ಸ್ವಾವಲಂಬನೆ, ಪರಿಶ್ರಮದಿಂದ ನಿರುದ್ಯೋಗ ದೂರ

7
ಜಿಲ್ಲಾಮಟ್ಟದ ಉದ್ಯೋಗ ಮೇಳಕ್ಕೆ ಚಾಲನೆ: ನೂರಾರು ಉದ್ಯೋಗಾಕಾಂಕ್ಷಿಗಳ ಭಾಗಿ

ಸ್ವಾವಲಂಬನೆ, ಪರಿಶ್ರಮದಿಂದ ನಿರುದ್ಯೋಗ ದೂರ

Published:
Updated:
Prajavani

ಕೊಪ್ಪಳ: ಕಾಯಕ ಜೀವನದ ಅತ್ಯಮೂಲ್ಯ ಘಟ್ಟ. ಸ್ವಾವಲಂಬನೆ, ಪರಿಶ್ರಮದಿಂದ ನಿರುದ್ಯೋಗ ದೂರಮಾಡಬಹುದು.  ಈ ಸಮಸ್ಯೆ ನಿವಾರಣೆಗೆ ಉದ್ಯೋಗ ಮೇಳ ಸಹಕಾರಿ ಆಗಲಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರೆಡ್ಡಿ  ಹೊಸಮನಿ ಹೇಳಿದರು.

ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಯೋಗದಲ್ಲಿ ಬುಧವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ' ಉದ್ಯೋಗ ಮೇಳ' ಉದ್ಘಾಟಿಸಿ ಅವರು  ಮಾತನಾಡಿದರು.

ನಮ್ಮ ದೇಶದ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಸಿಗುತ್ತಿಲ್ಲ. ಇಂದಿನ ದಿನಗಳಲ್ಲಿ ಉದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ. ದೇಶ ಮತ್ತು ರಾಜ್ಯದಲ್ಲಿ ಸಾಕಷ್ಟು ಜನ ನಿರುದ್ಯೋಗಿಗಳಿದ್ದಾರೆ. ಯುವ ಸಮುದಾಯ ಸಾಕಷ್ಟು ಶಿಕ್ಷಣ ಕಲಿತರೂ ಅವರಿಗೆ ಉದ್ಯೋಗ ದೊರೆಯುತ್ತಿಲ್ಲ. ಜನಸಂಖ್ಯೆ ಅನ್ವಯ ಸರ್ಕಾರಿ ಕೆಲಸವೂ ಇಲ್ಲ. ಸಾಮಾನ್ಯವಾಗಿ ಖಾಸಗಿ ವಲಯಗಳಲ್ಲಿ ಉದ್ಯೋಗವಿದೆ. ಉದ್ಯೋಗ ಮೇಳದ ಮೂಲಕ ಉದ್ಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ನಮ್ಮ ಜಿಲ್ಲೆಯ ಹಾಗೂ ಅಕ್ಕ-ಪಕ್ಕದ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು ಇದರ ಸುದುಪಯೋಗ ಪಡೆದುಕೊಳ್ಳಲಿ. ಅಧುನಿಕ ಯುಗದಲ್ಲಿ ಸ್ಪರ್ಧೆ ಬಹಳ. ಆದರೆ ಅದಕ್ಕೆ ಹೆದರದೆ ಬಂದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಯುವಕರಿಗೆ ಕಿವಿಮಾತು ಹೇಳಿದರು.

ನಿರಂತರ ಪ್ರಯತ್ನ, ಸಾಮರ್ಥ್ಯ ಪ್ರದರ್ಶನ ಮಾಡಿದರೆ ಖಂಡಿತಾ ಯಶಸ್ಸು ದೊರೆಯಲಿದೆ. ಈ ನಿಟ್ಟಿನಲ್ಲಿ ಸರ್ಕಾರವೂ ಕೂಡಾ ಉದ್ಯೋಕಾಂಕ್ಷಿಗಳಿಗೆ ಎಲ್ಲ ಸಹಕಾರ ನೀಡುತ್ತಿದೆ. ಕೌಶಲಕೇಂದ್ರಗಳ ಮೂಲಕ ಉತ್ತಮ ಸ್ಕಿಲ್ ಬೆಳೆಸಿಕೊಂಡು ಉತ್ತಮ ಉದ್ಯೋಗ ಪಡೆದು ಜಿಲ್ಲೆಗೆ ಹೆಸರು ತರಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ ಮಾತನಾಡಿ, 1 ಸಾವಿರ ಐಎಎಸ್ ಹುದ್ದೆಗೆ 3 ಲಕ್ಷ ಅರ್ಜಿ ಬರುತ್ತವೆ. ರಾಜ್ಯದ ಕೆಎಎಸ್‌ನಲ್ಲಿ 600 ಹುದ್ದೆಗೆ 5 ಲಕ್ಷ ಜನ ಅರ್ಜಿ ಹಾಕುತ್ತಾರೆ, ಎಲ್ಲರಿಗೂ ಉದ್ಯೋಗ ನೀಡುವುದು ಕನಸಿನ ಮಾತು. ಸರ್ಕಾರಿ ಕೆಲಸ ದೊರೆತರೆ ತನ್ನ ಕುಟುಂಬವನ್ನು ಮಾತ್ರ ನೋಡಿಕೊಳ್ಳಬಹುದು. ಆದರೆ ಸ್ವಉದ್ಯೋಗದಿಂದ ಸಾವಿರಾರು ಜನರಿಗೆ ಕೆಲಸ ನೀಡಿದ ತೃಪ್ತಿ ನಮ್ಮಲ್ಲಿ ಇರುತ್ತದೆ ಎಂದರು.

ಈ ನಿಟ್ಟಿನಲ್ಲಿ ಖಾಸಗಿ ಕಂಪನಿಗಳಲ್ಲಿ ಕೌಶಲ ಅಭಿವೃದ್ಧಿಗೆ ಹೆಚ್ಚಿನ ಅವಕಾಶ ಇದೆ. ಸೌಲಭ್ಯ ಬಳಸಿಕೊಂಡು ವೈವಿಧ್ಯಮಯ ಕೆಲಸ ಮಾಡಲು ಯುವಕರಿಗೆ ಪ್ರೇರಣೆ ಇದೆ. ವಿದ್ಯಾರ್ಹತೆ, ಕೌಶಲ ಆಧಾರದ ಮೇಲೆ ಉದ್ಯೋಗ ದೊರೆಯುತ್ತವೆ. ಹಿಂದುಳಿದ ಈ ಭಾಗದ ಯುವ ಜನತೆ ಇಂತಹ ಕೌಶಲಯುಕ್ತ ಕೆಲಸಗಳನ್ನು ಪಡೆಯಬೇಕು ಎಂದು ಹೇಳಿದರು.

ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಪಿ.ಎಸ್.ಹಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಉದ್ಯೋಗ ಮೇಳದಲ್ಲಿ 90ಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿವೆ. ಸುಮಾರು 3 ರಿಂದ 4 ಸಾವಿರ ನಿರುದ್ಯೋಗಿಗಳಿಗೆ ಅವರ ವಿದ್ಯಾರ್ಹತೆಯ ಅನುಗುಣವಾಗಿ ಕೆಲಸ ಸಿಗಲಿದೆ. ಸಂದರ್ಶನವನ್ನು ಯಾವ ರೀತಿ ಎದುರಿಸಬೇಕು ಎಂಬುದರ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ನೋಂದಾಯಿತ ಎಲ್ಲ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಗುರುವಾರ ಸಂದರ್ಶನ ನಡೆಯಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಡಿ.ಗೀತಾ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್, ಜಿಲ್ಲಾ ಕಾರ್ಮಿಕಾಧಿಕಾರಿ ಚಂದ್ರಶೇಖರ ಹೈಲಿ, ತಹಶೀಲ್ದಾರ್ ಜೆ.ಬಿ.ಮಜ್ಗಿ, ಜಿಲ್ಲಾ ಕೌಶಾಲಾಭಿವೃದ್ಧಿ ಅಧಿಕಾರಿ ಭೀಮನಗೌಡ ಹೊಸಮನಿ ಇದ್ದರು.

ಸಂಪನ್ಮೂಲ ವ್ಯಕ್ತಿಗಳಾದ ವಿಶ್ವನಾಥ ಹಾಗೂ ಸಾಧನ ಕೋಟೆ ಸಂದರ್ಶನ ಎದುರಿಸುವ ಬಗೆ, ಸ್ವಪರಿಚಯ ಪತ್ರ ಬರೆಯುವುದು. ಬಹುರಾಷ್ಟ್ರೀಯ ಕಂಪೆನಿಗಳ ರೀತಿ, ನೀತಿ ಮುಂತಾದವುಗಳ ಕುರಿತು ಉಪನ್ಯಾಸ ನೀಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !