ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಗುಡ್ಡ ಶಾಲೆ ರ್‍ಯಾಗಿಂಗ್‌ ಪ್ರಕರಣ; ಮಕ್ಕಳ ರಕ್ಷಣಾ ಆಯೋಗದ ವರದಿ ಸಲ್ಲಿಕೆ

ಮಕ್ಕಳ ಸುರಕ್ಷತಾ ಸಮಿತಿ ಮರೀಚಿಕೆ!
Published 10 ಫೆಬ್ರುವರಿ 2024, 6:15 IST
Last Updated 10 ಫೆಬ್ರುವರಿ 2024, 6:15 IST
ಅಕ್ಷರ ಗಾತ್ರ

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಹೇಮಗುಡ್ಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಮರೀಚಿಕೆಯಾಗಿದ್ದು, ಈ ಕುರಿತು ಏಳು ದಿನಗಳಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಸತಿ ಶಾಲೆಯಲ್ಲಿ ರ್‍ಯಾಗಿಂಗ್‌ ನಡೆದಿದೆ ಎಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು, ಪೋಷಕರು, ಮುಖ್ಯ ಶಿಕ್ಷಕರು ಮತ್ತು ಅಲ್ಲಿನ ಸಿಬ್ಬಂದಿ ಜೊತೆ ಚರ್ಚಿಸಿ ಮಾಹಿತಿ ಕಲೆಹಾಕಿದ್ದಾರೆ. ಬಳಿಕ ತಯಾರಿಸಿದ ವರದಿಯಲ್ಲಿ ಅಲ್ಲಿರುವ ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ. ಈ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಮತ್ತು ಗಂಗಾವತಿ ಸಿಡಿಪಿಒ ಪ್ರವೀಣ ಹೇರೂರು ಜೊತೆಯಲ್ಲಿದ್ದರು.

ವಸತಿ ಶಾಲೆಯಲ್ಲಿ 2016ರ ರಾಜ್ಯ ಮಕ್ಕಳ ಹಕ್ಕುಗಳ ಸುರಕ್ಷತಾ ನೀತಿಯ ಬಗ್ಗೆ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆ ತರಬೇತಿ ನೀಡಿಲ್ಲ. ಈ ನೀತಿಗೆ ಅನುಗುಣವಾಗಿ ಕ್ರಿಯಾ ಯೋಜನೆ ರೂಪಿಸಿಲ್ಲ, ಶಿಕ್ಷಕರು ಮತ್ತು ಸಿಬ್ಬಂದಿಯಿಂದ ಬದ್ಧತಾ ಪತ್ರ ಸ್ವೀಕರಿಸಿಲ್ಲ, ಮಕ್ಕಳ ಸುರಕ್ಷತಾ ಸಮಿತಿ ರಚಿಸಿಲ್ಲ, ಶಾಲೆಯಲ್ಲಿ ಪೋಷಕರ ಸಮಿತಿ ರಚಿಸಿಲ್ಲ, ಮಕ್ಕಳ ಸಲಹೆ ಹಾಗೂ ದೂರು ಪೆಟ್ಟಿಗೆಗಳನ್ನು ಪರಿಶೀಲಿಸಿಲ್ಲ. ರಿಜಿಸ್ಟರ್‌ ಇದ್ದರೂ ಅದರಲ್ಲಿ ಯಾವುದೇ ಮಾಹಿತಿಯನ್ನು ದಾಖಲಿಸಿಲ್ಲ ಎನ್ನುವ ಅಂಶಗಳು ವಿಚಾರಣೆ ವೇಳೆ ಗೊತ್ತಾಗಿವೆ.

‘ನಮ್ಮ ಹೆಸರು ಎಲ್ಲಿಯೂ ಬಹಿರಂಗಪಡಿಸಬೇಡಿ’ ಎನ್ನುವ ಷರತ್ತಿನ ಮೇರೆಗೆ 6, 7, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಅಧಿಕಾರಿಗಳ ಜೊತೆ ಮಾಹಿತಿ ಹಂಚಿಕೊಂಡಿದ್ದು ‘10ನೇ ತರಗತಿಯ ಕೆಲವು ವಿದ್ಯಾರ್ಥಿಗಳು ಟೆರಸ್‌ ಮೇಲೆ ಬಸ್ಕಿ ತೆಗೆಯಿಸುವುದು, ಬಟ್ಟೆಗಳನ್ನು ಒಗೆದುಕೊಡುವಂತೆ ಒತ್ತಡ ಹೇರುವುದು ಮಾಡಿದ್ದಾರೆ. ಈ ಕೆಲಸಗಳನ್ನು ಮಾಡದವರಿಗೆ ಹೊಡೆದಿದ್ದಾರೆ. ಇದರನ್ನು ಬಹಿರಂಗ ಪಡಿಸಿದರೆ ಮತ್ತಷ್ಟು ಹೊಡೆಯುವುದಾಗಿ ಬೆದರಿಕೆಯನ್ನೂ ಒಡ್ಡಿದ್ದಾರೆ’ ಎನ್ನುವ ಮಾಹಿತಿ ಬಹಿರಂಗಗೊಂಡಿದೆ. ಶಾಲೆಯಿಂದ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ ಎನ್ನುವ ಅಂಶವೂ ನಿಜವಲ್ಲ ಎನ್ನುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶಾಲೆಯಲ್ಲಿ ಪ್ರತಿ ಭಾನುವಾರ ಮಾತ್ರ ಮಕ್ಕಳು ಪೋಷಕರೊಂದಿಗೆ ಸಮಾಲೋಚಿಸಲು ಅವಕಾಶವಿದ್ದು, ಕನಕಗಿರಿಯ ವೆಂಕಾರೆಡ್ಡಿ ಎಂಬುವರು ತಮ್ಮ ಮಗನನ್ನು ಭೇಟಿಯಾಗಲು ಬಂದಾಗ ಹಲವು ವಿದ್ಯಾರ್ಥಿಗಳು ತಮಗಾಗುತ್ತಿರುವ ಕಿರುಕುಳ ಹಂಚಿಕೊಂಡಿದ್ದಾರೆ. ಆಗ ಈ ಘಟನೆ ಬಹಿರಂಗವಾಗಿದೆ. ಪ್ರತಿ ತಿಂಗಳು ನಡೆಯಬೇಕಾದ ಪೋಷಕರೆ ಸಭೆ ಒಂದೂವರೆ ವರ್ಷವಾದರೂ ನಡೆಸಿಲ್ಲವೆನ್ನುವ ಮಾಹಿತಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹೇಮಗುಡ್ಡ ಶಾಲೆಯ ಪ್ರಾಂಶುಪಾಲ ರವಿಕುಮಾರ ಎಸ್‌. ಮಕ್ಕಳ ಸುರಕ್ಷತಾ ನೀತಿಯನ್ವಯ ಕ್ರಮಗಳನ್ನು ತೆಗೆದುಕೊಂಡಿಲ್ಲ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
-ಶೇಖರಗೌಡ ಜಿ. ರಾಮತ್ನಾಳ ಆಯೋಗದ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT