ಕುಷ್ಟಗಿ: ಐರ್ಲೆಂಡ್‌ನಲ್ಲಿ ಉದ್ಯೋಗ ಕಂಡುಕೊಂಡಿದ್ದ ಪಟ್ಟಣದ ಯುವಕ ಶ್ರೀಧರ ನಾಡಗೌಡ ವಾರದ ಹಿಂದೆಯೇ ಹೃದಯಾಘಾತದಿಂದ ಮೃತಪಟ್ಟಿದ್ದು, ಮೃತದೇಹದ ನಿರೀಕ್ಷೆಯಲ್ಲಿ ಹೆತ್ತವರು ಇಲ್ಲಿ ಹಗಲು ರಾತ್ರಿ ಕಣ್ಣೀರಿಡುತ್ತಿದ್ದಾರೆ.
ತಾಲ್ಲೂಕು ಪಂಚಾಯಿತಿ ನಿವೃತ್ತ ವ್ಯವಸ್ಥಾಪಕ ರೇವಣ್ಣ ನಾಡಗೌಡ ದಂಪತಿಯ ದ್ವಿತೀಯ ಪುತ್ರ ಕಳೆದ ಜೂನ್‌ನಲ್ಲಿ ಐರ್ಲೆಂಡ್‌ಗೆ ತೆರಳಿದ್ದ. ತುಮಕೂರಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ನಂತರ ಐರ್ಲೆಂಡ್ ರಾಜಧಾನಿ ಡಬ್ಲಿನ್‌ನಲ್ಲಿ ಉನ್ನತ ವ್ಯಾಸಂಗ ಮುಗಿಸಿ ನಂತರ ಅದೇ ದೇಶದ ಗಾಲ್ವೆಯಲ್ಲಿನ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಕಂಡುಕೊಂಡಿದ್ದ.
ಶ್ರೀಧರ ಜುಲೈ 31ರಂದು ಮೃತಪಟ್ಟಿದ್ದು, ಕಂಪನಿಯ ಮೂಲಕ ಹೆತ್ತವರಿಗೆ ವಿಷಯ ತಿಳಿದಿದೆ. ಮೃತದೇಹ ಶುಕ್ರವಾರದ ವೇಳೆಗೆ ಬೆಂಗಳೂರು ತಲುಪುವ ನಿರೀಕ್ಷೆ ಇದೆ. ಇನ್ನೊಬ್ಬ ಹಿರಿಯ ಪುತ್ರ ಶ್ರೀಕಾಂತ ನಾಡಗೌಡ ಜರ್ಮನಿಯಲ್ಲಿ ಉದ್ಯೋಗಿಯಾಗಿದ್ದಾನೆ.