ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು ಹಂಗಾಮಿಗೆ ನೀರು; ಸಚಿವ ಗೋವಿಂದ ಎಂ.ಕಾರಜೋಳ

Last Updated 21 ಫೆಬ್ರುವರಿ 2022, 4:33 IST
ಅಕ್ಷರ ಗಾತ್ರ

ಕೊಪ್ಪಳ: ’ತುಂಗಭದ್ರಾ ಜಲಾಶಯದ ಎಡದಂಡೆ, ಬಲದಂಡೆ ಕೆಳಮಟ್ಟದ ಕಾಲುವೆಗೆ ಹಾಗೂ ವಿಜಯನಗರ ಕಾಲುವೆಗಳಿಗೆ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ (ಐಸಿಸಿ) ನಿರ್ಣಯಿಸಿ ದಂತೆ ಪ್ರಸ್ತುತ ಹಿಂಗಾರು ಹಂಗಾಮಿಗೆ ನೀರು ಒದಗಿಸಲಾಗುತ್ತಿದೆ‘ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಹೇಳಿದರು.

ಮುನಿರಾಬಾದ್ ನೀರಾವರಿ ಕೇಂದ್ರ ವಲಯದ ವ್ಯಾಪ್ತಿಯ ನೀರಾವರಿ ಯೋಜನೆಗಳ ಕುರಿತು ಕಾಡಾ ಕಚೇರಿ ಸಭಾಂಗಣದಲ್ಲಿ ಭಾನುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ತುಂಗಭದ್ರಾ ಜಲಾಶಯದಲ್ಲಿ 1981ರಲ್ಲಿ 212 ಟಿಎಂಸಿ ಅಡಿ ನೀರು ಇತ್ತು. ಸುಮಾರು 40 ವರ್ಷಗಳ ನಂತರ ಜಲಾಶಯಕ್ಕೆ ಸಾಕಷ್ಟು ನೀರು ಹರಿದುಬಂದಿದೆ. ಕುಡಿಯಲು ಹಾಗೂ ರೈತರ ಬೆಳೆಗೆ ನೀರು ಒದಗಿಸಲು ಯಾವುದೇ ಕೊರತೆ ಇಲ್ಲ ಎಂದರು.

ಆಧುನೀಕರಣ ಕಾಮಗಾರಿ: ವಿಜಯ ನಗರ ಕಾಲುವೆಗಳನ್ನು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಒಟ್ಟು 11 ಅಣೆಕಟ್ಟುಗಳು ಹಾಗೂ 16 ಕಾಲುವೆಗಳು ಬರುತ್ತವೆ. ಇದರಿಂದ 27,550 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ. ವಿಜಯ ನಗರ ಕಾಲದ ಕಾಲುವೆಗಳು ಹಾಗೂ ಅಣೆ ಕಟ್ಟುಗಳ ಆಧುನೀಕರಣ ಕಾಮಗಾ ರಿಗೆ ₹ 456.63 ಕೋಟಿಯ ಯೋಜನಾ ವರದಿಗೆ ಈಗಾಗಲೇ ಸರ್ಕಾರ ಆಡಳಿತಾ ತ್ಮಕ ಅನುಮೋದನೆ ಎಂದು ತಿಳಿಸಿದರು.

ಪ್ರಸ್ತುತ ಪ್ಯಾಕೇಜ್ -1ರಡಿ, 3 ಅಣೆಕಟ್ಟುಗಳು ಹಾಗೂ 15 ಕಾಲುವೆಗಳ ಆಧುನೀಕರಣ ಕಾಮಗಾರಿಯನ್ನು ₹ 371.09 ಕೋಟಿ ಮೊತ್ತಕ್ಕೆ ನೀಡಲಾಗಿದೆ. ಒಟ್ಟು 196.62 ಕಿ.ಮೀ ಪೈಕಿ ಪ್ರಸ್ತುತ ಒಟ್ಟು 65.24 ಕಿ.ಮೀ ಸಿ.ಸಿ ಲೈನಿಂಗ್ ಹಾಗೂ ರಚನೆ ಒಳಗೊಂಡು ₹ 109.76 ಕೋಟಿ ವೆಚ್ಚವಾಗಿದೆ. ಪ್ರಸ್ತುತ ಪ್ಯಾಕೇಜ್ -2 ಅಡಿ 8 ಅಣೆಕಟ್ಟುಗಳು 1 ಕಾಲುವೆಯ ಆಧುನೀಕರಣ ಕಾಲುವೆಯ ಕಾಮಗಾರಿಯ ತಾಂತ್ರಿಕ ಬಿಡ್‌ನ ಅನುಮೋದನೆಗೆ ಟಿಎಸ್‌ಸಿ ಮಂಡಿಸಲು ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಸಿಂಗಟಾಲೂರು ಏತ ನೀರಾವರಿ ಯೋಜನೆಗೆ 16 ಟಿ.ಎಂ.ಸಿ ಅಡಿ ನೀರನ್ನು ಹಂಚಿಕೆ ಮಾಡಲಾಗಿದೆ. ಈ ನೀರನ್ನು ಬಳಸಿಕೊಂಡು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ, ಗದಗ ಜಿಲ್ಲೆಯ ಗದಗ ಹಾಗೂ ಮುಂಡರಗಿ ತಾಲ್ಲೂಕು‌, ಕೊಪ್ಪಳ ಜಿಲ್ಲೆಯ ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕಿನ ಒಟ್ಟು 2,65,229 ಎಕರೆ ಪ್ರದೇಶಕ್ಕೆ ಹರಿವು ಮತ್ತು ಸೂಕ್ಷ್ಮ ನೀರಾವರಿ ಸೌಲಭ್ಯ ಒದಗಿಸಲು ಯೋಜಿಸಲಾಗಿದೆ ಎಂದರು.

ನವಲಿ ಸಮಾನಾಂತರ ಜಲಾಶಯಕ್ಕೆ ಕಾರ್ಯಸಾಧ್ಯತಾ ವರದಿ ತಯಾರಿಸಲು ₹15 ಕೋಟಿನೀಡಲಾಗಿದೆ. ಡಿಪಿಆರ್ ತಯಾರಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ತುಂಗಭದ್ರಾ ಅಂತರರಾಜ್ಯ ಯೋಜನೆ

ತುಂಗಭದ್ರಾ ಅಂತರರಾಜ್ಯ ಯೋಜನೆಯಡಿ ರಾಜ್ಯದ 9,26,438 ಎಕರೆ, ಆಂಧ್ರ ಪ್ರದೇಶದ 6,25,097 ಎಕರೆ ಮತ್ತು ತೆಲಂಗಾಣದ 87,000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಸಚಿವ ಗೋವಿಂದ ಎಂ.ಕಾರಜೋಳ ಹೇಳಿದರು.

ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ಪ್ರಸ್ತುತ ಹಿಂಗಾರು ಹಂಗಾಮಿಗೆ ಎಡದಂಡೆ ನಾಲೆಗೆ 3.30 ಲಕ್ಷ ಎಕರೆ ಬಲದಂಡೆ ಕೆಳಮಟ್ಟದ ಕಾಲುವೆಗೆ 0.70 ಲಕ್ಷ ಎಕರೆ, ವಿಜಯನಗರ ಕಾಲುವೆ 0.26 ಲಕ್ಷ ಎಕರೆ ಸೇರಿ ಒಟ್ಟು 4 ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ.

ಪ್ರಸಕ್ತ ವರ್ಷದಲ್ಲಿ ತುಂಗಭದ್ರಾ ಜಲಾಶಯಕ್ಕೆ 212 ಟಿಎಂಸಿ ಅಡಿ ನೀರು ನೀರಾವರಿಗೆ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿದೆ. ರಾಜ್ಯದ ಪಾಲು 138.99 ಟಿಎಂಸಿ ಇರುತ್ತದೆ. ಇದರಲ್ಲಿ ಮುಂಗಾರು ಹಂಗಾಮಿಗೆ 71.89 ಟಿಎಂಸಿ ನೀರನ್ನು ವಿವಿಧ ಕಾಲುವೆಗಳಲ್ಲಿ 7.26 ಲಕ್ಷ ಎಕರೆ ಪ್ರದೇಶಕ್ಕೆ ಒದಗಿಸಲಾಗಿದೆ. ಬಾಕಿ ಉಳಿದ 67.10 ಟಿಎಂಸಿ ನೀರನ್ನು ಹಿಂಗಾರು ಹಂಗಾಮಿನ 4 ಲಕ್ಷ ಎಕರೆ ಪ್ರದೇಶಕ್ಕೆ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕೆರೆ ತುಂಬಿಸುವ ಯೋಜನೆ

ವಲಯದಡಿಯ ₹1,827.17 ಕೋಟಿ ಮೊತ್ತದಲ್ಲಿ 8 ಕೆರೆತುಂಬಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು. ಯೋಜನೆಗಳಿಂದ 122 ಕೆರೆಗಳನ್ನು ಮತ್ತು ಗಣೇಕಲ್ ಸಮಾನಾಂತರ ಜಲಾಶಯ, ಮಾಲವಿ ಜಲಾಶಯ ತುಂಬಿಸಲು ಹಾಗೂ 17,225 ಎಕರೆ ಬಾಧಿತ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಯೋಜಿಸಲಾಗಿದೆ ಎಂದರು.

ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ,ನೀರಾವರಿ ಅಧಿಕಾರಿಗಳಾದಕೃಷ್ಣಾಜಿ ಚೌವ್ಹಾಣ, ಎಲ್.ಬಸವರಾಜ್, ಪಿ.ಬಿ. ಪ್ರಕಾಶ್, ಕೆ.ಬಿ.ಎಚ್.ಶಿವಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT