ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಪಿಪಿ ಚಿತ್ತ ಬೇರೆ ಪಕ್ಷಗಳ ನಾಯಕರತ್ತ

ಮುಂಬರುವ ಸ್ಥಳೀಯ ಸಂಸ್ಥೆಗಳು, ಲೋಕಸಭಾ ಚುನಾವಣೆಯ ಮೇಲೆ ಕಣ್ಣು
Published 23 ಡಿಸೆಂಬರ್ 2023, 5:30 IST
Last Updated 23 ಡಿಸೆಂಬರ್ 2023, 5:30 IST
ಅಕ್ಷರ ಗಾತ್ರ

ಕೊಪ್ಪಳ: ಪಕ್ಷ ಸ್ಥಾಪಿಸಿದ ಮೊದಲ ವರ್ಷದಲ್ಲಿ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಪಡೆದಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಈಗ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಗ್ರಾಮೀಣ ಹಂತದಿಂದ ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಇದಕ್ಕಾಗಿ ಬೇರೆ ಪಕ್ಷಗಳ ನಾಯಕರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ನಿಟ್ಟಿನಲ್ಲಿ ಕಸರತ್ತು ನಡೆಸುತ್ತಿದೆ.  

ಬಿಜೆಪಿಯಿಂದ ರಾಜಕೀಯ ಜೀವನ ಆರಂಭಿಸಿದ್ದ ಜನಾರ್ದನ ರೆಡ್ಡಿ ಬದಲಾದ ಸನ್ನಿವೇಶದಲ್ಲಿ ಗಂಗಾವತಿಯಿಂದ ಕೆಆರ್‌ಪಿಪಿಯಿಂದ ಸ್ಪರ್ಧೆ ಮಾಡಿ ಶಾಸಕರೂ ಆದರು. ಆ ಚುನಾವಣೆ ಮುಗಿದು ಈಗ ಆರು ತಿಂಗಳಾಗಿವೆ. ಮುಂಬರುವ ದಿನಗಳಲ್ಲಿ ಲೋಕಸಭೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆಯಂಥ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಜರುಗಲಿದೆ.

ಅದಕ್ಕಾಗಿ ಕೆಆರ್‌ಪಿಪಿ ಇತ್ತೀಚೆಗೆ ತನ್ನ ಪದಾಧಿಕಾರಿಗಳನ್ನು ನೇಮಿಸಿದ್ದು, ಕೊಪ್ಪಳ ಜಿಲ್ಲಾಧ್ಯಕ್ಷರನ್ನಾಗಿ ಸಂಗಮೇಶ ಬಾದವಡಗಿ, ರಾಜ್ಯ ಉಪಾಧ್ಯಕ್ಷರನ್ನಾಗಿ ಮನೋಹರ ಗೌಡ ಅವರನ್ನು ನೇಮಿಸಿ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ.

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆಆರ್‌ಪಿಪಿ ರಾಜ್ಯದ 46 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೂ ಗಂಗಾವತಿ ಕ್ಷೇತ್ರದಲ್ಲಿ ಮಾತ್ರ ಗೆಲುವು ಪಡೆದಿತ್ತು. ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಸ್ಪರ್ಧೆ ಮಾಡಿದ್ದ ಬಳ್ಳಾರಿ ನಗರ ಕ್ಷೇತ್ರದಲ್ಲಿ ಈ ಪಕ್ಷ 48,577 ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿ ಗಮನ ಸೆಳೆದಿದೆ.

ಇನ್ನುಳಿದ ಪ್ರಮುಖ ಕ್ಷೇತ್ರಗಳಲ್ಲಿ ಕೆಆರ್‌ಪಿಪಿ ಅಭ್ಯರ್ಥಿಗಳು ಉತ್ತಮ ಸಂಖ್ಯೆಯಲ್ಲಿ ಮತಗಳನ್ನು ಪಡೆದು ಬೇರೆ ಪಕ್ಷಗಳ ಮತಗಳಿಕೆಗೆ ಕಡಿವಾಣ ಹಾಕಿದ್ದರು. ಹುನಗುಂದ ಕ್ಷೇತ್ರದಿಂದ ಸ್ಪರ್ಧಿಸಿದ್ದ ನವಲಿ ಹಿರೇಮಠ 33,790, ನಾಗಠಾಣ ಅಭ್ಯರ್ಥಿಯಾಗಿದ್ದ ಬಂಡಿ ಹನುಮಂತಪ್ಪ 10,770, ಲಿಂಗಸೂರು ಕ್ಷೇತ್ರದ ಆರ್‌. ರುದ್ರಯ್ಯ 13,764 ಮತ್ತು ಸಂಡೂರು ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಕೆ.ಎಸ್‌. ದಿವಾಕರ್‌ 31,375 ಮತಗಳನ್ನು ಗಳಿಸಿದ್ದರು.

ಇವುಗಳ ಆಧಾರದ ಮೇಲೆಯೇ ಜನಾರ್ದನ ರೆಡ್ಡಿ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯೋಜನೆ ರೂಪಿಸುತ್ತಿದ್ದಾರೆ. ಕುಷ್ಟಗಿ, ಗಂಗಾವತಿ, ಕನಕಗಿರಿ, ಕೊಪ್ಪಳ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಗುರುತಿಸಿಕೊಂಡಿರುವ ಹಲವು ಸಮುದಾಯಗಳ ಪ್ರಮುಖ ನಾಯಕರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಕೊಪ್ಪಳದಿಂದ ಸ್ಪರ್ಧೆ?: ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಲಕ್ಷ್ಮಿಅರುಣಾ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರ ಬಗ್ಗೆ ರೆಡ್ಡಿ ಮಾತ್ರ ಎಲ್ಲಿಯೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಪಕ್ಷದ ಪ್ರಮುಖರನ್ನು ಕೇಳಿದರೆ ’ರೆಡ್ಡಿ ಅವರೇ ಈ ಕುರಿತು ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಹೇಳುತ್ತಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಮಾಜಿ ಶಾಸಕರು, ವಿಧಾನ ಪರಿಷತ್‌ ಮಾಜಿ ಸದಸ್ಯರು ಸೇರಿದಂತೆ ಹಲವು ಪ್ರಮುಖರು ಕೆಆರ್‌ಪಿಪಿ ಸೇರಲಿದ್ದಾರೆ. ಅದಕ್ಕೊಂದು ದೊಡ್ಡಮಟ್ಟದಲ್ಲಿ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ನೋಡಿಕೊಂಡು ಆಕಾಂಕ್ಷಿಗಳನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗುವುದು ಎಂದು ಪಕ್ಷದ ಜಿಲ್ಲಾಧ್ಯಕ್ಷ ಸಂಗಮೇಶ ಬಾದವಾಡಗಿ ತಿಳಿಸಿದರು.

ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಉತ್ತರ ಕರ್ನಾಟಕದಲ್ಲಿ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಬೇಕು ಎನ್ನುವ ಗುರಿ ನಮ್ಮದು.

-ಸಂಗಮೇಶ ಬಾದವಾಡಗಿ ಕೆಆರ್‌ಪಿಪಿ ಜಿಲ್ಲಾಧ್ಯಕ್ಷ ಕೊಪ್ಪಳ    

ಪಕ್ಷ ಸಂಘಟನೆ ನಡೆಯುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಏಳರಿಂದ ಎಂಟು ಕ್ಷೇತ್ರಗಳಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು.

-ಜನಾರ್ದನ ರೆಡ್ಡಿ ಕೆಆರ್‌ಪಿಪಿ ಸಂಸ್ಥಾಪಕ 

11ರಂದು ಅಭ್ಯರ್ಥಿಗಳ ಘೋಷಣೆ?

ಮುಂದಿನ ತಿಂಗಳು 11ರಂದು ಜನಾರ್ದನ ರೆಡ್ಡಿ ಜನ್ಮದಿನವಿದ್ದು ಇದನ್ನೇ ವೇದಿಕೆಯಾಗಿ ಬಳಸಿಕೊಂಡು ಶಕ್ತಿ ಪ್ರದರ್ಶನಕ್ಕೆ ಕೆಆರ್‌ಪಿಪಿ ಮುಂದಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಂದು ಕೊಪ್ಪಳದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಸಿ ಲೋಕಸಭಾ ಚುನಾವಣೆ ಅಭ್ಯರ್ಥಿಗಳು ಒಟ್ಟು ಕ್ಷೇತ್ರಗಳಲ್ಲಿ ಸ್ಪರ್ಧೆಯ ವಿಚಾರವನ್ನು ರೆಡ್ಡಿ ತಿಳಿಸುತ್ತಾರೆ. ಅದಕ್ಕಾಗಿ ಪಕ್ಷ ಸಂಘಟನೆ ಚುರುಕಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT