ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಲೇಜು ಕ್ಯಾಂಪಸ್ | ಹನುಮಸಾಗರ ಪಿಯು ಕಾಲೇಜು: ಸಮಸ್ಯೆಗಳ ಆಗರ

ಇದ್ದೂ ಇಲ್ಲದಂತಾದ ಮೂಲಸೌಲಭ್ಯ: ಅನೈತಿಕ ಚಟುವಟಿಕೆಗಳ ತಾಣವಾದ ಆವರಣ
ಡಿ.ಎಂ. ಕಲಾಲಬಂಡಿ
Published 2 ಜುಲೈ 2024, 4:22 IST
Last Updated 2 ಜುಲೈ 2024, 4:22 IST
ಅಕ್ಷರ ಗಾತ್ರ

ಹನುಮಸಾಗರ: ಸ್ಥಳೀಯ ಸರ್ಕಾರಿ ಪದವಿಪೂರ್ವ ಕಾಲೇಜು ಪವಿತ್ರ ತಾಣವಾಗಿದ್ದರೂ ಹಲವು ಸಮಸ್ಯೆಗಳ ಆಗರವಾಗಿದೆ. ಕಾಲೇಜಿನಲ್ಲಿ ಮೂಲ ಸೌಕರ್ಯಗಳು, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತೊಂದರೆ ಎದುರಾಗುತ್ತಿವೆ.

ಕಾಲೇಜಿಗೆ ಉತ್ತಮ ಕಟ್ಟಡವಿದ್ದರೂ ಕಾಂಪೌಂಡ್ ಇಲ್ಲದ ಕಾರಣಕ್ಕೆ ಈ ಶೈಕ್ಷಣಿಕ ತಾಣ ಅನೈತಿಕ ಚಟುವಟಿಕೆಗಳ ಸ್ಥಳವಾಗಿ ಬದಲಾಗಿದೆ. ಹಗಲು ಹೊತ್ತಿನಲ್ಲಿ ಪಿಯು ತರಗತಿಗಳು ನಡೆದರೂ ಸಂಜೆಯಾದರೂ ಸಾಕು ಕುಡುಕರ ಹಾವಳಿ ಕಂಡು ಬರುತ್ತದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ತಟ್ಟೆಗಳನ್ನು ಬೀಸಾಡುವುದು, ಬಾಟಲಿಗಳನ್ನು ಎಸೆದಿರುವುದು ಹೀಗೆ ಅನೇಕ ಅವ್ಯವಸ್ಥೆ ಕಂಡುಬರುತ್ತದೆ.

ಇದರಿಂದಾಗಿ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಕಾಲೇಜು ಸಿಬ್ಬಂದಿ ನಿತ್ಯ ಬೆಳಿಗ್ಗೆ ಕಾಲೇಜಿಗೆ ಬಂದಾಗ ಮುಜುಗರ ಎದುರಿಸಬೇಕಾಗಿದೆ. ತ್ವರಿತವಾಗಿ ಕಾಂಪೌಂಡ್‌ ನಿರ್ಮಾಣವಾಗಿದ್ದರೆ ದುಶ್ಚಟಕ್ಕೆ ದಾಸರಾಗಿರುವವರ ಹಾವಳಿಯನ್ನಾದರೂ ತಡೆಯಬಹುದು ಎನ್ನುತ್ತಾರೆ ಸಾರ್ವಜನಿಕರು.

ಕುಡಿಯುವ ನೀರಿನ ಸಮಸ್ಯೆ: ಈ ಕಾಲೇಜಿನ ಆವರಣದಲ್ಲಿ ಬೋರ್‌ವೆಲ್‌ ಇದ್ದರೂ ಕುಡಿಯಲು ಅಷ್ಟೊಂದು ಯೋಗ್ಯವಾಗಿಲ್ಲ. ಫ್ಲೋರೈಡ್ ಪ್ರಮಾಣ ಹೆಚ್ಚಿರುವ ಕಾರಣ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಶುದ್ಧ ನೀರಿನ ಘಟಕ ಅವಶ್ಯಕವಾಗಿದೆ. ಈ ಘಟಕವಿಲ್ಲದ ಕಾರಣ ತೊಂದರೆಯಾಗುತ್ತಿದೆ.

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಿದ್ದರೂ ಇನ್ನೂ ಕಾಲೇಜು ಆಡಳಿತಕ್ಕೆ ಹಸ್ತಾಂತರ ಮಾಡಿಲ್ಲದ ಕಾರಣ ತೊಂದರೆ ಎದುರಿಸುವಂತಾಗಿದೆ. ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಸಮಸ್ಯೆ ಹೆಚ್ಚಾಗುತ್ತಿದೆ. ಇಂಗ್ಲಿಷ್‌ ಹಾಗೂ ಅರ್ಥಶಾಸ್ತ್ರ ವಿಷಯಗಳ ಬೋಧನೆಯೂ ಅತಿಥಿ ಉಪನ್ಯಾಸಕರ ಮೇಲೆ ಅವಲಂಬನೆಯಾಗಿದೆ.

ಈ ಕಾಲೇಜಿನಲ್ಲಿ ಪ್ರಸ್ತುತ ಕಲಾ ವಿಭಾಗ ಮಾತ್ರ ಇದ್ದು, ಹಿಂದೆ ವಿಜ್ಞಾನ ವಿಭಾಗ ಆರಂಭವಾಗಿತ್ತು. ಆದರೆ ವಿಷಯಕ್ಕೆ ಸಂಬಂಧಿಸಿದ ಸಿಬ್ಬಂದಿ ಕೊರತೆ ಕಾರಣಕ್ಕೆ ಆರು ವರ್ಷಗಳ ಹಿಂದೆಯೇ ಬಂದ್ ಮಾಡಲಾಗಿದೆ. ಈಗ ಕಲಾ ವಿಭಾಗದಲ್ಲಿ ಅಂದಾಜು 250 ವಿದ್ಯಾರ್ಥಿಗಳು ಇದ್ದಾರೆ. ಹಂತಹಂತವಾಗಿ ಕಾಲೇಜಿನಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನಿಸುತ್ತಿದ್ದರೂ ಉಪನ್ಯಾಸಕರ ಕೊರತೆ ಕಾಡುತ್ತಿದೆ.

‘ಕಾಲೇಜಿನ ಕಟ್ಟಡ ಸುಂದರವಾಗಿದೆ. ಸುತ್ತಲಿನ ಪರಿಸರವೂ ಚೆನ್ನಾಗಿದೆ. ಆದರೆ ಸೌಲಭ್ಯಗಳ ಕೊರತೆಗಳನ್ನು ಆದಷ್ಟು ಬೇಗನೆ ನೀಗಿಸಬೇಕು. ವಿದ್ಯಾರ್ಥಿಗಳ ಬಳಕೆಗೆ ಶೌಚಾಲಯದ ಕಟ್ಟಡ ಸಿದ್ಧವಿದ್ದರೂ ಅನುಕೂಲ ಇಲ್ಲದಂತಾಗಿದೆ. ಸಿದ್ಧಪಡಿಸಿದ್ದ ಕಟ್ಟಡ ಬಳಕೆ ಮಾಡದ ಕಾರಣಕ್ಕೆ ದೂಳು ಅಡರುತ್ತಿದೆ. ಆದ್ದರಿಂದ ಇರುವ ಸೌಲಭ್ಯಗಳನ್ನಾದರೂ ಸರಿಯಾಗಿ ನೀಡಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ಬೇಕಾದ ಮೂಲ ಸೌಕರ್ಯಗಳ ಕೊರತೆಯಿದೆ. ಆದರೂ ಕೂಡ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ದಾಖಲಾತಿ ಹೊಂದುತ್ತಿದ್ದಾರೆ. ಶೌಚಾಲಯ ಕೊರತೆ ಪರಿಹರಿಸಿದರೆ ಅನುಕೂಲವಾಗುತ್ತದೆ.

-ಸಾಹೇಬಗೌಡ ಬಿರಾದಾರಪ್ರಭಾರ ಪ್ರಾಚಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT