ಬುಧವಾರ, ಫೆಬ್ರವರಿ 19, 2020
30 °C
ಕಲ್ಯಾಣ ಕರ್ನಾಟಕ ಭಾಗದ ಶಾಸಕರಿಗೆ ಪ್ರಾತಿನಿಧ್ಯಕ್ಕೆ ಮನವಿ; ಹೆಚ್ಚಿದ ನಿರೀಕ್ಷೆ

ಕೊಪ್ಪಳ: ಹಾಲಪ್ಪಗೆ ಸಿಗುವುದೇ ಸಚಿವ ಸ್ಥಾನ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

prajavani

ಕೊಪ್ಪಳ: ರಾಜ್ಯ ಸರ್ಕಾರ ಸಂಪುಟ ವಿಸ್ತರಣೆ ಕಸರತ್ತು ನಡೆಸಿದ್ದು, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ ಸಚಿವರಾಗಲಿದ್ದಾರೆ ಎಂಬ ಮಾತು ಜಿಲ್ಲೆಯಾದ್ಯಂತ ಕೇಳಿ ಬರುತ್ತಿದೆ.

ಈ ಮಾತಿಗೆ ಸಾಕ್ಷಿ ಎಂಬಂತೆ ಗುರುವಾರ ನವದೆಹಲಿ ಕರ್ನಾಟಕ ಭವನದಲ್ಲಿ ಕೊಠಡಿ ಬುಕ್ ಮಾಡಲಾಗಿತ್ತು. ಗೃಹ ಸಚಿವ ಅಮಿತ್ ಶಾ ಕರೆಯ ಮೇರೆಗೆ ಆಚಾರ ಅವರು ದೆಹಲಿಗೆ ತೆರಳಿದ್ದರು ಎಂಬ ಸುದ್ದಿ ಹರಡಿತ್ತು.

ನಗರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಬಂದಿದ್ದ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, 'ದೆಹಲಿಯಲ್ಲಿ ಕೊಠಡಿ ಬುಕ್ ಮಾಡಿದ್ದು ನಿಜ. ಆದರೆ ಹೋಗಿರಲಿಲ್ಲ. ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ' ಎಂದು ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಹೇಳಿದರು.

ಹಾಲಪ್ಪ ಆಚಾರ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್‌ ಮಟ್ಟದಲ್ಲಿಯೇ ಒಲವು ವ್ಯಕ್ತವಾಗಿದೆ ಎನ್ನಲಾಗುತ್ತದೆ. ಇದಕ್ಕೆ ಕಾರಣ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸದಸ್ಯರನ್ನು ಮಾಡುವ ಮೂಲಕ ಯಲಬುರ್ಗಾ ಕ್ಷೇತ್ರ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಅಲ್ಲದೆ, ಕಲ್ಯಾಣ ಕರ್ನಾಟಕ ಭಾಗದ ಬೀದರ್ ಬಿಟ್ಟರೆ ಇತರೆ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಿಲ್ಲ. ಹಿರಿತನ, ಅನುಭವ, ವ್ಯಕ್ತಿತ್ವ ಕೂಡಾ ಗುರುತಿಸಲಾಗಿದೆ ಎನ್ನಲಾಗುತ್ತದೆ.

ಸಚಿವ ಸ್ಥಾನಕ್ಕೆ ಜಾತಿ ಲಾಭಿ ಕೂಡಾ ಇದೆ ಎನ್ನಲಾಗುತ್ತದೆ. ಬಿಜೆಪಿಯಿಂದ ಗೆದ್ದ ಲಿಂಗಾಯತ ಉಪಪಂಗಡದ ರಡ್ಡಿ ಲಿಂಗಾಯತ ಸಮಾಜದ 6 ಜನ ಶಾಸಕರಲ್ಲಿ ಒಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ. ಗಾಣಿಗ ಸಮಾಜದ ವ್ಯಕ್ತಿ ಚುನಾವಣೆಯಲ್ಲಿ ಸೋತಿದ್ದರೂ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ ಎಂಬ ವಾದ ಹೈಕಮಾಂಡ್‌ ತಲುಪಿದೆ ಎನ್ನಲಾಗುತ್ತದೆ. ಸಮುದಾಯದ ಎಲ್ಲ ಶಾಸಕರು ಹಾಲಪ್ಪ ಅವರ ಬಗ್ಗೆ ಒಲವು ತೋರಿಸಿದ್ದರಿಂದ ಸಂಪುಟದಲ್ಲಿ ಸ್ಥಾನ ದೊರೆಯಲಿದೆ ಎನ್ನಲಾಗುತ್ತದೆ.

'ಪಕ್ಷ ಸಂಘಟನೆ ಮಾಡಿದ ಕಾರಣಕ್ಕೆ ಹೈಕಮಾಂಡ್ ನನ್ನನ್ನು ಗುರುತಿಸಿರಬಹುದು. ಇದೇ ಕಾರಣಕ್ಕೆ ನನಗೆ ಸಚಿವ ಸ್ಥಾನ ನೀಡಬಹುದು. ನಾನು ಅವಕಾಶ ಕೊಡಿ ಎಂದು ಕೇಳಿಲ್ಲ, ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ' ಹಾಲಪ್ಪ ಆಚಾರ್ ಹೇಳುತ್ತಾರೆ.

'ಸಚಿವ ಸ್ಥಾನ ದೊರೆಯುವುದು ಖಾತ್ರಿಯಾಗಿದ್ದು, ಕೊನೆ ಕ್ಷಣದಲ್ಲಿ ದೊರೆಯದಿದ್ದರೆ ಮುಜಗರವಾಗಲಿದೆ ಎಂಬ ಕಾರಣಕ್ಕೆ ಶಾಸಕರು ಹೇಳಿರಲಿಕ್ಕಿಲ್ಲ' ಎಂದು ಅವರ ಕೆಲವು ಬೆಂಬಲಿಗರು ಹೇಳುತ್ತಾರೆ.

ಹಿಂದುಳಿದ ಭಾಗದ ಜಿಲ್ಲೆಯಿಂದ ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವಿರುವ, ಮುತ್ಸದ್ಧಿ ಮತ್ತು ಸಂಭಾವಿತ ರಾಜಕಾರಣಿಯಾಗಿರುವುದರಿಂದ ಅವರಿಗೆ ಸಚಿವ ಸ್ಥಾನ ನೀಡಬಹುದು ಎಂದು ಜಿಲ್ಲೆಯ ಇಬ್ಬರು ಶಾಸಕರು ಬೆಂಬಲ ಸೂಚಿಸಿದ್ದಾರೆ ಎನ್ನಲಾಗುತ್ತದೆ.

ಎಲ್ಲ ಅಂದುಕೊಂಡಂತೆ ಆದರೆ ಮೊದಲ ಸಾರಿ ಶಾಸಕರಾಗಿ ಆಯ್ಕೆಯಾದ ಅವರು ಸಚಿವರಾಗುವ ಅವಕಾಶ ಪಡೆದುಕೊಂಡ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಒಬ್ಬರಾಗುತ್ತಾರೆ ಎಂಬುವುದೇ ವಿಶೇಷ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)