ಮಂಗಳವಾರ, ಜುಲೈ 14, 2020
24 °C
ಸಂಖ್ಯಾ ಶಾಸ್ತ್ರಜ್ಞ ಪ್ರೊ.ಪಿ.ಸಿ.ಮಹಾಲನೋಬಿಸ್‌ ಜನ್ಮ ದಿನಾಚರಣೆಯಲ್ಲಿ ಕೃಷ್ಣಮೂರ್ತಿ ದೇಸಾಯಿ

ಕೊಪ್ಪಳ | ಅಂಕಿಗಳ ಹೊಂದಾಣಿಕೆಯೇ ಆಡಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಸಾರ್ವಜನಿಕರ ಆಡಳಿತ ನಿಂತಿರುವುದೇ ಅಂಕಿ-ಅಂಶಗಳ ಆಧಾರದ ಮೇಲೆ, ಆದ್ದರಿಂದ ಅಂಕಿ ಸಂಖ್ಯೆಗಳ ಹೊಂದಾಣಿಕೆಯೇ ವ್ಯವಸ್ಥಿತವಾದ ಆಡಳಿತ‘ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಹೇಳಿದ್ದಾರೆ. 

ನಗರದ ಜಿಲ್ಲಾ ಪಂಚಾಯಿತಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸೋಮವಾರ ಬೆಂಗಳೂರಿನ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಾರ್ಯಾಲಯದಿಂದ ನಡೆದ ಸಂಖ್ಯಾ ಶಾಸ್ತ್ರಜ್ಞ ಪ್ರೊ.ಪಿ.ಸಿ.ಮಹಾಲನೋಬಿಸ್‌ ಅವರ ಜನ್ಮ ದಿನಾಚರಣೆ ಹಾಗೂ 14ನೇ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಸಮಸ್ಯೆಗಳನ್ನು ಗುರುತಿಸಲು ಅಂಕಿ ಸಂಖ್ಯೆಗಳು ಅತ್ಯವಶ್ಯಕವಾಗಿವೆ. ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಯೋಜನೆಗಳನ್ನು ನಿಯಂತ್ರಣ ಮಾಡಬೇಕಾದರೆ ಅಂಕಿ ಅಂಶಗಳು ಮುಖ್ಯವಾಗುತ್ತವೆ. ಅದರ ಜೊತೆಗೆ ವ್ಯಕ್ತಿಯ ಜೀವನವು ಸಹ ಪ್ರತಿಷ್ಠೆಯಲ್ಲಿ ಇರಬೇಕು ಎಂದರೆ ಅಂಕಿ ಸಂಖ್ಯೆಗಳ ಪಾತ್ರ ಮಹತ್ವವಾಗಿದೆ ಎಂದರು. 

 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಪ್ರಭುರಾಜ್ ನಾಯ್ಕ ಅವರು, ತಂತ್ರಜ್ಞಾನದಲ್ಲಿ ಅಂಕಿ ಅಂಶಗಳು ಪ್ರಾಬಲ್ಯ ಹೊಂದಿವೆ. ಸರ್ಕಾರದ ಎಲ್ಲಾ ಇಲಾಖೆಗಳು ನಿಖರವಾಗಿ ಅಂಕಿ-ಅಂಶಗಳನ್ನು ಕೊಟ್ಟಾಗ ಮಾತ್ರ ಪ್ರಗತಿ ಸಾಧ್ಯವಾಗುತ್ತದೆ ಎಂದರು.

ಸದ್ಯ ಜಾಗತಿಕತೆಯಲ್ಲಿ ಉದ್ಭವವಾಗುತ್ತಿರುವ ಸಮಸ್ಯೆಗಳನ್ನು ಮನಗಂಡು 2030ರ ಒಳಗಾಗಿ ಸುಸ್ಥಿರ ಅಭಿವೃದ್ಧಿ-3 ಮತ್ತು 5 ಗುರಿಯಲ್ಲಿ ವಿನೂತನ ಬದಲಾವಣೆ ಮಾಡುವಲ್ಲಿ ಪಣತೊಟ್ಟಿದೆ. ಸುಸ್ಥಿರ ಅಭಿವೃದ್ದಿ-3 ರಲ್ಲಿ ನೀರು, ಗಾಳಿ, ಮಣ್ಣು, ರಾಸಾಯನಿಕ ವಸ್ತುಗಳಿಂದ ಆಗುವ ಅನಾಹುತಗಳನ್ನು ತಡೆಗಟ್ಟಬೇಕು. ಸುಸ್ಥಿರ ಅಭಿವೃದ್ಧಿ-5 ರಲ್ಲಿ ಮಹಿಳಾ ಮತ್ತು ಮಕ್ಕಳ ಅಸಮಾನತೆ ತಡೆಗಟ್ಟಬೇಕು, ರಾಜಕೀಯ, ಸಾಮಾಜಿಕವಾಗಿ ಸಮಾನತೆ ನೀಡಬೇಕು. ಹೆಣ್ಣುಮಕ್ಕಳ ಮೇಲೆ ನಡೆಯುವ ಶೋಷಣೆ, ಬಾಲ್ಯವಿವಾಹ, ಹಿಂಸಾಚಾರ ತಡೆಯಬೇಕು. ಸಮಾನತೆ ಹಕ್ಕನ್ನು ಒದಗಿಸಬೇಕು ಎಂಬುದು ಮುಖ್ಯ ಉದ್ದೇಶವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಆರ್. ರಾಮಮೂರ್ತಿ  ಮಾತನಾಡಿದರು. 

ಸಾಂಖ್ಯಿಕ ದಿನಾಚರಣೆಯ ನಿಮಿತ್ತ ಹಾಜರಾದ ಎಲ್ಲಾ ಸಿಬ್ಬಂದಿಗೆ ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ಪ್ರಮಾಣ ವಚನ ಬೋಧಿಸಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಕೆ.ಅಕ್ಕಮಹಾದೇವಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟ ಅಧಿಕಾರಿಗಳು ಇದ್ದರು.

ಸರೋಜಾ ಮತ್ತು ಕಾಮಾಕ್ಷಿ ಪ್ರಾರ್ಥಿಸಿದರು. ಸಹಾಯ ಸಾಂಖ್ಯಿಕ ಅಧಿಕಾರಿ ಹುಲಗಪ್ಪ ಬಾವುಟೆ ಸ್ವಾಗತಿಸಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಬಸವರಾಜ ಮಾರನಬಸರಿ ನಿರೂಪಿಸಿದರು. ಆರ್.ಎಚ್.ನದಾಫ್ ವಂದಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.