ಜನ ಏನ್ ಪಾಪ ಮಾಡ್ಯಾರೋ!: ಅಧಿಕಾರಿಗಳ ಕಾರ್ಯ ವೈಖರಿಗೆ ಹಾಲಪ್ಪ ಆಚಾರ್‌ ಅಸಮಾಧಾನ

7

ಜನ ಏನ್ ಪಾಪ ಮಾಡ್ಯಾರೋ!: ಅಧಿಕಾರಿಗಳ ಕಾರ್ಯ ವೈಖರಿಗೆ ಹಾಲಪ್ಪ ಆಚಾರ್‌ ಅಸಮಾಧಾನ

Published:
Updated:
Deccan Herald

ಯಲಬುರ್ಗಾ: ‘ಅಭಿವೃದ್ಧಿ ಕಾಮಗಾರಿಗಳ ಹೆಸರಲ್ಲಿ ತಾಲ್ಲೂಕನ್ನು ಗೂಡಿಸಿ ಗುಂಡಾಂತರ ಮಾಡಿ, ಕಳೆದ ಐದಾರು ವರ್ಷಗಳಿಂದಲೂ ತಿಂದು ತೇಗಿದ್ದು ಸಾಕು. ಇನ್ನೂ ಮುಂದಾದರೂ ಒಳ್ಳೆಯ ಕೆಲಸ ಮಾಡುವ ಮೂಲಕ ಕ್ಷೇತ್ರದ ಜನರಿಗೆ ಒಂದಷ್ಟು ಅನುಕೂಲ ಕಲ್ಪಿಸಿ...’

ಕ್ಷೇತ್ರದಲ್ಲಿ ವಹಿಸಲಾದ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದ ಭೂಸೇನಾ ನಿಗಮದ ಅಧಿಕಾರಿ ವಿರುದ್ಧ ಶಾಸಕ ಹಾಲಪ್ಪ ಆಚಾರ್‌ ಅವರು ಹರಿಹಾಯ್ದ ಪರಿಯಿದು.

ಕಂದಾಯ ಇಲಾಖೆಯ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದ ಜನ ಏನ್ ಪಾಪ ಮಾಡ್ಯಾರೋ...ಇಂತಹ ಅಧಿಕಾರಿಗಳೇ ತುಂಬಿರುವ ಕ್ಷೇತ್ರದಲ್ಲಿನ ಜನರನ್ನು ಭಗವಂತನೇ ಕಾಪಾಡಬೇಕು. ಬಹುತೇಕ ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ ನಿಮ್ಮಿಂದಲೇ ಉದ್ಧಾರ ಆಗಿರಬಹುದು’ ಎಂದು ವ್ಯಂಗ್ಯವಾಡಿದರು.

‘ಮಂಗಳೂರು ಬಾಲಕಿಯರ ಹಾಸ್ಟೆಲ್ ದುರಸ್ತಿ ಕೈಗೊಳ್ಳದೇ ಇರುವ ನೀವು ಬೇರೆ ಕಡೆ ಯಾವ ರೀತಿ ಮಾಡಿದ್ದೀರಿ ಎಂಬುದಕ್ಕೆ ಬೇರೆ ಸಾಕ್ಷ್ಯ ಬೇಕಿಲ್ಲ. ಮೇಲಧಿಕಾರಿಗಳು ನೀವು ಎಲ್ಲರೂ ಒಂದೇ ಗುಣ ಧರ್ಮದವ ರಾಗಿದ್ದೀರಿ, ಜನಸೇವೆಗೆ ನೌಕರಿ ಮಾಡ್ತೀ ದಿರಿ ಒಳ್ಳೆಯದನ್ನು ಮಾಡ್ರಿ, ದೇವರಾದ್ರು ಮೆಚ್ತಾನೆ’ ಎಂದು ನುಡಿದರು.

ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದರೆ ಸಾಲದು. ಜನರಿಗೆ ಬಳಕೆ ಮಾಡಿಕೊಳ್ಳುವಂತಿರಬೇಕು. ಸೋಲಾರ್ ಅಳವಡಿಕೆಯ ಘಟಕಗಳು ಒಂದೂ ಕೂಡಾ ಶುರುವಾಗಿಲ್ಲ. ತಲಾ ₹ 12 ಲಕ್ಷದಲ್ಲಿ ಸಿದ್ಧಗೊಂಡ ಘಟಕಗಳು ನಿರುಪಯುಕ್ತವಾಗಿವೆ. ಸ್ಥಗಿತಗೊಂಡ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೀರಾ, ಜನಸಾಮಾನ್ಯರಿಗೆ ತಲುಪು ವಲ್ಲಿ ವಿಫಲವಾಗಿದ್ದನ್ನು ನೋಡಿಯೂ ಏನೂ ಮಾಡದೇ ಮೌನವಹಿಸುವುದಾದರೆ ನೌಕರಿ ಮಾಡುವುದಾದರೂ ಯಾವ ಪುರುಷಾರ್ಥಕ್ಕೆ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿ ಹಾಗೂ ಪಿಡಿಒಗಳಿಗೆ ತರಾಟೆಗೆ ತೆಗೆದುಕೊಂಡರು.

ಸಭೆಗೆ ಹಾಜರಾಗದೇ ಗೈರಾಗಿದ್ದ ಸಿಡಿಪಿಒ ಶರಣಮ್ಮ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಬದಲಿಗೆ ಹಾಜರಿದ್ದ ಕಚೇರಿ ಸಿಬ್ಬಂದಿಯನ್ನು ವಾಪಸ್‌ ಕಳುಹಿಸಿದರು. ವಿವಿಧ ಶಾಲೆಯ ಶೌಚಾಲಯಗಳ ನಿರ್ಮಾಣದಲ್ಲಿಯೂ ಉದಾಸೀನ ತೋರಲಾಗಿದೆ. 17ರಲ್ಲಿ ಕೇವಲ 3 ಕಟ್ಟಡಗಳು ನಿರ್ಮಾಣಗೊಂಡಿದ್ದು ಅಧಿಕಾರಿಯ ಬೇಜವಾಬ್ದಾರಿಯಲ್ಲದೇ ಬೇರೆನೂ ಅಲ್ಲ ಎಂದು ಜಿಲ್ಲಾ ಪಂಚಾಯತ್‌ ಎಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿ ವಿರುದ್ಧ ಸಿಡಿಮಿಡಿಕೊಂಡರು.

ಬನ್ನಿಕೊಪ್ಪ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿರುದ್ಧ ಸಾರ್ವಜನಿಕರು ದೂರು ನೀಡಿದ್ದಾರೆ. ಅವರಿಗೆ ಸರಿಯಾಗಿ ಕೆಲಸ ಮಾಡುವಂತೆ ಸೂಚಿಸಿ ಎಂದು ತಾಲ್ಲೂಕು ವೈದ್ಯಾಧಿಕಾರಿ ಮಂಜುನಾಥ ಅವರ ಗಮನಕ್ಕೆ ತಂದರು.

ಸಂಗನಾಳ, ಕುಕನೂರು ಹಾಗೂ ಹಿರೇಮ್ಯಾಗೇರಿಯಲ್ಲಿ ಕನಕ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನ ಕಲ್ಪಿಸಿಕೊಡುವಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ನಾಲ್ಕೈದು ಸಲ ಪತ್ರ ಬರೆದು ಹಾಗೂ ಮೌಖಿಕವಾಗಿ ಹೇಳಿದರೂ ಸ್ಪಂದಿಸುತ್ತಿಲ್ಲ ಎಂದು ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ವಿ.ಭಜಂತ್ರಿ ದೂರಿದರು.

ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ನಿರ್ವಹಣೆಯ ಕೊರತೆಯಿಂದಾಗಿಯೇ ಈ ದೂರುಗಳು ಹೆಚ್ಚುತ್ತಿವೆ. ಸುಧಾರಣೆ ಮಾಡುವುದನ್ನು ಬಿಟ್ಟು ಕಚೇರಿಯಲ್ಲಿ ಏನು ಮಾಡ್ತೀರಿ ಎಂದು ಅಧಿಕಾರಿ ಕಲೀಲ ಅಹ್ಮದ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಕೋಟಿಗಟ್ಟಲೆ ಹಣ ಸುರಿದು ಸಂಗನಾಳ-ತೊಂಡಿಹಾಳ ರಸ್ತೆ ನಿರ್ಮಾಣ ಮಾಡಲಾಗಿದೆ. ಅಲ್ಲಿ ಒಂದು ವಾಹನ ಕೂಡಾ ತಿರುಗಾಡುತ್ತಿಲ್ಲ, ನರೆಗಲ್ಲ ಮತ್ತು ಗದಗಗೆ ಹೋಗಿ ಬರಲು ಅನುಕೂಲವಾಗುತ್ತದೆ. ಈ ಮಾರ್ಗದಲ್ಲಿ ಬಸ್ ಓಡಿಸಿ ಕೊಪ್ಪಳದಿಂದ ಯಲಬುರ್ಗಾ ಪಟ್ಟಣಕ್ಕೆ ಬರುವ ಬಸ್ ಅನ್ನು ರಾತ್ರಿ 10ಗಂಟೆಗೆ ಬಿಡುವಂತೆ ಕ್ರಮ ಕೈಗೊಳ್ಳಲು ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕರಿಗೆ ಸೂಚಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !