ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಅತಿಥಿ ಉಪನ್ಯಾಸಕರಿಂದ ಒಂದೆಡೆ ಹೋರಾಟ, ಇನ್ನೊಂದೆಡೆ ಪಾಠ

ಒಂದು ತಿಂಗಳು ಪರೀಕ್ಷೆ ಮುಂದೂಡಲು ನಿರ್ಧಾರ, ವಾರ್ಷಿಕ ವೇಳಾಪಟ್ಟಿಯಲ್ಲಿ ವ್ಯತ್ಯಯ
Published 3 ಜನವರಿ 2024, 6:07 IST
Last Updated 3 ಜನವರಿ 2024, 6:07 IST
ಅಕ್ಷರ ಗಾತ್ರ

ಕೊಪ್ಪಳ: ಸೇವೆ ಕಾಯಂ ಮಾಡುವಂತೆ ಆಗ್ರಹಿಸಿ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಒಂದೆಡೆ ಪಾದಯಾತ್ರೆ ಮೂಲಕ ಹೋರಾಟ ಮಾಡುತ್ತಿದ್ದರೆ ಇನ್ನೊಂದೆಡೆ ಹಲವು ‘ಅತಿಥಿಗಳು’ ಕಾಲೇಜುಗಳಲ್ಲಿ ಪಾಠ ಆರಂಭಿಸಿದ್ದಾರೆ.

ಸೇವೆ ಕಾಯಂ ಮಾಡಲು ಆಗ್ರಹಿಸಿ ನವೆಂಬರ್‌ ಕೊನೆಯ ವಾರದಲ್ಲಿ ರಾಜ್ಯದಾದ್ಯಂತ ಅತಿಥಿ ಉಪನ್ಯಾಸಕರು ಪ್ರತಿಭಟನೆ ಆರಂಭಿಸಿದ್ದರು. ಒಂದು ತಿಂಗಳು ಕಳೆದ ಬಳಿಕ ರಾಜ್ಯ ಸರ್ಕಾರ ಅವರ ಹಲವು ಬೇಡಿಕೆಗಳಿಗೆ ಸ್ಪಂದಿಸಿತ್ತು. ಆದರೆ, ಅವರು ಸೇವೆ ಕಾಯಂ ಮಾಡುವ ಬೇಡಿಕೆ ಈಡೇರದ ಕಾರಣ ತಮ್ಮ ಬೇಡಿಕೆಯ ಪಟ್ಟು ಸಡಿಲಿಸಿಲ್ಲ. ಆದ್ದರಿಂದ ಈಗ ತುಮಕೂರಿನಿಂದ ಬೆಂಗಳೂರಿನ ತನಕ ಪಾದಯಾತ್ರೆ ನಡೆಸುತ್ತಿದ್ದು, ಇದರಲ್ಲಿ ಜಿಲ್ಲೆಯ ಉಪನ್ಯಾಸಕರು ಭಾಗಿಯಾಗಿದ್ದಾರೆ. 

ರಾಜ್ಯದ ಬಹುತೇಕ ಎಲ್ಲ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದ್ದು, ಜಿಲ್ಲೆಯಲ್ಲಿಯೂ ಇದೇ ಪರಿಸ್ಥಿತಿಯಿದೆ. ತಳಬಾಳದಲ್ಲಿರುವ ವಸತಿ ಕಾಲೇಜು ಸೇರಿ ಜಿಲ್ಲೆಯಲ್ಲಿ 15 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು ಅಂದಾಜು 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. 390 ಅತಿಥಿ ಉಪನ್ಯಾಸಕರೇ ಕಾಲೇಜುಗಳಲ್ಲಿ ಪಾಠಕ್ಕೆ ಆಧಾರಸ್ಥಂಭವಾಗಿದ್ದಾರೆ. ಹೀಗಾಗಿ ಒಂದೂವರೆ ತಿಂಗಳಿನಿಂದ ಸರಿಯಾಗಿ ತರಗತಿಗಳು ನಡೆದಿಲ್ಲ. ವಿದ್ಯಾರ್ಥಿಗಳ ಭವಿಷ್ಯವೂ ಆತಂತ್ರಕ್ಕೆ ಸಿಲುಕಿದೆ.

ಈಗ ಸರ್ಕಾರ ಹಲವು ಬೇಡಿಕೆಗಳಿಗೆ ಒಪ್ಪಿಕೊಂಡಿದ್ದರಿಂದ ಜಿಲ್ಲೆಯ ಹಲವು ಕಾಲೇಜುಗಳಲ್ಲಿ ಕೆಲ ಅತಿಥಿ ಉಪನ್ಯಾಸಕರು ಕರ್ತವ್ಯಕ್ಕೆ ಮರಳಿದ್ದಾರೆ. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಟ್ಟು 78 ಜನ ‘ಅತಿಥಿ’ಗಳು ಇದ್ದು ಅದರಲ್ಲಿ ಆರು ಜನ ತರಗತಿಗಳನ್ನು ತೆಗೆದುಕೊಂಡಿದ್ದಾರೆ. ಪ್ರತಿಯೊಬ್ಬರೂ ನಿತ್ಯ ಮೂರು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಕಾಲೇಜಿನ ಮೂಲಗಳು ತಿಳಿಸಿವೆ.

ಈ ಬಗ್ಗೆ ಕೊಪ್ಪಳ ತಾಲ್ಲೂಕಿನ ಬಸಾಪುರದಲ್ಲಿರುವ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಅತಿಥಿ ಉಪನ್ಯಾಸಕರು ಹಲವು ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ಆದರೆ ಸೇವೆ ಕಾಯಂ ಕಷ್ಟ’ ಎಂದರು.  

ಪರೀಕ್ಷೆ ಮುಂದಕ್ಕೆ: ತರಗತಿಗಳು ಸರಿಯಾಗಿ ನಡೆಯದ ಕಾರಣ ಮುಂದಿನ ರೂಪರೇಷೆ ಬಗ್ಗೆ ಚರ್ಚಿಸಲು ಕೊಪ್ಪಳ ವಿಶ್ವವಿದ್ಯಾಲಯ ವ್ಯಾಪ್ತಿಯ ಅಧೀನ ಕಾಲೇಜುಗಳ ಪ್ರಾಚಾರ್ಯರ ಸಭೆ ನಡೆದಿದ್ದು, ಒಂದು ತಿಂಗಳು ಪರೀಕ್ಷೆ ಮುಂದೂಡಲು ನಿರ್ಧರಿಸಲಾಗಿದೆ.

ಜನವರಿ ಅಂತ್ಯಕ್ಕೆ ತರಗತಿಗಳು ಪೂರ್ಣಗೊಂಡು ಬಳಿಕ ಪರೀಕ್ಷೆ ನಡೆಯಬೇಕಿತ್ತು. ಈಗ ಒಂದು ತಿಂಗಳು ಎಲ್ಲ ಚಟುವಟಿಕೆಗಳನ್ನು ಮುಂದಕ್ಕೆ ಹಾಕಲಾಗಿದ್ದು, ಇದು ವಾರ್ಷಿಕ ವೇಳಾಪಟ್ಟಿಯ ಮೇಲೂ ವ್ಯತ್ಯಯವಾಗುವ ಆತಂಕ ವಿದ್ಯಾರ್ಥಿಗಳನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT