ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ| ಅನೈತಿಕ ಸಂಬಂಧ ಕಾರಣಕ್ಕೆ ಕೊಲೆ– ಆರೋಪಿ ಬಂಧನ

ವಿಚಾರಣೆ ನೆಪದಲ್ಲಿ ಕೈಗೆ ಕೋಳ; ವರದಿ ನೀಡಲು ಸೂಚನೆ
Published 3 ಆಗಸ್ಟ್ 2023, 16:15 IST
Last Updated 3 ಆಗಸ್ಟ್ 2023, 16:15 IST
ಅಕ್ಷರ ಗಾತ್ರ

ಕೊಪ್ಪಳ: ಕಾರಟಗಿ ತಾಲ್ಲೂಕಿನ ನಾಗನಕಲ್- ಮೈಲಾಪುರ ತಿರುವು ನಡುವಿನ ಸಿದ್ಧಗಂಗಾ ಲೇಔಟ್‌ ಬಳಿ ಜುಲೈ 31ರಂದು ಅನುಮಾನಾಸ್ಪದವಾಗಿ ರಾಘವೇಂದ್ರ ರೆಡ್ಡಿ (36) ಎಂಬ ವ್ಯಕ್ತಿ ಮೃತಪಟ್ಟಿದ್ದ ಘಟನೆಯ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. 

ತನ್ನ ತಾಯಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎನ್ನುವ ಕಾರಣಕ್ಕಾಗಿ ಗುಡೂರು ಗ್ರಾಮದ ಗೌಡಪ್ಪ ಅಲಿಯಾಸ್‌ ಗರುಡಪ್ಪ ಜವಳಗೇರ ಎಂಬಾತ ರಾಘವೇಂದ್ರನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಘವೇಂದ್ರ ಹಲವು ವರ್ಷಗಳಿಂದ ಗೌಡಪ್ಪನ ತಾಯಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಇದು ಊರಿಗೆಲ್ಲ ಗೊತ್ತಾಗಿದ್ದರಿಂದ ಈ ವಿಷಯವಾಗಿ ಅವರ ಮನೆಯಲ್ಲಿ ಅನೇಕ ಬಾರಿ ಜಗಳವೂ ಆಗಿತ್ತು. ರಾಘವೇಂದ್ರನ ಕೊಲೆ ಕುರಿತು ಆತನ ತಾಯಿ ಹನುಮಂತಮ್ಮ ಕಾರಟಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

‘ಅನೈತಿಕ ಸಂಬಂಧದ ಕಾರಣಕ್ಕೆ ಕೊಲೆ ಮಾಡಿದ್ದೇನೆ ಎಂದು ಆರೋಪಿ ಗೌಡಪ್ಪ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಈ ಕೃತ್ಯದಲ್ಲಿ ಇನ್ನಷ್ಟು ಜನ ಭಾಗಿಯಾಗಿರುವ ಶಂಕೆಯಿದ್ದು, ಅವರನ್ನು ಪತ್ತೆ ಹಚ್ಚುವ ಕಾರ್ಯ ಜಾರಿಯಲ್ಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಇಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸೂಚನೆ: ಕನಕಗಿರಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ವಿಚಾರಣೆ ನೆಪದಲ್ಲಿ ಯುವಕನ ಕೈಗೆ ಕೋಳ ಹಾಕಿರುವ ಘಟನೆ ಕುರಿತು ವರದಿ ನೀಡುವಂತೆ ಗಂಗಾವತಿ ಡಿವೈಎಸ್‌ಪಿ ಅವರಿಗೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು. ಕನಕಗಿರಿ ತಾಲ್ಲೂಕಿನ ಬೊಮ್ಮಸಾಗರ ತಾಂಡಾದ ವ್ಯಕ್ತಿಯೊಬ್ಬರ ಕೈಗೆ ಕೋಳ ಹಾಕಿದ್ದ ಫೋಟೊ ವೈರಲ್‌ ಆಗಿತ್ತು.

‘ಕೊಪ್ಪಳ ನಗರದಲ್ಲಿ ಸಂಚಾರ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರಿಗೆ ಅನೇಕ ಬಾರಿ ತಿಳಿ ಹೇಳಲಾಗಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡವನ್ನೂ ವಿಧಿಸಲಾಗಿದೆ. ಸಾರ್ವಜನಿಕರು ಪಾದಚಾರಿ ಮಾರ್ಗ ಬಿಟ್ಟು ರಸ್ತೆ ಮೇಲೆ ಓಡಾಡುತ್ತಾರೆ. ಈ ಬಗ್ಗೆ ಅನೇಕ ಬಾರಿ ತಿಳಿ ಹೇಳಿದರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ನಮ್ಮ ಪ್ರಯತ್ನಕ್ಕೆ ಸಾರ್ವಜನಿಕರು ಕೂಡ ಕೈ ಜೋಡಿಸಬೇಕು’ ಎಂದು ಅವರು ಮನವಿ ಮಾಡಿದರು.

ಗಂಗಾವತಿ ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ, ಕಾರಟಗಿ ಪೊಲೀಸ್‌ ಠಾಣೆಯ ಇನ್‌ಸ್ಟೆಕ್ಟರ್‌ ಸಿದ್ರಾಮಯ್ಯ ಬಿ.ಎಂ., ಸಿಪಿಐ ಸಂತೋಷ್, ಸುರೇಶ್ ಡಿ. ಇದ್ದರು.

ಕೊಲೆ ಘಟನೆಯ ಬಗ್ಗೆ ದೂರು ದಾಖಲಾದ 24 ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಬಂಧಿಸಿರುವುದು ಶ್ಲಾಘನೀಯ ಕಾರ್ಯ. ಇನ್ನಷ್ಟು ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ
. ಯಶೋಧಾ ವಂಟಗೋಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT