ಸೋಮವಾರ, ಮಾರ್ಚ್ 20, 2023
30 °C
ನಗರಸಭೆ ಮೊದಲ ಆಡಳಿತ ಮಂಡಳಿ ಸಭೆ

ಪ್ಲಾಸ್ಟಿಕ್‌ ನಿಷೇಧಕ್ಕೆ ಕಠಿಣ ಕ್ರಮಕ್ಕೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ಇಲ್ಲಿನ ನಗರಸಭೆಯ ಪೂರ್ಣಪ್ರಮಾಣದ ಮೊದಲ ಸಭೆ ಬುಧವಾರ ನಡೆಯಿತು.

ಸಮಸ್ಯೆಗಳ ಸರಮಾಲೆಯನ್ನೇ ಹೊತ್ತು ತಂದಿದ್ದ ಸದಸ್ಯರು, ತಮ್ಮ ಸಮಸ್ಯೆ ಹೇಳಿಕೊಳ್ಳಲು ಸೂಕ್ತ ವೇದಿಕೆ ಕಲ್ಪಿಸಬೇಕು. 7 ದಿನದ ಮುಂಚೆ ಪತ್ರ ಕಳುಹಿಸಿಕೊಡಬೇಕು. ನಮ್ಮ ವಾರ್ಡ್‌ನ ಸಮಸ್ಯೆ ಶೀಘ್ರ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಲತಾ ಚಿನ್ನೂರು ಮಾತನಾಡಿ,‘ಹಿರೇ
ಸಿಂದೋಗಿ ರಸ್ತೆಯಲ್ಲಿ 2 ಸಾವಿರ ಆಶ್ರಯಮನೆಗಳ ಫಲಾನುಭವಿಗಳ ಸಂಬಂಧಪಟ್ಟಂತೆ ವಸತಿ ರಹಿತರನ್ನು ಗುರುತಿಸಿ ಹಂಚಲಾಗುವುದು. ಈಗಾಗಲೇ ಅಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಕೆಲವು ಫಲಾನುಭವಿಗಳಿಗೆ ಹಕ್ಕು ಪತ್ರ ಕೊಡಲಾಗಿದೆ. ಈ ಕುರಿತು ಇನ್ನೊಮ್ಮೆ ಸಭೆ ಸೇರಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮನೆ ಹಂಚುವುದಾಗಿ ಹೇಳಿದರು.

ಸದಸ್ಯರಾದ ಅಮ್ಜದ್‌ ಪಟೇಲ್‌, ಅಕ್ಬರ್‌ ಪಾಶಾ ಪಲ್ಟನ್, ಮಹೇಂದ್ರ ಚೋಪ್ರಾ, ಸೋಮಣ್ಣ ಹಳ್ಳಿ, ಚನ್ನಪ್ಪ ಕೋಟ್ಯಾಳ, ಗುರುರಾಜ ಹಲಗೇರಿ, ಮುತ್ತುರಾಜ ಕುಷ್ಟಗಿ ಮುಂತಾದವರು ಸ್ವಚ್ಛತೆ, ಸಿಸಿ ರಸ್ತೆ, ಬೀದಿ ದೀಪ, ವಿದ್ಯುತ್‌ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.

ಬಿಜೆಪಿಯ ನೂತನ ಸದಸ್ಯರು ತಮ್ಮ ವಾರ್ಡಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಕೊರೊನಾದಿಂದ ಜನರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಯಾವುದೇ ಕರವನ್ನು ಸದ್ಯ ಹೆಚ್ಚಳ ಮಾಡಬಾರದು ಎಂದು ಮನವಿ ಮಾಡಿದರು. ಉಪಾಧ್ಯಕ್ಷತೆ ಝರೀನಾ ಬೇಗಂ ಅರಗಂಜಿ ಸಭೆಯಲ್ಲಿ ಮಾತನಾಡಿ ಗಮನ ಸೆಳೆದರು. ನೂತನ ಸದಸ್ಯೆಯರು ಉತ್ಸಾಹದಿಂದ ಮಾತನಾಡಿದರು.

ಜಮಾಖರ್ಚಿನ ಕುರಿತು ಸಭೆ ಒಪ್ಪಿಗೆ ನೀಡಿತು. ಹುಲಿಕೆರೆಯಲ್ಲಿ ವಂಡರ್‌ ಲಾ ಮಾದರಿಯಲ್ಲಿ ವಾಟರ್‌ ಪಾರ್ಕ್ ನಿರ್ಮಾಣ, ಸೂಕ್ತ ಸ್ಥಳದಲ್ಲಿ ಗಾಂಧಿ, ಕಿತ್ತೂರು ಚೆನ್ನಮ್ಮ ಪ್ರತಿಮೆ ಸ್ಥಾಪನೆ, ಬಸ್‌ ನಿಲ್ದಾಣದ ಎದುರು ₹50 ಲಕ್ಷ ವೆಚ್ಚದ ವಾಣಿಜ್ಯ ಮಳಿಗೆ ನಿರ್ಮಾಣ,  ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸುವ ಕುರಿತಂತೆ ದಂಡ ಮತ್ತು ಶಿಕ್ಷೆ ಕ್ರಮ ಪರಿಣಾಮಕಾರಿಯಾಗಿ ಜಾರಿಗೆ ತರಲು ಕ್ರಮ, ಭಾಗ್ಯನಗರ ಸೇತುವೆ ಅಂಡರ್‌ ಪಾಸ್‌ ಎರಡು ಬದಿಯಲ್ಲಿ ಇತಿಹಾಸ ಸಾರುವ ಚಿತ್ರಕಲೆಗಳನ್ನು ಬಿಡಿಸುವುದು ಅದರ ಮೂಲಕ ವಿಜೇತರಿಗೆ ಬಹುಮಾನ ನೀಡುವ ಕುರಿತು ಎಂದು ಸಭೆ ನಿರ್ಣಯ ಕೈಗೊಂಡಿತು.

ಪೌರಾಯುಕ್ತ ಬಡಿಗೇರ, ಎಇಇ ಟಿ.ಮಂಜುನಾಥ, ಪರಿಸರ ನಿಯಂತ್ರಣಾಧಿಕಾರಿ ನೇತ್ರಾವತಿ ಸೇರಿದಂತೆ ಸದಸ್ಯರು ಇದ್ದರು.

ಕಳೆದ 2 ವರ್ಷದ ಹಿಂದೆ ನಗರಸಭೆ ಸದಸ್ಯರಾಗಿ ಚುನಾಯಿತರಾಗಿದ್ದರೂ ಅಧಿಕೃತ ಸಭೆ ನಡೆಸಲು ಬಾರದೇ ಪರದಾಡುವಂತೆ ಆಗಿತ್ತು. ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ವಿವಾದ ಸೇರಿದಂತೆ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಾರದೇ ಆಡಳಿತಾಧಿಕಾರಿಗಳ ಮೂಲಕ ಆಡಳಿತ ನಡೆಯುತ್ತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.