ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ, ಮೆಣಸಿನಕಾಯಿ ಬೆಲೆ ಗಗನಕ್ಕೆ

Last Updated 25 ಅಕ್ಟೋಬರ್ 2019, 14:21 IST
ಅಕ್ಷರ ಗಾತ್ರ

ಕೊಪ್ಪಳ: ದಿನ ನಿತ್ಯದ ಅವಶ್ಯಕತೆಯಾಗಿರುವ ಈರುಳ್ಳಿ, ಹಸಿ ಮೆಣಸಿನಕಾಯಿ ಬೆಲೆ ಹಬ್ಬದ ನಿಮಿತ್ತ ಗಗನಕ್ಕೆ ಏರಿದೆ. ಬೆಲೆ ಏರಿಕೆಯಿಂದ ಗ್ರಾಹಕರ ಕಣ್ಣಲ್ಲಿ ಈರುಳ್ಳಿ ನೀರು ತರಿಸುತ್ತದೆ.

ಈಚೆಗೆ ಮಳೆಯಿಂದ ಕೊಯ್ಲಿಗೆ ಬಂದಿದ್ದ ಈರುಳ್ಳಿ ಬೆಳೆ ಮಳೆಗೆ ಕೊಳೆತು ಹೋಗಿದ್ದು, ರೈತರ ಸಂಕಷ್ಟ ಹೆಚ್ಚಿಸಿದರೆ, ಕೊಳ್ಳುವ ಗ್ರಾಹಕರು ತುಟ್ಟಿ ಬೆಲೆಯಿಂದ ಹಿಂದೆ, ಮುಂದೆ ನೋಡುವಂತಾಗಿದೆ. ಈರುಳ್ಳಿ ಗಡ್ಡೆ, ತಪ್ಪಲುಗಳಿಗೆ ಬೇಡಿಕೆಯಿದ್ದರೂ ಅತಿಯಾದ ತೇವಾಂಶದಿಂದ ಮಾರುಕಟ್ಟೆಗೆ ಸಾಗಿಸುವ ಮುಂಚೆಯೇ ಮಳೆಗೆ ಸಿಲುಕಿದೆ. ಕಳೆದ 15 ದಿನಗಳ ಹಿಂದೆ ಕೆಜಿಗೆ 20ರಷ್ಟಿದ್ದ ಈರುಳ್ಳಿ ಈಗ 50ರ ಗಡಿ ದಾಟಿದೆ.

ಶುಕ್ರವಾರ ಕೊಪ್ಪಳ ಎಪಿಎಂಸಿ ಮಾರುಕಟ್ಟೆಗೆ 400 ಕೆ.ಜಿ.ಈರುಳ್ಳಿ ಆವಕವಾಗಿದೆ. ಕ್ವಿಂಟಲ್‌ಗೆ 600 ತಲುಪಿದ್ದು, ತೆಲಗಿಯ ಕೆಂಪು ಮತ್ತು ಒಣಗಿದ ಗಡ್ಡೆಗಳ ಬೆಲೆ ಇನ್ನೂ ಜಾಸ್ತಿಯಾಗಿದೆ. ಕ್ವಿಂಟಲ್‌ಗೆ 3 ಸಾವಿರ ಆಸುಪಾಸಿನಲ್ಲಿ ಇದ್ದ ಶೇಂಗಾ ಹಬ್ಬದ ನಿಮಿತ್ತ 7 ಸಾವಿರಕ್ಕೆ ಜಿಗಿದಿದೆ.

ಈರುಳ್ಳಿ ಪ್ರತಿ ಕ್ವಿಂಟಲ್‌ಗೆ ₹300ಹೆಚ್ಚಳವಾಗಿದೆ. ನಗರದ ಮಾರುಕಟ್ಟೆಗೆ ಈರುಳ್ಳಿ ಅಧಿಕ ಪ್ರಮಾಣದಲ್ಲಿ ಬಂದಿದೆ. ಆದರೆ, ಕಿರಾಣಿ ಅಂಗಡಿಗಳ ಮಾಲೀಕರು ಮಾತ್ರ ಈರುಳ್ಳಿಯನ್ನು ಹೆಚ್ಚಿನ ಬೆಲೆಯಲ್ಲೇ ಮಾರಾಟ ಮಾಡುತ್ತಿದ್ದಾರೆ.

ಆಲೂಗಡ್ಡೆ, ಬೀಟ್‌ರೂಟ್, ಬದನೆಕಾಯಿ, ತೊಂಡೆಕಾಯಿ, ಬೆಂಡೆಕಾಯಿ, ಎಲೆಕೋಸು, ಪಾಲಕ್‌ ಹಾಗೂ ಸಬ್ಬಸಗಿ ಸೊಪ್ಪಿನ ಬೆಲೆ ಸ್ಥಿರವಾಗಿದೆ. ಆಲೂಗಡ್ಡೆ ಬೆಲೆ ಪ್ರತಿ ಕೆಜಿಗೆ ₹ 20 ಇದ್ದರೂ ಚಿಲ್ಲರೆ ಮಾರಾಟಗಾರರು ₹ 25 ರಂತೆ ಮಾರಾಟ ಮಾಡುತ್ತಿದ್ದಾರೆ.

ಮೆಂತೆ ಸೊಪ್ಪಿನ ಬೆಲೆ ದುಪ್ಪಟ್ಟಾಗಿದೆ. ಪ್ರತಿ ಕ್ವಿಂಟಲ್‌ಗೆ ₹ 5 ಸಾವಿರ ಇದ್ದ ಮೆಂತೆ ಇದೀಗ ₹ 10 ಸಾವಿರಕ್ಕೆ ಏರಿಕೆಯಾಗಿದೆ. ಬೀನ್ಸ್‌ ₹ 3 ಸಾವಿರ, ಬದನೆಕಾಯಿ, ಗಜ್ಜರಿ, ಹೂಕೋಸು ಹಾಗೂ ಕರಿಬೇವು ಬೆಲೆ ₹ 1 ಸಾವಿರ ಹೆಚ್ಚಳವಾಗಿದೆ. ಕೊತಂಬರಿ ₹ 250 ಹಾಗೂ ಟೊಮೆಟೊ ಬೆಲೆ ₹ 500 ಏರಿಕೆ ಕಂಡಿದೆ.

ಪಕ್ಕದ ಗದಗ ಜಿಲ್ಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯುವ ಪ್ರದೇಶ ಪ್ರವಾಹಕ್ಕೆ ಸಿಲುಕಿ ಆವಕವೇ ಕಡಿಮೆಯಾಗಿದೆ. ಒಣಬೇಸಾಯದ ಮುಂಗಾರು ಹಂಗಾಮಿನಲ್ಲಿ ಯಲಬುರ್ಗಾ, ಕುಷ್ಟಗಿ ಭಾಗದಲ್ಲಿ ಬೆಳೆಯುತ್ತಿದ್ದ ಅಲ್ಪಸ್ವಲ್ಪ ಬೆಳೆಯೂ ಮಳೆಯಿಲ್ಲದೆ ಮಾರುಕಟ್ಟೆಗೆ ಬರುತ್ತಿಲ್ಲ. ಪಕ್ಕದ ಆಂಧ್ರ, ತೆಲಾಂಗಣ ಮತ್ತು ಬೆಂಗಳೂರು ಭಾಗದಿಂದ ತರಕಾರಿ ಹೆಚ್ಚು ಆವಕವಾಗುತ್ತದೆ.

‘ಈ ವಾರ ಪ್ರಮುಖ ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.ಈರುಳ್ಳಿ ದರ ಇಳಿಯಲುಕೆಲವು ತಿಂಗಳಾದರೂ ಬೇಕಾಗಲಿದೆ. ಮೋಡಕವಿದ ವಾತಾವರಣ ಇರುವುದರಿಂದ ಈರುಳ್ಳಿ ಒಣಗಿಸಿ ಮಾರುಕಟ್ಟೆಗೆ ತರಲು ಸಮಯಬೇಕಾಗುತ್ತದೆ’ಎನ್ನುತ್ತಾರೆ ತರಕಾರಿ ವ್ಯಾಪಾರಿ ಹುಲುಗೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT