ತುಂಗಭದ್ರಾ ಜಲಾಶಯ: ದಾಖಲೆ ಪ್ರಮಾಣದ ನೀರು ಹೊರಕ್ಕೆ

7
ಕಂಪ್ಲಿ ಸೇತುವೆ ಮುಳುಗಡೆ: ಕಾಲುವೆ ಸುತ್ತ ನಿಷೇಧಾಜ್ಞೆ

ತುಂಗಭದ್ರಾ ಜಲಾಶಯ: ದಾಖಲೆ ಪ್ರಮಾಣದ ನೀರು ಹೊರಕ್ಕೆ

Published:
Updated:
Deccan Herald

ಕೊಪ್ಪಳ: ಮುನಿರಾಬಾದ್ ಸಮೀಪದ ತುಂಗಭದ್ರಾ ಜಲಾಶಯಕ್ಕೆ ವ್ಯಾಪಕವಾಗಿ ನೀರು ಹರಿದು ಬರುತ್ತಿದ್ದು, ಎಲ್ಲ 32 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರು ಹೊರಗೆ ಹೊರಬಿಡಲಾಗುತ್ತಿದೆ.

ಕಳೆದ 15 ದಿನಗಳಿಂದ ನದಿಗೆ 30 ಟಿ.ಎಂ.ಸಿ ಅಡಿಗೂ ಹೆಚ್ಚು ನೀರು ಹರಿದು ಹೋಗಿದ್ದು, ಒಳಹರಿವು ಹೆಚ್ಚುತ್ತಿರುವ ಕಾರಣ ಬುಧವಾರದಿಂದ 1,48,072 ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಇದರಿಂದ ಗಂಗಾವತಿ ಸಮೀಪದ ಕಂಪ್ಲಿ ಸೇತುವೆ ಮುಳುಗಡೆಯಾಗಿದೆ. ನಾಳೆಯಿಂದ 2 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡಲಾಗುವುದು. ನದಿಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಜಲಾಶಯ ಆಡಳಿತ ಮಂಡಳಿ ತಿಳಿಸಿದೆ.

ಶಿವಮೊಗ್ಗ ಭಾಗ ಸೇರಿದಂತೆ ಹಿನ್ನೀರಿನ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜಲಾಶಯದಲ್ಲಿ ಅಪಾರ ಪ್ರಮಾಣದ ನೀರು ಶೇಖರಣೆಯಾಗುತ್ತಿದೆ. ನದಿಯಲ್ಲಿ ಪ್ರವಾಹೋಪಾದಿಯಲ್ಲಿ ನೀರು ಹರಿದು ಹೋಗುತ್ತಿದ್ದು, ದಂಡೆಯಲ್ಲಿರುವ ಐತಿಹಾಸಿಕ ಕ್ಷೇತ್ರಗಳಾದ ಹುಲಿಗಿ, ಕಡ್ಡಿರಾಂಪುರ, ಅಂಜನಾದ್ರಿ ಸೇರಿದಂತೆ ವಿವಿಧೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. 

ಕಾಲುವೆಗಳಿಗೆ ನೀರನ್ನು ಬಿಡಲಾಗಿದ್ದು, ಕೊನೆಯ ಭಾಗದ ರೈತರಿಗೂ ಕೂಡಾ ಈ ಬಾರಿ ನೀರು ದೊರೆಯುವ ಲಕ್ಷಣ ಇದೆ. ಕಾಲುವೆ ಸುಸ್ಥಿತಿ ಮತ್ತು ನೀರನ್ನು ಅಕ್ರಮವಾಗಿ ಎತ್ತುವುದರ ವಿರುದ್ಧ ಸಿಬ್ಬಂದಿ ಕಟ್ಟುನಿಟ್ಟಿನ ಕಾವಲು ಕಾಯುತ್ತಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆ ಕಾಲುವೆ ಸುತ್ತಮುತ್ತ ನಿಷೇಧಾಜ್ಞೆ ವಿಧಿಸಿದೆ.

ಜಲಾಶಯದ ಎದುರಿನ ಹಳೆಯ ಸೇತುವೆ ಮುಳುಗಡೆ ಹಂತ ತಲುಪಿದೆ. ಮುಂಜಾಗ್ರತಾ ಕ್ರಮವಾಗಿ ಸಂಚಾರವನ್ನು ನಿಷೇಧಿಸಲಾಗಿದೆ. ಜಲಾಶಯ ಮತ್ತು ನದಿಪಾತ್ರದ ಸುತ್ತ ಎರಡು–ಮೂರು ದಿನಗಳಿಂದ ಜಿಟಿಜಿಟಿ ಮಳೆ ಆಗುತ್ತಿದ್ದು,  ಮಲೆನಾಡಿನ ವಾತಾವರಣ ಗೋಚರಿಸುತ್ತಿದೆ. 

ಪಂಪಾವನ ಹಾಗೂ ಜಲಾಶಯ ವೀಕ್ಷಣೆಗೆ ಪ್ರತಿದಿನ ಸಾವಿರಾರು ಪ್ರವಾಸಿಗರೂ ಲಗ್ಗೆ ಹಾಕಿದ್ದು, ಜನಜಂಗುಳಿಯಿಂದ ತುಂಬಿದೆ. ಬುಧವಾರ ಸ್ವಾತಂತ್ರ್ಯೋತ್ಸವ ದಿನವಾಗಿದ್ದರಿಂದ ಜಲಾಶಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಕಣ್ಮನ ಸೆಳೆಯುತ್ತಿದೆ. 


ದೀಪದ ಬೆಳಕಿನಲ್ಲಿ ತುಂಗಭದ್ರಾ ಜಲಾಶಯ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !