ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ ಸಡಿಲ: ಮಾರುಕಟ್ಟೆಯಲ್ಲಿ ಜನ ದಟ್ಟಣೆ

ಬಾಗಿಲು ತೆಗೆದ ಅಂಗಡಿ ಮುಂಗಟ್ಟು, ವ್ಯಾಪಾರ-ವಹಿವಾಟು ಜೋರು: ನಗರಕ್ಕೆ ಬಂದ ಗ್ರಾಮೀಣ ಪ್ರದೇಶದ ಜನ
Last Updated 15 ಜೂನ್ 2021, 3:01 IST
ಅಕ್ಷರ ಗಾತ್ರ

ಕೊಪ್ಪಳ: ಸತತ ತಿಂಗಳು ಕಾಲ ಕೊರೊನಾ ಸೋಂಕಿನ ಎರಡನೇ ಅಲೆ ತೀವ್ರವಾಗಿ ಬಾಧಿಸಿದ್ದರಿಂದ ಸರ್ಕಾರ ಹೇರಿದ್ದ ಲಾಕ್‌ಡೌನ್‌ ಮಂಗಳವಾರ ಅಲ್ಪ ಸಡಿಲಗೊಂಡಿತು.

ಬೆಳಿಗ್ಗೆ 5 ಗಂಟೆಯಿಂದಲೇ ಮಾರುಕಟ್ಟೆಯಲ್ಲಿ ಖರೀದಿಗೆ ಜನಜಾತ್ರೆಯೇ ನೆರೆದಿತ್ತು. ದಿನಸಿ, ತರಕಾರಿ, ಹಣ್ಣು, ಹೂವು ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಮಾರಾಟದ ಜತೆಗೆ ಶಾಪಿಂಗ್‌ ಮಾಲ್‌ಗಳು, ಹೊಟೇಲ್‌ಗಳು ತೆರೆದಿದ್ದವು. ತಿಂಗಳ ನಂತರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿದಿದ್ದರಿಂದ ಸಂಚಾರದ ದೀಪಗಳು ಹೊತ್ತಿಕೊಂಡವು.

ಲಾಕ್‌ಡೌನ್‌ನಿಂದ ಜನರು ಮನೆಯಲ್ಲಿಯೇ ಬಂಧಿಯಾಗಿ ಒಂದು ರೀತಿಯ ಹಿಂಸೆ ಅನುಭವಿಸುತ್ತಿದ್ದರು. ದುಡಿಯುವವರಿಗೆ ಕೆಲಸವಿಲ್ಲದೆ ಸಣ್ಣಪುಟ್ಟ ವ್ಯಾಪಾರಸ್ಥರು ನಿತ್ಯ ಪರದಾಡುತ್ತಿದ್ದರು. ಬೆಳಿಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆ ಜನರು ವಿವಿಧ ರಸ್ತೆಗಳಲ್ಲಿ ನಿತ್ಯದ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿಯೇ ಬಂದಿದ್ದರು. ಬ್ಯಾಂಕ್‌ಗಳಲ್ಲಿ ಕೂಡಾ ರೈತರು ಬೆಳೆ ವಿಮೆ, ಪರಿಹಾರ, ಸಾಲ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಹಣ ಪಡೆಯಲು ಸಾಲುಗಟ್ಟಿ ನಿಂತಿದ್ದರು. ಮದ್ಯದಂಗಡಿಯವರು ಬೆಳಿಗ್ಗೆಯಿಂದಲೇ ವ್ಯಾಪಾರ ಶುರು ಹಚ್ಚಿಕೊಂಡಿದ್ದರು. ಹಂತ, ಹಂತವಾಗಿ ಲಾಕ್‌ಡೌನ್ ತೆರವುಗೊಳ್ಳುವ ಮುಂಚೆಯೇ ಜನರು ಗಡಿಬಿಡಿಯಿಂದ ವಸ್ತುಗಳನ್ನು ಖರೀದಿಸುತ್ತಿದ್ದರು. ಕಟ್ಟಡ, ದಿನಗೂಲಿ, ಬೀದಿ ಬದಿ ಕಾರ್ಮಿಕರು ಎಲ್ಲ ರಸ್ತೆಗಳಲ್ಲಿ ಕಂಡು ಬಂದರು. ಬಸ್‌ ಸಂಚಾರ ಆರಂಭವಾಗದೇ ಇದ್ದರೂ ಖಾಸಗಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿದಿದ್ದವು. ಕೆಲ ಪ್ರದೇಶದಲ್ಲಿ ಕೆಲಕಾಲ ದಟ್ಟಣೆ ಉಂಟಾಯಿತು.

ಲಾಕ್‌ಡೌನ್‌ ಸಡಿಲದಿಂದ ಅನೇಕರು ಹರ್ಷಚಿತ್ತರಾಗಿ ಮಾಸ್ಕ್‌ ಹಾಕಿಕೊಳ್ಳದೇ ರಸ್ತೆಗೆ ಬಂದಿದ್ದರು. ಕೊರೊನಾ ಆತಂಕದ ಮಧ್ಯೆಯೇ ಉದ್ಯೋಗಸ್ಥರು, ವ್ಯಾಪಾರಿಗಳು ವಹಿವಾಟು ನಡೆಸುತ್ತಿದ್ದರು. ಮುಂಗಾರು ಮಳೆ ಆರಂಭವಾಗಿದ್ದು, ಕೃಷಿ ಚಟುವಟಿಕೆ ಬಿರುಸುಗೊಂಡಿದ್ದು, ಬೀಜ, ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ವಿವಿಧ ಕೃಷಿ ಸಂಬಂಧಿ ಉಪಕರಣ ಖರೀದಿಗೆ ಗ್ರಾಮೀಣ ಜನರು ಅಂಗಡಿಗಳಲ್ಲಿ ಮುಗಿಬಿದ್ದಿದ್ದರು.

ತರಕಾರಿ ತುಟ್ಟಿ: ಮುಂಗಾರು ಮಳೆಯಾಗುತ್ತಿದೆ ಮತ್ತು ರೈತರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರಿಂದ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗುತ್ತಿಲ್ಲ. ಕಟಾವಿಗೆ ಬಂದ ತೋಟಗಾರಿಕೆ ಬೆಳೆಗಳು ಕಡಿಮೆ ಪ್ರಮಾಣದಲ್ಲಿ ಇವೆ. ಇದರಿಂದ ಎಲ್ಲ ತರಕಾರಿಗಳ ಬೆಲೆ ಹೆಚ್ಚಳಗೊಂಡಿದೆ.

ದಿನಸಿ, ಡೀಸೆಲ್‌, ಪೆಟ್ರೋಲ್‌ ತುಟ್ಟಿಯಾಗಿದ್ದರಿಂದ ಸಾರಿಗೆ ವೆಚ್ಚವೂ ದುಬಾರಿಯಾಗುತ್ತಿದೆ.

ಇದರ ಮಧ್ಯೆ ವಿವಿಧ ಸಾಮಾಜಿಕ ಸಂಘಟನೆಗಳು, ಕೆಲವು ಮುಖಂಡರು ದಿನಸಿ ಕಿಟ್‌ ವಿತರಣೆ ಕಾರ್ಯ ಕೂಡಾ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT