ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ‘ಕೈ’ ಹಿಡಿಯುವುದೇ ರಾಜಕೀಯದ ಹೊಸ ಪಥ?

ಹಲವು ಪಕ್ಷಗಳಲ್ಲಿದ್ದ ಸಂಗಣ್ಣ ಕರಡಿ, ಇಂದೇ ಕಾಂಗ್ರೆಸ್‌ ಸೇರ್ಪಡೆಗೆ ನಿರ್ಧಾರ
Published 17 ಏಪ್ರಿಲ್ 2024, 5:32 IST
Last Updated 17 ಏಪ್ರಿಲ್ 2024, 5:32 IST
ಅಕ್ಷರ ಗಾತ್ರ

ಕೊಪ್ಪಳ: ನಾಲ್ಕೂವರೆ ದಶಕಗಳ ರಾಜಕೀಯ ಬದುಕಿನಲ್ಲಿ ಅನೇಕ ಏಳುಬೀಳುಗಳನ್ನು ಕಂಡಿರುವ ಸಂಗಣ್ಣ ಕರಡಿ ಹೊಸ ‘ಪಥ’ ಆರಂಭಿಸಲು ಅಣಿಯಾಗಿದ್ದಾರೆ. ‘ಕೈ’ ಹಿಡಿದು ಮುನ್ನಡೆಯಲು ಸಿದ್ಧತೆ ಮಾಡಿಕೊಂಡಿರುವ ಅವರ ಮುಂದೆ ಈಗಲೂ ಸರಣಿ ಸವಾಲುಗಳಿವೆ.

2011ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲುವ ಮೂಲಕ ಕಮಲದ ಜೊತೆ ಮರಳಿ ನಂಟು ಬೆಳೆಸಿಕೊಂಡ ಅವರು ಬಳಿಕ ಅದೇ ಪಕ್ಷದಿಂದ ಸತತ ಹಿಂದಿನ ಎರಡು ಅವಧಿಯಲ್ಲಿ ಸಂಸದರಾಗಿದ್ದರು. 1978ರಲ್ಲಿ ಆಗಿನ ತಾಲ್ಲೂಕು ಅಭಿವೃದ್ಧಿ ಮಂಡಳಿ (ಈಗಿನ ತಾಲ್ಲೂಕು ಪಂಚಾಯಿತಿ) ಹಾಗೂ 1983ರಲ್ಲಿ ನೇಗಿಲು ಹೊತ್ತ ರೈತ ಚಿಹ್ನೆಯ ಜನತಾ ಪಕ್ಷದಿಂದ ಜಿಲ್ಲಾ ಪರಿಷತ್‌ (ಈಗಿನ ಜಿಲ್ಲಾ ಪಂಚಾಯಿತಿ) ಸದಸ್ಯರಾದರು. 1989ರಲ್ಲಿ ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕರು ಮತ್ತು ಅಧ್ಯಕ್ಷರು ಕೂಡ ಆಗಿದ್ದರು.

1994ರ ಚುನಾವಣೆಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದ್ದರು. 1999ರಲ್ಲಿ ಜೆಡಿಯುನಿಂದ ಗೆಲುವು ಪಡೆದ ಅವರು, 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಈಗಿನ ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಅವರ ತಂದೆ ಬಸವರಾಜ ಹಿಟ್ನಾಳ ವಿರುದ್ಧ ಸೋಲು ಕಂಡಿದ್ದರು. 2008ರಲ್ಲಿ ಮತ್ತೆ ಪಕ್ಷ ಬದಲಿಸಿದ ಸಂಗಣ್ಣ ಕರಡಿ ಜನತಾದಳದಿಂದ ಸ್ಪರ್ಧಿಸಿ ಶಾಸಕರಾದರು. 2011ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಪಡೆದರಾದರೂ, ಮುಂದಿನ 2013ರ ವಿಧಾನಸಭಾ ಅಖಾಡದಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ ವಿರುದ್ಧ ಪರಾಭವಗೊಂಡರು. ಅದೇ ವರ್ಷ ಬಿಜೆಪಿ ಜಿಲ್ಲಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

ಹಿಂದಿನ ಎರಡು ಅವಧಿಯಲ್ಲಿ ಬಿಜೆಪಿಯಿಂದ ಸಂಸದರಾಗಿದ್ದ ಅವರು ಚುನಾವಣಾ ಘೋಷಣೆ ಪೂರ್ವದಲ್ಲಿ ‘ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಅವರ ಪರ ಪ್ರಚಾರ ಮಾಡುತ್ತೇನೆ’ ಎಂದಿದ್ದರು. ಆದರೆ ಬದಲಾದ ರಾಜಕೀಯ ಸಂದರ್ಭದಲ್ಲಿ ಬಿಜೆಪಿಗೆ ವಿದಾಯ ಹೇಳಿ ಕಾಂಗ್ರೆಸ್‌ ಸೇರ್ಪಡೆಯಾಗಲು ಸಿದ್ಧರಾಗಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಅವರು ಕಾಂಗ್ರೆಸ್‌ ಸೇರಲಿದ್ದಾರೆ.

ಹಲವು ಸವಾಲು: ಜಿಲ್ಲೆಯ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮೂರರಲ್ಲಿ ಮತ್ತು ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಅಧಿಕಾರ ಹೊಂದಿದೆ. ಕಾಂಗ್ರೆಸ್ ಶಾಸಕರಲ್ಲಿ ಶಿವರಾಜ ತಂಗಡಗಿ ಎರಡು ಖಾತೆಗಳಿಗೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವಗಿರಿಯನ್ನೂ ಹೊಂದಿದ್ದಾರೆ. ಬಸವರಾಜ ರಾಯರಡ್ಡಿ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರು, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದು, ಮಾಜಿ ಶಾಸಕ ಹಸನಸಾಬ್‌ ದೋಟಿಹಾಳ್ ಕಾಡಾ ಅಧ್ಯಕ್ಷರಾಗಿದ್ದಾರೆ. ಶಾಸಕ ರಾಘವೇಂದ್ರ ಹಿಟ್ನಾಳ ಮುಖ್ಯಮಂತ್ರಿಯವರ ಪರಮಾಪ್ತರು.

ಪಕ್ಷಕ್ಕಾಗಿ ಕೆಲಸ ಮಾಡಿದ ಬಹುತೇಕರಿಗೆ ಈಗಾಗಲೇ ಜಿಲ್ಲೆಯ ಕಾಂಗ್ರೆಸ್‌ ನಾಯಕರಿಗೆ ಸ್ಥಾನಮಾನಗಳು ಲಭಿಸಿವೆ. ಇದರ ಜೊತೆ ಅಪಾರ ಜನಬೆಂಬಲ ಹೊಂದಿರುವ ಸಂಗಣ್ಣ ಕಾಂಗ್ರೆಸ್‌ ಸೇರ್ಪಡೆ ಬಳಿಕ ಯಾವ ಸ್ಥಾನಮಾನಕ್ಕೆ ಬೇಡಿಕೆ ಮುಂದಿಡಲಿದ್ದಾರೆ ಎನ್ನುವುದು ಬಹಿರಂಗವಾಗಿಲ್ಲ. ಕಾಂಗ್ರೆಸ್‌ಗಾಗಿ ಕೆಲಸ ಮಾಡಿದ ಅನೇಕ ಮುಖಂಡರು ಜಿಲ್ಲೆಯಲ್ಲಿದ್ದಾರೆ. ಹೀಗಾಗಿ ಪಕ್ಷ ಅವರಿಗೆ ಯಾವ ರೀತಿ ನಡೆಸಿಕೊಳ್ಳುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಟಿಕೆಟ್‌ ತಪ್ಪಿದ ದಿನದಿಂದಲೇ ಸಂಗಣ್ಣ ಅವರ ಬೆಂಬಲಿಗರು ಬಿಜೆಪಿ ತೊರೆದು ಹಂತಹಂತವಾಗಿ ಕಾಂಗ್ರೆಸ್‌ ಸೇರಿದ್ದಾರೆ. ಕಾರ್ಯಕರ್ತರು ಸಾಗಿದ ಹಾದಿಯಲ್ಲಿಯೇ ಈಗ ಹೊಸ ಸವಾಲಿಗೆ ಸಂಗಣ್ಣ ಅಣಿಯಾಗುತ್ತಿರುವುದು ವಿಶೇಷ.

ಸಿ.ವಿ. ಚಂದ್ರಶೇಖರ್‌
ಸಿ.ವಿ. ಚಂದ್ರಶೇಖರ್‌

ಸಿವಿಸಿ ಮುಂದಿನ ನಡೆ ಏನು?

2018 ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡ ಬಿಜೆಪಿ ತೊರೆದು ಜೆಡಿಎಸ್‌ ಸೇರಿರುವ ಸಿ.ವಿ. ಚಂದ್ರಶೇಖರ್‌ ಮುಂದಿನ ರಾಜಕೀಯ ನಡೆ ಏನು ಎನ್ನುವ ಚರ್ಚೆ ಶುರುವಾಗಿದೆ. ‘ನನಗೆ ಟಿಕೆಟ್ ಕೈ ತಪ್ಪಲು ಸಂಗಣ್ಣ ಕಾರಣ’ ಎಂದು ಚಂದ್ರಶೇಖರ್‌ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು. ಕಳೆದ ವರ್ಷ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಜೆಡಿಎಸ್‌ ರಾಜ್ಯ ಕೋರ್‌ ಕಮಿಟಿ ಸದಸ್ಯರೂ ಆಗಿರುವ ಅವರು ತಮ್ಮ ಮುಂದಿನ ನಡೆ ಬಗ್ಗೆ ‘ಪ‍್ರಜಾವಾಣಿ’ಗೆ ಪ್ರತಿಕ್ರಿಯಿಸಿ ‘ಜೆಡಿಎಸ್‌ನಲ್ಲಿ ನನಗೀಗ ಉತ್ತಮ ಸ್ಥಾನಮಾನವಿದೆ. ಸದ್ಯಕ್ಕೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಕಾದು ನೋಡುವೆ’ ಎಂದರು.

ಆಶೀರ್ವಾದ ಕೋರಿದ ಅಭ್ಯರ್ಥಿ ಹಿಟ್ನಾಳ

ಕೊಪ್ಪಳದ ಸಂಗಣ್ಣ ಕರಡಿ ಅವರ ಮನೆಗ ಮಂಗಳವಾರ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಆಶೀರ್ವಾದ ಕೋರಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ‘ಹಿರಿಯರಾದ ಸಂಗಣ್ಣ ಅವರ ಆಶೀರ್ವಾದ ಕೇಳಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರು ಪಕ್ಷಕ್ಕೆ ಬಂದರೆ ದೊಡ್ಡ ಶಕ್ತಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT