ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟ ಯಂತ್ರದೊಂದಿಗೆ ಬದುಕಿನ ಬಂಡಿ

ಕಾಲೇಜು ಶಿಕ್ಷಣದೊಂದಿಗೆ ಗಾದಿ ತಯಾರಿಸುವ ಲಾಲಸಾಬ್ ನದಾಫ
Last Updated 8 ಡಿಸೆಂಬರ್ 2018, 15:46 IST
ಅಕ್ಷರ ಗಾತ್ರ

ಹನುಮಸಾಗರ:ಸದ್ಯ ಕಾಲೇಜು ವಿದ್ಯಾರ್ಥಿಗಳೆಂದರೆ ಕೈಯಲ್ಲಿ ಬೆಲೆಬಾಳುವ ಮೊಬೈಲ್‌, ಹೊಸವಿನ್ಯಾಸದ ಬಟ್ಟೆ, ವಿಶೇಷ ಕೇಶ ವಿನ್ಯಾಸ ಇವು ಸಾಮಾನ್ಯವಾಗಿ ಕಂಡು ಬರುತ್ತವೆ. ಆದರೆ, ಹನುಮಸಾಗರದಲ್ಲಿನ ಲಾಲಸಾಬ್ ನದಾಫ ಈ ವಿದ್ಯಾರ್ಥಿಗಳ ಮಧ್ಯದಲ್ಲಿ ವಿಭಿನ್ನವಾಗಿ ಕಾಣುತ್ತಾನೆ.

ಸಮೀಪದ ಇಲಕಲ್‌ ಕಾಲೇಜಿನಲ್ಲಿ ಪದವಿ ಓದುತ್ತಿರುವ ಈ ವಿದ್ಯಾರ್ಥಿ ಬೆಳಿಗ್ಗೆ ಕಾಲೇಜಿಗೆ ಹೋಗಿ ಬಂದ ನಂತರ ಮುಂದಿನ ಕೆಲಸ ತನ್ನ ಪುಟ್ಟ ಯಂತ್ರದೊಂದಿಗೆ ಗಾದಿ ತಯಾರಿಸುವ ಕಾರ್ಯಕ್ಕೆ ಅಣಿಯಾಗುತ್ತಾರೆ.ತೀರಾ ಬಡಕುಟುಂಬದಿಂದ ಬಂದಿರುವ ಲಾಲಸಾಬ್ ಗಾದಿ ಹಾಕುವುದು ಪ್ರೌಢಶಾಲಾ ವಿದ್ಯಾರ್ಥಿ ಆಗಿರುವನಿಂದಲೇ ಆತನ ಕೈಗೆ ತಾಲೀಮು ದೊರೆತಿದೆ. ಸುಮಾರು ಹತ್ತಾರು ವರ್ಷದಿಂದ ತಾಯಿ ಬೇಬಿಜಾನ ಅವರ ಮಾರ್ಗದರ್ಶನದಲ್ಲಿ ಗಾದಿ ತಯಾರಿಸುವಲ್ಲಿ ಸಾಕಷ್ಟು ಅನುಭವ ಪಡೆದುಕೊಂಡಿದ್ದಾರೆ.

ಕಡಿಮೆಯಾದ ಕಾರ್ಯ, ದೊರೆಯದ ಉದ್ಯೋಗ:‘ಈಚೆಗೆ ಗಾದಿ ಮಾಡಿಸುವವರ ಸಂಖ್ಯೆ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ಮಾದರಿಯಲ್ಲಿ ದೊರಕುವ ಸಿದ್ಧ ಗಾದಿಯನ್ನೇ ಖರೀದಿಸುವ ವ್ಯಾಮೋಹ ಜನರಲ್ಲಿ ಹೆಚ್ಚಿರುವ ಕಾರಣವಾಗಿ ಹತ್ತಿ ಗಾದಿಯ ಬಳಕೆ ಕಡಿಮೆಯಾಗಿ, ನಮಗೆ ಉದ್ಯೋಗ ಅವಕಾಶ ಕಡಿಮೆಯಾಗಿದೆ’ ಎನ್ನುತ್ತಾರೆ ಲಾಲಸಾಬ್‌.

ಹೈಟೆಕ್ ಮಾದರಿ ಗಾದಿಗೆ ಮೊರೆ ಹೋಗುವವರಿಗೆ ಲಾಲಸಾಬ್ ಈ ಮೂಲಕ ಸಂದೇಶ ಕೊಡುತ್ತಿದ್ದು, ಅರಳಿಯಿಂದ ತಯಾರಿಸಿ ಗಾದಿ ಮತ್ತೆ ಮರುಬಳಕೆಯಾಗಿ ಹಲವಾರು ವರ್ಷಗಳವರೆಗೆ ಬಾಳಿಕೆ ಬಂದರೆ. ಮಾರುಕಟ್ಟೆಯಲ್ಲಿ ದೊರಕುವ ನವ ವಿನ್ಯಾಸದ ಗಾದಿ ಮರು ಬಳಕೆಯಾಗದೆ ತ್ಯಾಜ್ಯವಾಗುತ್ತದೆ ಎಂದು ಹೇಳುತ್ತಾರೆ.

ತಪ್ಪ ನಿತ್ಯದ ಕೆಲಸ:ಮುಂಗಡವಾಗಿ ಗಾದಿ ಹಾಕಿಸಲು ಆರ್ಡರ್‌ ಕೊಟ್ಟವರ ಮನೆ ಬಾಗಿಲಿಗೆ ತನ್ನ ಪುಟ್ಟ ಯಂತ್ರ ಒತ್ತಿಕೊಂಡು ಹೋಗುವ ಲಾಲಸಾಬ್. ಅವರ ಮನೆಯ ಮುಂದೆ ಕುಳಿತು ಅವರ ಹಳೆಯ ಗಾದಿಯಲ್ಲಿನ ಹತ್ತಿಯನ್ನು ಹೊರತೆಗೆದು ಯಂತ್ರದ ಮೂಲಕ ವಿಂಗಡಿಸಿ ಹೊಸತನ ತರುತ್ತಾನೆ. ಗಾದಿಗೆ ಅರಳಿ ಕಡಿಮೆಯಾಗುತ್ತಿದ್ದರೆ, ತಾನೆ ಅರಳಿ ತಂದು ಹಾಕಿ ಸಿದ್ಧಪಡಿಸಿಕೊಡುತ್ತಾನೆ.

ಒಂದು ಗಾದಿ ತಯಾರಿಸಲು ₹ 300 ರಿಂದ ₹ 350 ತೆಗೆದುಕೊಳ್ಳುತ್ತಾನೆ. ‘ದಿನಕ್ಕೆ ಒಂದು ಅಥವಾ ಎರಡು ಗಾದಿ ಸಿಗುತ್ತವೆ, ಶ್ರಾವಣ ಮಾಸದಲ್ಲಿ ಮದುವೆ ಸೀಜನ್‌ ಇರುವುದರಿಂದ ಆ ಸಮಯದಲ್ಲಿ ಹೆಚ್ಚಿಗೆ ಆರ್ಡರ್‌ ದೊರಕುತ್ತವೆ’ ಎಂದು ಹೇಳುತ್ತಾರೆ.

ಗಾದಿ ಹಾಕುವುದರೊಂದಗೆ ತನ್ನ ಕಾಲೇಜು ಮುಂದವರಿಸಿರುವ ಲಾಲಸಾಬ್ ಓದಿನಲ್ಲೂ ಮುಂದೆ ಇದ್ದಾರೆ. ಎರಡನೇ ವರ್ಷದ ಪಿಯುಸಿಯಲ್ಲಿ ಶೇ 75 ಫಲಿತಾಂಶ ಪಡೆದಿದ್ದರೆ, ಒಂದನೇ ವರ್ಷದ ಪದವಿಯಲ್ಲಿ ಮೊದಲ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ತಂದೆ ಅಬ್ದುಲ್‌ ರೆಹೆಮಾನ ಅವರಿಗೆ ಮಗನ ಮೇಲೆ ತುಂಬಾ ಅಕ್ಕರೆ ‘ನನ್ನ ಮಗ ಎಲ್ಲರಂತಲ್ಲ, ಅವನಿಂದ ನಾವೇ ಪಾಠ ಕಲಿತಂತಿದೆ, ಮುಂದೆ ಉತ್ತಮ ಉದ್ಯೋಗ ಹಿಡಿಯಲಿ ಎಂಬುದು ನಮ್ಮ ಆಸೆ ಇದೆ’ ಅಭಿಮಾನದಿಂದ ಹೇಳತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT