್ಯಾಂಕ್‌ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಯನ್ನು ಭಾನುವಾರ ಬೆಳಿಗ್ಗೆ ಬಂಧಿಸಲಾಗಿದೆ.

ಸವಾಲಿನ ಪ್ರಕರಣ

ಜನನಿಬಿಡ ಪ್ರದೇಶದಲ್ಲಿಯೇ ಈ ಘಟನೆ ನಡೆದಿದ್ದರೂ ಆರೋಪಿಯನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಇದಕ್ಕಾಗಿ ವಿಶೇಷ ತಂಡವನ್ನೂ ರಚಿಸಲಾಗಿತ್ತು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಹೇಮಂತಕುಮಾರ್ ಆರ್‌., ಡಿವೈಎಸ್‌ಪಿ ಮುತ್ತಣ್ಣ ಸರವಗೋಳ, ಮಹಿಳಾ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಆಂಜನೇಯ ಡಿ.ಎಸ್‌., ಯಲಬುರ್ಗಾ ವೃತ್ತದ ಸಿಪಿಐ ಮೌನೇಶ್ವರ ಪಾಟೀಲ, ಕೊಪ್ಪಳ ಗ್ರಾಮೀಣ ಸಿಪಿಐ ಸುರೇಶ ಡಿ., ತನಿಖೆ ವೇಳೆ ಗ್ರಾಮೀಣ ಠಾಣೆಯ ಪಿಎಸ್‌ಐ ಆಗಿದ್ದ ಡಾಕೇಶ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪೊಲೀಸರ ಎದುರೇ ಓಡಾಡಿದ್ದ ಆರೋಪಿ!
ಘಟನೆ ನಡೆದ ದಿನ ಹಾಗೂ ತನಿಖೆ ಸಲುವಾಗಿ ಪೊಲೀಸರು ಅನೇಕ ಬಾರಿ ಕಿನ್ನಾಳಕ್ಕೆ ತೆರಳಿದ್ದಾಗ ಅವರ ಎದುರೇ ಆರೋಪಿ ಓಡಾಡಿದ್ದ. ಪೊಲೀಸರೇ ಬಂದು ನನ್ನನ್ನು ಬಂಧಿಸಲಿ, ಪ್ರಶ್ನಿಸಲಿ ಎಂದು ಗಟ್ಟಿಗನಾಗಿಯೇ ಇದ್ದ. ಒಂದು ಸಲ ಪೊಲೀಸರು ಠಾಣೆಗೆ ಕರೆದು ವಿಚಾರಣೆ ಮಾಡಿದ್ದರೂ ಆರೋಪಿ ದೃಢಪಟ್ಟಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT