ಬುಧವಾರ, ಜೂನ್ 29, 2022
24 °C

ಕೊಪ್ಪಳ: 5000 ಬಡ ಮಕ್ಕಳ ಹಾಸ್ಟೆಲ್‌ನ ಭೂಮಿ ಫೂಜೆ ವೇಳೆ ಕಣ್ಣೀರಾದ ಗವಿಮಠ ಶ್ರೀಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಇಲ್ಲಿನ ಗವಿಮಠದ ಆವರಣದಲ್ಲಿ ಗುರುವಾರ 5 ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯಕ್ಕೆ ಭೂಮಿಪೂಜೆಯನ್ನು ಸಚಿವ ಆನಂದ್ ಸಿಂಗ್ ಅವರು ಗುರುವಾರ ನೇರವೇರಿಸಿದರು.

ಈ ವೇಳೆ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಠದ ವಿದ್ಯಾರ್ಥಿಗಳ ಬಗ್ಗೆ ಮಾತನಾಡುವಾಗ ಭಾವನಾತ್ಮಕವಾಗಿ ಕಣ್ಣೀರಾದ ಪ್ರಸಂಗ ಜರುಗಿತು.

'ಮರಿಶಾಂತವೀರ ಸ್ವಾಮೀಜಿ 16 ವರ್ಷ ಕಾಶಿಯಲ್ಲಿ ಆಯುರ್ವೇದ, ಸಂಸ್ಕೃತ ಹಾಗೂ ಯೋಗ ವಿದ್ಯಾಭ್ಯಾಸ ಮಾಡಿ ಕೊಪ್ಪಳಕ್ಕೆ ಮರಳಿದರು. ಶ್ರೀಗಳು ಊರೂರು ತಿರುಗಿ ಭಿಕ್ಷೆ ಭೇಡಿ ಮಕ್ಕಳಿಗೆ ಶಿಕ್ಷಣ ನೀಡಿದರು. ಆಗ ಇನ್ನು ಪ್ರಸಾದ ನಿಲಯ ಆರಂಭಿಸಿರಲಿಲ್ಲ. ಮಠಕ್ಕೆ ಬಂದ ಭಕ್ತರು ಮೀಸಲು ತುಪ್ಪದ ದೀಪ ಹಚ್ಚಿದರೆ ಮಕ್ಕಳು ಅದನ್ನು ತಿನ್ನುತ್ತಿದ್ದರು. ಭಕ್ತರು ಅಕ್ರೋಶಗೊಂಡು ಅಂತಹ ಮಕ್ಕಳನ್ನು ಮಠದಿಂದ ಹೊರ ಕಳುಹಿಸಲು ತಿಳಿಸಿದ್ದರು. ಆಗ ಶ್ರೀಗಳು ನೀವು ನಂದಿ ಹೋಗುವ ದೀಪಕ್ಕೆ ಮೀಸಲು ತುಪ್ಪ ಹಾಕಿದ್ದೀರಿ. ನೀವು ಹಾಕಿದ ತುಪ್ಪ ತಿಂದು ಮಕ್ಕಳು ಅರಳುತ್ತವೆ ಎಂದು ತಿಳಿಸಿ ತಕ್ಷಣವೇ ಪ್ರಸಾದ ನಿಲಯ ಆರಂಭಿಸಿದರು' ಎಂದು ಭಾವನಾತ್ಮಕವಾಗಿ ನುಡಿದರು.

ಗವಿಮಠದಲ್ಲಿ 2002-03ರಲ್ಲಿ 160 ಮಾತ್ರ ಮಕ್ಕಳಿದ್ದರು

ಈಗ ಅವರ ಸಂಖ್ಯೆ 3500ಕ್ಕೆ ಏರಿಕೆಯಾಗಿದೆ. ನಮ್ಮಲ್ಲಿ 2,000 ಮಕ್ಕಳಿಗೆ ಉಚಿತ ವಸತಿ ಹಾಗೂ ಪ್ರಸಾದ ನಿಲಯವಿದೆ. ಉಳಿದವರಿಗೆ ಮಠದ ವಿವಿಧ ಹಾಲ್ ಗಳು ಹಾಗೂ ಕೊಠಡಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ  5,000 ಮಕ್ಕಳ ಉಚಿತ ವಸತಿ ಹಾಗೂ ಪ್ರಸಾದ ನಿಲಯಕ್ಕೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದರು.

ಜೋಳಿಗೆ ತುಂಬಲು ಭಗವಂತ ಶಕ್ತಿ ನೀಡಲಿ

ನಾನು ಬಡತನದಿಂದ ಬಂದಿದ್ದೇನೆ. ಗವಿಮಠ ಅನ್ನ, ಊಟ ಹಾಗೂ ಪುಸ್ತಕ ಕೊಟ್ಟು ಓದಿಸಿದೆ. ಮಕ್ಕಳು ವಿದ್ಯಾವಂತರಾಗಬೇಕು ಎಂಬ ಉದ್ದೇಶ ಮಠದ ಸಂಕಲ್ಪವಾಗಿದೆ. ಎಷ್ಟು ಶಕ್ತಿ ಇದೆ ಅಷ್ಟೂ ಮಕ್ಕಳನ್ನು ಓದಿಗೆ ನೆರವಾಗುತ್ತೇನೆ. ಗವಿಸಿದ್ಧ ನನ್ನ ಜೋಳಿಗೆಗೆ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಭಾವುಕರಾದರು. 

ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಚಿವ ಆನಂದ್ ಸಿಂಗ್ ಅವರು, ನಮ್ಮ ದೇಶದಲ್ಲಿ ಮೊದಲ ಆದ್ಯತೆ ಶಿಕ್ಷಣಕ್ಕೆ ನೀಡಬೇಕು. ಮಠ, ಸಂಘಟನೆಗಳು ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣದಿಂದ ಮಾತ್ರ ಬಡತನ ನಿರ್ಮೂಲನೆ ಆಗಲಿದೆ ಎಂದರು.

ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಗವಿಮಠದಲ್ಲಿ ಬೆಳೆದು ವಿದ್ಯಾಭ್ಯಾಸ ಮಾಡಿ ಮಠದ ಪೀಠಾಧಿಪತಿಯಾಗಿದ್ದಾರೆ. ತಾವು ಅನುಭವಿಸಿದ ಕಷ್ಟಗಳು ವಿದ್ಯಾರ್ಥಿಗಳಿಗೆ ಆಗಬಾರದು ಎಂದು ಸಂಕಲ್ಪ ಮಾಡಿದ್ದಾರೆ. ವಿದ್ಯಾರ್ಥಿ ನಿಲಯ ಕಟ್ಟಲು ಶ್ರೀಗಳ ಜೋಳಿಗೆಗೆ ಶಕ್ತಿ ತುಂಬುತ್ತೇನೆ ಎಂದರು.

ವಿಶೇಷ ಅನುದಾನಕ್ಕೆ ಸಿಎಂಗೆ ಮನವಿ

ಗವಿಮಠ ಕೊಪ್ಪಳಕ್ಕೆ ಆಸ್ತಿಯಾಗಿದೆ. ಮಕ್ಕಳ ವಿದ್ಯಾಭಾಸದ ದೃಷ್ಟಿಯಿಂದ ಪಕ್ಷಾತೀತವಾಗಿ ಕೊಪ್ಪಳ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ನಿಯೋಗ ಸಿಎಂ ಬಳಿ ತೆರಳಿ ಮಠಕ್ಕೆ ವಿಶೇಷ ಅನುದಾನ ನೀಡಲು ಮನವಿ ಮಾಡಲಾಗುವುದು. ಸಚಿವ ಹಾಲಪ್ಪ ಆಚಾರ್ ಅವರ ನೇತೃತ್ವದಲ್ಲಿ ನಿಯೋಗ ಶೀಘ್ರವೇ ಹೋಗಲಾಗುವುದು ಎಂದು ಆನಂದ್ ಸಿಂಗ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು