ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RTO ಸೇವೆಗಳು ಆನ್‌ಲೈನ್‌ ಆದರೂ ವ್ಯಾಪಕ ಭ್ರಷ್ಟಾಚಾರ: ಸಂಸದ ಸಂಗಣ್ಣ ಅಸಮಾಧಾನ

Last Updated 26 ಮಾರ್ಚ್ 2023, 11:16 IST
ಅಕ್ಷರ ಗಾತ್ರ

ಕೊಪ್ಪಳ: ’ಈಗ ಎಲ್ಲವೂ ಆನ್‌ಲೈನ್‌ನಲ್ಲಿ ಜನರಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಆರ್‌ಟಿಒ ಕಚೇರಿ ಅಧಿಕಾರಿಗಳು ಹೇಳುತ್ತಿದ್ದರೂ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಇಲ್ಲಿನ ಎಸ್‌.ಕೆ. ಪಾಟೀಲ ಲೇ ಔಟ್‌ನಲ್ಲಿ ನಿರ್ಮಿಸಲಾದ ಕೊಪ್ಪಳ ಪ್ರಾದೇಶಿಕ ಸಾರಿಗೆ ಕಚೇರಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು ‘ಆಡಳಿತದಲ್ಲಿ ಸುಧಾರಣೆಯಾಗಬೇಕು. ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಇಲ್ಲಿನ ಕಚೇರಿಯಲ್ಲಿ ಆರ್‌ಟಿಒ ಅಧಿಕಾರಿ ಕೇಂದ್ರ ಸ್ಥಾನದಲ್ಲಿಯೇ ಇರುವುದಿಲ್ಲ ಎನ್ನುವ ದೂರುಗಳಿವೆ. ಇವುಗಳ ಬಗ್ಗೆ ಕ್ರಮ ವಹಿಸಬೇಕು’ ಎಂದರು. ಆಗ ಜನ ಚಪ್ಪಾಳೆ ಹೊಡೆದರು. ಇದಕ್ಕೆ ಪ್ರತಿಕ್ರಿಯಿಸಿ ‘ಸತ್ಯ ಇದ್ದರಷ್ಟೇ ಜನ ಬೆಲೆ ಕೊಡುತ್ತಾರೆ’ ಎಂದರು.

‘ರಾಜಕಾರಣಿಗಳೆಲ್ಲ ಈಗ ಚುನಾವಣೆಯ ಗುಂಗಿನಲ್ಲಿದ್ದೇವೆ. ಚುನಾವಣೆಯ ವೇಳೆ ಜನರ ಬಗ್ಗೆ ನಮಗೆ ಇರುವ ಕಾಳಜಿ ಚುನಾವಣೆಯ ಬಳಿಕ ಇರುವುದಿಲ್ಲ. ಈ ಮನಸ್ಥಿತಿ ಬದಲಿಸಿಕೊಂಡು ಸಾಮಾಜಿಕ ಕಾಳಜಿಯಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೆಲಸ ಮಾಡಬೇಕು. ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

’ದೇಶ ಹಾಗೂ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ದಶಪಥಗಳ ರಸ್ತೆಗಳನ್ನು ನಿರ್ಮಿಸಿದರೂ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಮತ್ತು ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜನಸಂಖ್ಯೆ ಏರಿಕೆಗೆ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕಾಗಿದೆ. ಗಂಡು ಮಗುವೇ ಬೇಕು ಎನ್ನುವ ಧೋರಣೆ ಬದಲಾಗಬೇಕು. ಗಂಡಿಗಿಂತ ಹೆಣ್ಣುಮಕ್ಕಳೇ ಎಲ್ಲರ ಬಗ್ಗೆ ಕಾಳಜಿ ವಹಿಸುತ್ತಾರೆ’ ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ ‘ಕಟ್ಟಡ ನಿರ್ಮಾಣ ಮಾಡುವಂತೆ ಹಿಂದಿನ ಸಮ್ಮಿಶ್ರ ಸರ್ಕಾರದ ವೇಳೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆರ್‌ಟಿಒ ಅಧಿಕಾರಿಗಳು ಎಲ್‌ಎಲ್ಆರ್‌ ಕೊಡುವ ಸಮಯದಲ್ಲಿಯೇ ಚಾಲನಾ ತರಬೇತಿ ನೀಡಬೇಕು. ಅಪಾಯಕಾರಿ ವಾಹನ ಚಾಲನೆ ಬಗ್ಗೆ ಜಾಗೃತಿ ಮೂಡಿಸಬೇಕು. ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಸಾರ್ವಜನಿಕರ ಜೊತೆ ಸ್ನೇಹಮಯವಾಗಿ ಇರಬೇಕು’ ಎಂದು ಸಲಹೆ ನೀಡಿದರು.

ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಎಸ್‌. ಪಾಟೀಲ, ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೇಯ, ಧಾರವಾಡ ಉತ್ತರದ ಹೆಚ್ಚುವರಿ ಸಾರಿಗೆ ಆಯುಕ್ತ (ಪ್ರವರ್ತನ) ಮಾರುತಿ ಸಾಂಬ್ರಾಣಿ, ಡಿವೈಎಸ್‌ಪಿ ಶರಣಪ್ಪ ಸುಬೇದಾರ್‌, ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್‌.ಬಿ. ನಾಲವರ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT