ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ| ಮಳೆ ಹಾನಿ: ಅರ್ಹರಿಗೆ ಪರಿಹಾರ ನೀಡಿ

ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಸೂಚನೆ
Last Updated 22 ಅಕ್ಟೋಬರ್ 2020, 2:38 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಸುರಿಯುತ್ತಿರುವ ಅತಿಯಾದ ಮಳೆಯಿಂದ ಹಾನಿಯಾದ ಬೆಳೆಗಳ ಕುರಿತು ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಜಂಟಿ ಸಮೀಕ್ಷೆ ನಡೆಸಿ ನಿಖರ ಮಾಹಿತಿ ನೀಡಿ, ನೈಜ ಸಂತ್ರಸ್ತರಿಗೆ ಪರಿಹಾರ ಒದಗಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಬುಧವಾರ ಮಳೆಯಿಂದ ಜಿಲ್ಲೆಯಲ್ಲಿ ಆದ ಹಾನಿಯ ಕುರಿತು ನಡೆದ ವಿಶೇಷ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಬೆಳೆ ವಿಮಾ ಯೋಜನೆಯಡಿ ವಿಮೆ ಕಂತು ಪಾವತಿ ಮಾಡಿ, ಮಳೆಯ ಕಾರಣದಿಂದ ಬಿತ್ತನೆ ಮಾಡದಿರುವ ರೈತರಿಗೆ ಶೇ 25 ರಷ್ಟು ವಿಮಾ ಮೊತ್ತ ನೀಡಲು ಅವಕಾಶವಿದ್ದು, ಈ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ವಹಿಸಿ. ಬೆಳೆ ವಿಮೆ ಪಾವತಿಗೆ ಇರುವ ಮಾನದಂಡ, ವಿನಾಯಿತಿ ಕುರಿತುವ್ಯಾಪಕವಾಗಿ ಪ್ರಚಾರ ಮಾಡಿ ಎಂದರು.

ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದ ತಾಲ್ಲೂಕಿನ ಕೋಳೂರು ಬ್ರಿಡ್ಜ್ ಕಂ ಬ್ಯಾರೇಜ್ ಹಾನಿಯಾಗಿದೆ. ಇದರಿಂದ ಆ ಭಾಗದ ಗ್ರಾಮಸ್ಥರ ಜಮೀನುಗಳಿಗೆ ನೀರು ನುಗ್ಗಿದ್ದು, ಅವರಿಗೆ ಪರಿಹಾರ ವಿತರಣೆಯಲ್ಲಿ ಸೂಕ್ತ ಮಾನದಂಡ ಅನುಸರಿಸಿ ಶೀಘ್ರ ಪರಿಹಾರ ಒದಗಿಸಲು ಕ್ರಮವಹಿಸಿ. ಯಾವುದೇ ಮುನ್ನೆಚ್ಚರಿಕೆ ನೀಡದೆ ಹಳ್ಳದಿಂದ ನೀರು ಬಿಡುಗಡೆ ಮಾಡಿ ಅಪಾರ ನಷ್ಟಕ್ಕೆ ಕಾರಣವಾದ ಅಧಿಕಾರಿ, ಸಿಬ್ಬಂದಿ ವಿರುದ್ದ ವರದಿ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಹೇಳಿದರು.

ಜಿಲ್ಲೆಯಲ್ಲಿರುವ ಒಟ್ಟು ಕೆರೆ, ಹಳ್ಳಗಳನ್ನು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಮತ್ತು ಆಯಾ ತಾಲ್ಲೂಕು ಅಧಿಕಾರಿಗಳು ಪರಿಶೀಲಿಸಿ ಹಾನಿಯಾಗಬಹುದಾದ ಮತ್ತು ಹಾನಿಯಾಗದ ಕೆರೆ, ಹಳ್ಳಗಳಪಟ್ಟಿ ಮಾಡಿ. ಮಳೆಯಿಂದ ಹಾನಿಯಾದ ಮನೆಗಳಿಗೆ, ಹಸು, ಎಮ್ಮೆ, ಎತ್ತುಗಳ ಸಾವು ಮತ್ತು ಮಾನವ ಜೀವ ಹಾನಿಗೆ ತಕ್ಷಣವೇ ಪರಿಹಾರ ಒದಗಿಸಿ. ಮನೆಹಾನಿಯಲ್ಲಿ ನೀಡಲಾಗುವ ಪರಿಹಾರಕ್ಕೆ ಸರ್ಕಾರದ ಮಾರ್ಗಸೂಚಿ ಅನುಸರಿಸಿ, ಹಾನಿ ಪ್ರಮಾಣಕ್ಕನುಸಾರವಾಗಿ ಶೀಘ್ರ ಪರಿಹಾರ ಒದಗಿಸಿ ಎಂದರು.

ಇನ್ನೂ ಮೂರು ದಿನ ವ್ಯಾಪಕ ಮಳೆಯಾಗುವ ಸಂಭವವಿದ್ದು,ಎಲ್ಲ ಇಲಾಖೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದು, ತುರ್ತು ಕರ್ತವ್ಯ ನಿರ್ವಹಣೆಗೆ ಸಿದ್ಧರಾಗಿರಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸಬೇಕು ಎಂದುಸೂಚನೆ ನೀಡಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿದರು.

ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು ಮಾತನಾಡಿ, ಕನಕಗಿರಿ ಕ್ಷೇತ್ರದಲ್ಲಿನ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ವಾಸವಿದ್ದು, ಸಂಜೆ ಆದೊಡನೆ ಮೊಬೈಲ್ ನಾಟ್‍ರೀಚಬಲ್ ಆಗುತ್ತದೆ. ತುರ್ತು ಸಂದರ್ಭದಲ್ಲಿ ಶಾಸಕರ ಸಲಹೆ ಕೇಳುವಂತೆ ಸೂಚನೆ ನೀಡಬೇಕು. ಹಿಂದೆ ಮಾಡಿದ ಕಳಪೆ ಕಾಮಗಾರಿಯಿಂದ ರಸ್ತೆ ಎಲ್ಲ ಹಾಳಾಗಿ ಹೋಗಿವೆ ಎಂದರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ,ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಸಹಾಯಕ ಆಯುಕ್ತ ನಾರಾಯಣರಡ್ಡಿ ಕನಕರಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ಧರಾಮೇಶ್ವರ, ವಿವಿಧ ತಾಲ್ಲೂಕುಗಳ ತಹಶೀಲ್ದಾರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT