ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಗಿರಿ | ಶೌಚಾಲಯ, ಕಾಯಂ ಉಪನ್ಯಾಸಕರ ಕೊರತೆ

ಸೌಲಭ್ಯ ಕೊರತೆ ನಡುವೆ ಉತ್ತಮ ಸಾಧನೆ: ಜನಪ್ರತಿನಿಧಿಗಳ ಜಾಣ ಮೌನ
Published 30 ಜೂನ್ 2024, 6:58 IST
Last Updated 30 ಜೂನ್ 2024, 6:58 IST
ಅಕ್ಷರ ಗಾತ್ರ

ಕನಕಗಿರಿ: ಸುವರ್ಣ ಮಹೋತ್ಸವ ಸಂಭ್ರಮದ ಹೊಸ್ತಿಲಲ್ಲಿರುವ ಇಲ್ಲಿನ‌ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡೆ, ಸಹ ಪಠ್ಯ ಚಟುವಟಿಕೆ, ಉತ್ತಮ ಪರೀಕ್ಷಾ ಫಲಿತಾಂಶಕ್ಕೆ ಹೆಸರುವಾಸಿ. ಕಾಲೇಜಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿದ್ದು ಒಟ್ಟು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಆದರೆ ಕಾಯಂ ಉಪನ್ಯಾಸಕರ ಕೊರತೆ ಕಾಡುತ್ತಿದೆ.

ಕಾಲೇಜಿನ ವಿದ್ಯಾರ್ಥಿಗಳಿಗೆ ಶೌಚಾಲಯವೇ ಇಲ್ಲ. ಬಾಲಕರಿಗೆ ಬಯಲೇ ಶೌಚಾಲಯವಾದರೆ, ವಿದ್ಯಾರ್ಥಿನಿಯರು ಪ್ರೌಢಶಾಲೆಯ ಶೌಚಾಲಯ ಬಳಕೆ ಮಾಡುತ್ತಿದ್ದಾರೆ. ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಪ್ರಥಮ, ದ್ವಿತೀಯ ದರ್ಜೆಯ ಸಹಾಯಕರ ಹುದ್ದೆಗಳು ಖಾಲಿ ಉಳಿದುಕೊಂಡಿವೆ.

ಒಟ್ಟು 11 ಜನರಲ್ಲಿ ಇಬ್ಬರು ಮಾತ್ರ ಕಾಯಂ ಉಪನ್ಯಾಸಕರಿದ್ದು, ಅದರಲ್ಲಿ ಒಬ್ಬರನ್ನು ಬೇರೆಡೆಗೆ‌ ನಿಯೋಜನೆ ಮಾಡಿದ್ದರೆ, ಮತ್ತೊಬ್ಬರು ಪ್ರಭಾರ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕ್ಲರ್ಕ್ ಇಲ್ಲದ ಕಾರಣ ಪ್ರಾಚಾರ್ಯರೇ ಟಿ.ಸಿ, ಅಂಕಪಟ್ಟಿ ನೀಡುವ ಕೆಲಸ ಹಾಗೂ ಸಿಬ್ಬಂದಿ ವೇತನ ಕೆಲಸ ಮಾಡಬೇಕಿದೆ. ಇದಕ್ಕೆ ಅತಿಥಿ ಉಪನ್ಯಾಸಕರು ನೆರವಾಗುತ್ತಿದ್ದಾರೆ.

ಕಾಲೇಜಿನಲ್ಲಿರುವ ಕೆಲ ಕೊಠಡಿಗಳು ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಸಂಕಷ್ಟ ಎದುರಿಸಬೇಕಾಗಿದೆ. 
ಕಾಲೇಜಿಗೆ ಮೂರು ಕೊಠಡಿಗಳ ತುರ್ತು ಅಗತ್ಯವಿದ್ದು,  ವಿಜ್ಞಾನ ಪ್ರಯೋಗಾಲಯಕ್ಕೆ ಎರಡು ಹಾಗೂ  ಗ್ರಂಥಾಲಯ‌ಕ್ಕೆ ಕೊಠಡಿ ಬೇಕಿದೆ. ವಿದ್ಯಾರ್ಥಿಗಳು ಕೂಡಲು ಬೆಂಚ್ ಇದ್ದರೂ ಎಲ್ಲರಿಗೂ ಸಾಕಾಗುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದರು.

‘ಕಾಲೇಜಿನಲ್ಲಿ ವಿಶಾಲವಾದ ಕ್ರೀಡಾಂಗಣವಿದ್ದರೂ ದೈಹಿಕ ಶಿಕ್ಷಣ ಉಪನ್ಯಾಸಕರೇ ಇಲ್ಲ. ಅತಿಥಿ ಉಪನ್ಯಾಸಕರು ಹಾಗೂ ಹಿರಿಯ ವಿದ್ಯಾರ್ಥಿಗಳೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ಯಾವ ಪಕ್ಷದ ಶಾಸಕರೇ ಇರಲಿ ಸ್ಥಳೀಯ ಮುಖಂಡರು ಕಾಲೇಜು ಅಭಿವೃದ್ಧಿ ಬಗ್ಗೆ ಎಳ್ಳಷ್ಟು ಕಾಳಜಿ ವಹಿಸಿಲ್ಲ. ಬದಲಾಗಿ ಪದವೀಧರ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ವಿಧಾನ‌ ಪರಿಷತ್ ಚುನಾವಣೆಯಲ್ಲಿ ತಮಗೆ ಬೆಂಬಲಿಸಿ ಅಂತ ಧಾವಿಸಿ ಬರುತ್ತಾರೆ. ಆಮೇಲೆ ಅವರ ದರ್ಶನ‌ ಇರುವುದಿಲ್ಲ. ಗೆದ್ದವರು ಸಹ ಈ ಕಡೆಗೆ ಇಣುಕಿ ನೋಡಿಲ್ಲ’ ಎಂದು ಹೆಸರು ಹೇಳಲು ಬಯಸದ ಅತಿಥಿ ಉಪನ್ಯಾಸಕರೊಬ್ಬರು ಕಿಡಿ ಕಾರಿದರು.

ಜನಪ್ರತಿನಿಧಿಗಳು ಮೌನ:  ಕಾಲೇಜು ಅಭಿವೃದ್ಧಿ ಸಮಿತಿಗೆ‌ ಶಾಸಕರೇ ಅಧ್ಯಕ್ಷರಾಗಿದ್ದರೂ ಕಳೆದ ಇಪ್ಪತ್ತು ವರ್ಷಗಳಿಂದಲೂ ಸಿಡಿಸಿ ರಚನೆಯಾಗಿಲ್ಲ. ವಿದ್ಯಾರ್ಥಿಗಳ ಕುಂದುಕೊರತೆ ಆಲಿಸಲು ಜಾಗೃತಿ ವಹಿಸುತ್ತಿದ್ದ ಸ್ಥಳೀಯ ವಿದ್ಯಾರ್ಥಿ ನಾಯಕರು ರಾಜಕೀಯದಲ್ಲಿ ಸಕ್ರಿಯವಾಗಿರುವ ಪರಿಣಾಮ ತಮ್ಮ ಸರ್ಕಾರದ‌ ವಿರುದ್ದ ಹೋರಾಟ ಮಾಡುವ‌ ಧೈರ್ಯ ತೋರಿಸುತ್ತಿಲ್ಲ. ಹೀಗಾಗಿ ಬಸ್, ಉಪನ್ಯಾಸಕರ ಕೊರತೆ ಇತರೆ ಸೌಲಭ್ಯಗಳ ಒದಗಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕಾಲೇಜಿನಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಫಲಿತಾಂಶ ಉತ್ತಮವಾಗಿ ಬಂದಿದೆ. ಈ ಸಲ 38 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ಫಲಿತಾಂಶ ಶೇ 77ರಷ್ಟು ಆಗಿದೆ.

ಸಮೀಪದ ನವಲಿ ಗ್ರಾಮದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊರತೆ ಮಧ್ಯೆಯೂ ಉತ್ತಮ‌ ಫಲಿತಾಂಶಕ್ಕೆ ಕಾರಣವಾಗಿದೆ. ಕಳೆದ ಮೂರು ವರ್ಷಗಳಿಂದಲೂ ದ್ವಿತೀಯ ವರ್ಷದ ಪಿಯುಸಿ ಫಲಿತಾಂಶ ಗಮನ ಸೆಳೆದಿದೆ.

ಕಾಲೇಜಿನಲ್ಲಿ‌ ಕಲಾ ಹಾಗೂ ವಾಣಿಜ್ಯ ವಿಭಾಗಗಳಿದ್ದು 144 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಶೂನ್ಯ ದಾಖಲೆ ಇದ್ದ ಪರಿಣಾಮ ಇಲ್ಲಿಗೆ ಮಂಜೂರು ಆಗಿದ್ದ ವಿಜ್ಞಾನ ವಿಭಾಗ ಬೇರೆಡೆಗೆ ಸ್ಥಳಾಂತರಗೊಂಡಿದೆ. ಕಾಲೇಜಿನಲ್ಲಿ‌ ಉಪನ್ಯಾಸಕರು, ಕೊಠಡಿಗಳ ಕೊರತೆ ಇಲ್ಲ. ಶುದ್ದ ಕುಡಿಯುವ ನೀರಿನ‌ ಘಟಕ ವ್ಯವಸ್ಥೆ ಇಲ್ಲ. ಎಸ್‌ಡಿಎ ಹುದ್ದೆ ಖಾಲಿ ಇದೆ. 

ಮನರೇಗಾ ಯೋಜನೆಯಲ್ಲಿ ಕಾಲೇಜಿನ ಆಟದ ಮೈದಾನ ಅಭಿವೃದ್ಧಿ ಮಾಡಿದ್ದರೂ ಮಳೆಗಾಲದಲ್ಲಿ ಮೈದಾನ 'ಕೆರೆ'ಯಂತಾಗುತ್ತದೆ. ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಹೋಬಳಿ ಪ್ರದೇಶದಲ್ಲಿ ಕಾಲೇಜು ಇರುವುದರಿಂದ ಸಂಕನಾಳ, ಉದ್ದಿಹಾಳ, ಕ್ಯಾರಿಹಾಳ, ಆದಾಪುರ, ಚಿಕ್ಕ ಡಂಕನಲ್,‌ ಹಿರೇಡಂಕನಕಲ್ ಸೇರಿದಂತೆ ಇತರೆ ಗ್ರಾಮಗಳಿಂದ ಕಾಲೇಜಿಗೆ ವಿದ್ಯಾರ್ಥಿಗಳು ಬರುತ್ತಿದ್ದು ಅವರಿಗೆ ಬಸ್ ಸೌಲಭ್ಯದ ಕೊರತೆಯಿದೆ. 

ನವಲಿಯಲ್ಲಿ ಮೆಟ್ರಿಕ್ ನಂತರದ ಬಾಲಕ ಹಾಗೂ ಬಾಲಕಿಯರಿಗೆ ವಸತಿ ನಿಲಯ ಸ್ಥಾಪಿಸಿ ಅನುಕೂಲ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳು ತಿಳಿಸಿದರು.

ಕನಕಗಿರಿ ಸರ್ಕಾರಿ ಪದವಿ‌ ಪೂರ್ವ ಕಾಲೇಜಿನ ಶಾಲಾ ಕೊಠಡಿಯ ಮೇಲ್ಛಾವಣೆ ಕಿತ್ತು ಹೋಗಿರುವುದು
ಕನಕಗಿರಿ ಸರ್ಕಾರಿ ಪದವಿ‌ ಪೂರ್ವ ಕಾಲೇಜಿನ ಶಾಲಾ ಕೊಠಡಿಯ ಮೇಲ್ಛಾವಣೆ ಕಿತ್ತು ಹೋಗಿರುವುದು

ಕಾಲೇಜಿನಲ್ಲಿ ಕಾಯಂ ಉಪನ್ಯಾಸಕರ ಕೊರತೆ ಇದ್ದರೂ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ತರಗತಿ ನಡೆಸಲಾಗುತ್ತಿದೆ‌ ಉತ್ತಮ ಫಲಿತಾಂಂಶ ಬಂದಿದೆ.

-ಮಾರೆಪ್ಪ ಎನ್. ಪ್ರಭಾರ ಪ್ರಾಚಾರ್ಯ ಸರ್ಕಾರಿ ಪಿಯು ಕಾಲೇಜು ಕನಕಗಿರಿ

ಕಾಲೇಜು ಹಾಗೂ ಮೈದಾನ ಅಭಿವೃದ್ಧಿಗೆ ಸಚಿವ ಶಿವರಾಜ ತಂಗಡಗಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಬಿಸಿಯೂಟ ಯೋಜನೆ ಆರಂಭಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

- ಹನುಮಂತಪ್ಪ ಕಲ್ಲೂರು ಉಪಾಧ್ಯಕ್ಷ ಕಾಲೇಜು ಅಭಿವೃದ್ಧಿ ಸಮಿತಿ ನವಲಿ

ಕಾಲೇಜಿನಲ್ಲಿ ಮೂಲ ಸೌಲಭ್ಯದ ಕೊರತೆಯಿಂದಾಗಿ ತಾಲ್ಲೂಕಿನ ಬಡ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೂ ತೊಂದರೆಯಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಬೇರೆ ತಾಲ್ಲೂಕಿನತ್ತ ಹೋಗುತ್ತಿದ್ದಾರೆ.

- ಪಾಮಣ್ಣ ಅರಳಿಗನೂರು ಮುಖಂಡ ಕನಕಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT