ಗುರುವಾರ , ಜುಲೈ 29, 2021
23 °C
ಪರಿಷ್ಕೃತ ಯೋಜನೆಗಾಗಿ ಸಚಿವರಿಗೆ ಮನವಿ

ಕೊಪ್ಪಳ: ಏತನೀರಾವರಿ ಕಾಮಗಾರಿ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ತಾಲ್ಲೂಕಿನ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯು ಈ ಭಾಗದ ಹೆಚ್ಚಿನ ರೈತರಿಗೆ ಅನುಕೂಲವಾಗದೇ ಇರುವುದರಿಂದ ಯೋಜನೆಯನ್ನು ಪರಿಷ್ಕೃತಗೊಳಿಸಿ ರೈತರಿಗೆ ಹೆಚ್ಚಿನ ನೀರು ಒದಗಿಸಲು ಕ್ರಮಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ  ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರನ್ನು ಒತ್ತಾಯಿಸಲಾಗುವುದು ಎಂದು ಬಿಜೆಪಿ ಮುಖಂಡ ಅಮರೇಶ ಕರಡಿ ಹೇಳಿದರು. 

ತಾಲ್ಲೂಕಿನ ಅಳವಂಡಿ-ಬೆಟಗೇರಿ ಏತನೀರಾವರಿ ಯೋಜನೆಯ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು.

ಈ ಹಿಂದೆ ತಯಾರಿಸಲಾದ ಯೋಜನೆಯು ಬೆಟಗೇರಿ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗುವಂತೆ ಇರಲಿಲ್ಲ. ಕೆಲವು ಗ್ರಾಮಗಳಿಗೆ ಮಾತ್ರ ಅನುಕೂಲವಾಗುವಂತೆ ಯೋಜನೆ ಸಿದ್ಧಪಡಿಸಲಾಗಿತ್ತು. ಇದರಿಂದಾಗಿ ಈ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಹಾಗೂ ಅವರ ಹಳ್ಳಿಗಳಿಗೆ ನೀರು ದೊರಕದಂತಾಗಿದೆ. ಬಿಜೆಪಿ ಸರ್ಕಾರ ಕೂಡಲೇ ಈ ಯೋಜನೆಯನ್ನು ಪರಿಷ್ಕೃತಗೊಳಿಸಿ, ಬೆಟಗೇರಿ ಭಾಗದ ರೈತರಿಗೂ ಅನುಕೂಲವಾಗುವಂತೆ ಯೋಜನೆ ರೂಪಿಸಬೇಕು. ಆ ಮೂಲಕ ಎಲ್ಲಾ ರೈತರಿಗೂ ಸೌಲಭ್ಯ ಸಿಗುವಂತಾಗಬೇಕು ಎಂದರು. 

ಪರಿಷ್ಕೃತ ಯೋಜನೆಯಿಂದಾಗಿ ಬೆಟಗೇರಿ ಭಾಗದ 3 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ಈ ಏತನೀರಾವರಿ ಯೋಜನೆಯ ನೀರು ದೊರಕುತ್ತದೆ. ಈ ಹಿಂದೆ ಬೆಟಗೇರಿ ಗ್ರಾಮಕ್ಕೆ ನೀರು ದೊರಕುವಂತೆ ಯೋಜನೆ ರೂಪಿಸಲಾಗಿತ್ತು. ಹೆಸರಿಗೆ ಮಾತ್ರ ಬೆಟಗೇರಿ ಏತನೀರಾವರಿ ಯೋಜನೆ ಎಂದಾಗಿತ್ತು. ಆದರೆ ಕೇವಲ ಕೆಲವೇ ಗ್ರಾಮಗಳಿಗೆ ನೀರು ದೊರಕುತ್ತಿತ್ತು. ಬೆಟಗೇರಿ ಭಾಗದ ರೈತರಿಗೆ ಅನ್ಯಾಯ ಎಸಗಲಾಗಿತ್ತು ಎಂದು ಅವರು ಆರೋಪಿಸಿದರು.

ಈ ಭಾಗದ ಎಲ್ಲಾ ರೈತರಿಗೂ ಅನುಕೂಲವಾಗುವಂತೆ ಪರಿಷ್ಕೃತ ಯೋಜನೆ ರೂಪಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಈ ಭಾಗದ ಭೂಮಿ ನೀರಾವರಿ ಪ್ರದೇಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಸರ್ಕಾರ, ಸಂಬಂಧಿಸಿದ ಇಲಾಖೆ ಸಚಿವರು ಇತ್ತ ಗಮನಹರಿಸಿ ರೈತರ ಹಿತ ಕಾಪಾಡಬೇಕಿದೆ ಎಂದರು. 

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಳ್ಳಿ, ಎ.ಪಿ.ಎಂ.ಸಿ ಸದಸ್ಯ ಬಸವರಾಜ ಈಶ್ವರಗೌಡ್ರ, ಯುವ ಮುಖಂಡ ವೀರೇಶ್ ಸಜ್ಜನ್, ಶರಣಪ್ಪ ಮತ್ತೂರು ಮತ್ತು ಭೀಮಣ್ಣ ಬೆಟಗೇರಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು