ಶುಕ್ರವಾರ, ಜನವರಿ 15, 2021
21 °C
ಪೋಷಣ ಅಭಿಯಾನದಡಿ ಸ್ಮಾರ್ಟ್‌ಫೋನ್‌ ವಿತರಣೆ: ಕೊರೊನಾ ವಾರಿಯರ್ಸ್‌ಗೆ ಸನ್ಮಾನ

‘ಮಹಿಳೆಯರ ಆರೋಗ್ಯ ರಕ್ಷಣೆಗೆ ಸರ್ಕಾರ ಬದ್ಧ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ: ಮಹಿಳೆಯರ ರಕ್ಷಣೆ ಮತ್ತು ಆರೋಗ್ಯದ ಕಾಳಜಿ ವಹಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಅವರ  ಶ್ರೇಯೋಭಿವೃದ್ಧಿಗೆ ವಿವಿಧ ಯೋಜನೆ ಜಾರಿಗೆ ತಂದಿದೆ. ಅದನ್ನು ಸದುಪಯೋಗ ಮಾಡಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಪಟ್ಟಣದ ಪದ್ಮಶ್ರೀ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಿಂದ ಪೋಷಣ ಅಭಿಯಾನದಡಿ ಸ್ಮಾರ್ಟ್ ಫೋನ್ ವಿತರಣೆ ಹಾಗೂ ಕೊರೊನಾ ವಾರಿಯರ್ಸ್‌ಗೆ ಭಾನುವಾರ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾತೃ ವಂದನಾ ಯೋಜನೆಯಲ್ಲಿ ರಾಜ್ಯ 6ನೇ ಸ್ಥಾನದಲ್ಲಿದೆ. ಕೇವಲ ಸಚಿವೆಯಾಗಿ ಈ ಕಾರ್ಯ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಇದರ ಯಶಸ್ಸಿಗೆ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಸಾಕಷ್ಟಿದೆ. ಕಾರ್ಯಕರ್ತೆಯರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದು, ಪ್ರಾಮಾಣಿಕವಾಗಿ ಆ ಕೆಲಸಗಳನ್ನು ಮಾಡಲು ಶ್ರಮಿಸುತ್ತೇನೆ ಎಂದರು.

‘ನಾನು ಸಚಿವೆಯಾದ ಬಳಿಕ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ₹2 ಸಾವಿರ ಹೆಚ್ಚಳ ಮಾಡಿದ್ದೇನೆ. ಕೊರೊನಾ ವಾರಿಯರ್ಸ್‌ಗಳು ಮನೆಯ ಜವಾಬ್ದಾರಿ ಜತೆಗೆ ಸಮಾಜದ ಜವಾಬ್ದಾರಿಯನ್ನು ಶೇ 100ರಷ್ಟು ನಿಭಾಯಿಸಿದ್ದಾರೆ. ಕೊರೊನಾ ಕೆಲಸದ ವೇಳೆ 25 ಕಾರ್ಯಕರ್ತೆಯರು ಮರಣಹೊಂದಿದ್ದು, ಅವರಿಗೆ ಪರಿಹಾರ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದರು.

‘ಗರ್ಭಿಣಿಯರ ಆರೋಗ್ಯದ ಬಗ್ಗೆ ಇಲಾಖೆ ಹೆಚ್ಚಿನ ಮಹತ್ವ ನೀಡಿದೆ. ಫೋಷಣ ಅಭಿಯಾನದಡಿ ಸಿಬ್ಬಂದಿಗೆ ಸಹಾಕಾರಿಯಾಗಲು ಪ್ರತಿ ಅಂಗನವಾಡಿಗೆ ಸ್ಮಾರ್ಟ್ ಪೋನ್‌ ವಿತರಿಸಲಾಗುತ್ತಿದೆ. ಅಂಗನವಾಡಿ ಕಾರ್ಯ ಪ್ರಗತಿಯನ್ನು ಮೊಬೈಲ್ ಮೂಲಕ ನಮೂದಿಸುವುದರಿಂದ ಸುಲಭವಾಗಿ ಆ ಬಗ್ಗೆ ತಿಳಿಯಬಹುದು’ ಎಂದರು.

‘ಸಂಪುಟದಿಂದ ಕೈಬಿಡುವುದಿಲ್ಲ’: ‘ಸಚಿವ ಸಂಪುಟ ಪುನರ್‌ ರಚನೆಯಲ್ಲಿ ನನ್ನ ಕೈ ಬಿಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಮೊದಲು ಎರಡು ಸಾರಿ ನನ್ನನ್ನು ಕೈ ಬಿಡಲಾಗುವುದು ಎಂದು ಮಾಧ್ಯಮಗಳು ಬಿತ್ತರಿಸಿದ್ದವು. ಇದು ಮೂರನೇ ಬಾರಿ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಕೇಂದ್ರ ಮತ್ತು ರಾಜ್ಯದ ನಾಯಕರು ನಮ್ಮ ಇಲಾಖೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ನನ್ನ ಹೆಸರನ್ನು ಯಾಕೆ ಮುನ್ನೆಲೆಗೆ ತರುತ್ತಾರೆ ಎಂಬುವುದೇ ಗೊತ್ತಾಗುತ್ತಿಲ್ಲ’ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸವರಾಜ ದಢೇಸೂಗೂರು ಮಾತನಾಡಿ, ‘ಒಡಹುಟ್ಟಿದ ಅಣ್ಣನಲ್ಲದಿದ್ದರೂ ನನಗೆ ಮಹಿಳೆಯರು ಸಹೋದರನ ಸ್ಥಾನ ನೀಡಿದ್ದಾರೆ. ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಬಿಜೆಪಿ ಸರ್ಕಾರ ರೈತ ಪರವಿದೆ. ಸರ್ವರೂ ಸುಖದಿಂದಿರಲು ನಾನಾ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ’ ಎಂದರು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ,‘ ಕೊರೊನಾದಿಂದ ಸಾರ್ವಜನಿಕರನ್ನು ರಕ್ಷಿಸಲು ಅಂಗನವಾಡಿ ಕಾರ್ಯಕರ್ತರು ಅವಿರತವಾಗಿ ಶ್ರಮಿಸಿದ್ದಾರೆ. ಅವರಿಗೆ ಸನ್ಮಾನ ಹಮ್ಮಿಕೊಂಡಿರುವುದು ಶ್ಲಾಘನೀಯ. ನಮ್ಮ ಹಿಂದಿನ ಆಚಾರ-ವಿಚಾರ ನಾವುಗಳು ಮರೆತು ಬಾಳುವುದಕ್ಕಿಂತ ಅರಿತು ಬಾಳಿದರೆ ಸ್ವರ್ಗ ಸುಖ’ ಎಂದರು.

ಕಾಡಾ ಅಧ್ಯಕ್ಷ ತಿಪ್ಪೇರುದ್ರ ಸ್ವಾಮಿ ಮಾತನಾಡಿದರು. 

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಬಾವಿ, ಪುರಸಭೆ ಅಧ್ಯಕ್ಷ ಶರಣೇಶ್ ಸಾಲೋಣಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಅಧಿಕಾರಿ ಅಕ್ಕಮಹಾದೇವಿ, ಯೋಜನಾ ಅಧಿಕಾರಿ ಮಂಜುನಾಥ, ಎಪಿಎಂಸಿ ಅಧ್ಯಕ್ಷ ಸೋಮಶೇಖರ ಗೌಡ ಮುಸ್ಟೂರು, ಕನಕಗಿರಿ ಶಿಶು ಅಭಿವೃದ್ಧಿ ಅಧಿಕಾರಿ ಶ್ವೇತಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.