ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹತ್ತಿ ಬೆಳೆಯಲ್ಲಿ ಪರಿಸರ ಸ್ನೇಹಿ ಕೀಟ ನಿರ್ವಹಣೆ ಪ್ರಾತ್ಯಕ್ಷಿಕೆ

Published 10 ಜುಲೈ 2024, 14:21 IST
Last Updated 10 ಜುಲೈ 2024, 14:21 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಗುಡದೂರು ಗ್ರಾಮದ ರೈತ ನಾಗಪ್ಪ ಅವರ 1 ಎಕರೆ ಹತ್ತಿ ಬೆಳೆಯಲ್ಲಿ ಬುಧವಾರ ಕೃಷಿ ವಿಜ್ಞಾನ ಕೇಂದ್ರದಿಂದ ಪರಿಸರ ಸ್ನೇಹಿ ಪದ್ಧತಿಯಿಂದ ಗುಲಾಬಿ ಕಾಯಿಕೊರಕ ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಲಾಯಿತು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ ಮಾತನಾಡಿ, ‘ಹತ್ತಿ ಬೆಳೆಯಲ್ಲಿನ ಗುಲಾಬಿ ಕಾಯಿಕೊರಕ ನಿರ್ವಹಣೆಗೆ ರೈತರು ಅತಿಯಾದ ರಾಸಾಯನಿಕ ಬಳಸುತ್ತಿದ್ದು, ಇದರಿಂದ ರೈತರ ಆರೋಗ್ಯ, ಪರಿಸರ ಎರರೂ ಹಾನಿಯಾಗುತ್ತಿವೆ. ಇದನ್ನು ಮನಗಂಡ ಕ್ರಿಮೀಟ್ ಸಂಸ್ಥೆ ಗುಲಾಬಿ ಕಾಯಿಕೊರಕ ಸಂತಾನೋತ್ಪತ್ತಿ ನಿಯಂತ್ರಣಕ್ಕಾಗಿ ಮೋಹಕವಸ್ತು ಉಪಯೋಗಿಸಿ ಕೀಟಗಳ ಸಂತಾನೋತ್ಪತ್ತಿ ತಡೆಯುತ್ತಿದೆ. ಈ ಮೋಹಕ ಮುಲಾಮುನ್ನು 1 ಎಕರೆ ಭೂಮಿಯಲ್ಲಿ 400 ಕಡೆ ಕಡಲೆಕಾಯಿ ಗಾತ್ರದಷ್ಟು ಹಚ್ಚಬೇಕು’ ಎಂದರು.

‘ರೈತರು ಒಟ್ಟಾರೆ ಹತ್ತಿ ಬೆಳೆಗೆ 40, 65, 90 ದಿನಗಳು ತುಂಬಿದಾಗ 3 ಬಾರಿ ಈ ಮೋಹಕ ಮುಲಾಮನ್ನು ಉಪಯೋಗಿಸಿದರೆ, ಬೆಳೆಯನ್ನು ಕೀಟ ಬಾಧೆಯಿಂದ ತಪ್ಪಿಸಬಹುದು’ ಎಂದು ರೈತರಿಗೆ ಮಾಹಿತಿ ನೀಡಿದರು.

ಸಸ್ಯರೋಗ ತಜ್ಞೆ ಡಾ.ರೇವತಿ ಆರ್.ಎಂ ಅವರು ಹತ್ತಿ ಬೆಳೆಯಲ್ಲಿ ಕಂಡುಬರುವ ರೋಗಗಳ ಬಗ್ಗೆ ರೈತರಿಗೆ ಸವಿಸ್ತಾರವಾಗಿ ವಿವರಿಸಿದರು.

ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನವೀನ್, ಪಂಪಾಪತಿ, ರೈತರಾದ ಹನುಮಂತಪ್ಪ, ಬಸವರಾಜ, ಪಂಪನಗೌಡ, ನಾಗಪ್ಪ, ಯಮನೂರಪ್ಪ ಅವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT