ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಬಳಿಗೆ ನಿಯೋಗ ತೆರಳಲು ತೀರ್ಮಾನ

ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ವಿರೋಧ
Last Updated 28 ನವೆಂಬರ್ 2022, 5:29 IST
ಅಕ್ಷರ ಗಾತ್ರ

ಗಂಗಾವತಿ: ಹನುಮನ ಜನ್ಮಸ್ಥಳ ಎಂದೇ ಪ್ರಖ್ಯಾತಿ ಪಡೆದ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಸರ್ಕಾರ ಮುಂದಾಗಿರುವುದನ್ನು ಇಲ್ಲಿನ ವೈದ್ಯರು, ವಕೀಲರು, ಸಾಹಿತಿಗಳು, ಇತಿಹಾಸ ತಜ್ಞರು ಹಾಗೂ ರೈತರು ವಿರೋಧಿಸುತ್ತಿದ್ದಾರೆ.

ರಾಮಾಯಣ ಕಾಲದ ಇತಿಹಾಸ ಹೊಂದಿರುವ ಅಂಜನಾದ್ರಿ ಬೆಟ್ಟ, ಆಂಜನೇಯನ ಮೂಲ ಜನ್ಮಸ್ಥಳ. ಈ ಬೆಟ್ಟದ ಅಭಿವೃದ್ಧಿಗಾಗಿ ಸರ್ಕಾರ ಈಗಾಗಲೇ ₹120 ಕೋಟಿ ಮೀಸಲಿರಿಸಿ, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಈಗಾಗಲೇ ಜಿಲ್ಲಾಡಳಿತ ಅಂಜನಾದ್ರಿ ಸಮಗ್ರ ಅಭಿವೃದ್ಧಿಗೆ 28 ಕಾಮಗಾರಿಗಳ ನೀಲನಕ್ಷೆ ರಚಿಸಿ, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಿಶೇಷ ಸಭೆ ನಡೆಸಿ, ಕಾಮಗಾರಿಗಳಿಗೆ ಬೇಕಾಗುವ 72 ಎಕರೆ ಭೂಮಿ ಪಡೆಯಲು ಸರ್ಕಾರ ಅನುಮೋದನೆ ನೀಡಿತ್ತು.

ಅದರಂತೆ ಅಂಜನಾದ್ರಿ ಸುತ್ತ ಸಮುದಾಯ ಭವನ, ದೇವಸ್ಥಾನ ಕಚೇರಿ, 600 ಕೊಠಡಿಗಳ ವಸತಿ ನಿಲಯ, ರೋಪ್‌ವೇ, ಸಿಬ್ಬಂದಿಯ ವಸತಿ ಗೃಹ, ಶಾಪಿಂಗ್ ಕಾಂಪ್ಲೆಕ್ಸ್, ರಸ್ತೆ ವಿಸ್ತರಣೆ, ಅಡುಗೆ ಕೋಣೆ, ವ್ಯಾಖ್ಯಾನ ಕೇಂದ್ರ ಸೇರಿ 28 ಕಾಮಗಾರಿಗಳಿಗೆ ಭೂಮಿ ಪಡೆಯಲು ರೈತರ ಜೊತೆ ನಡೆದ ಸಭೆಯಲ್ಲಿ ವಿರೋಧ ವ್ಯಕ್ತವಾಗಿತ್ತು.

ಕಿಷ್ಕಿಂದಾ ರಕ್ಷಣಾ ಸಮಿತಿಯಿಂದ ವಿರೋಧ: ‘ಅಂಜನಾದ್ರಿ ಅಭಿವೃದ್ಧಿಯಿಂದ ಸಾವಿರಾರು ವರ್ಷಗಳ ಇತಿಹಾಸವಿರುವ ದೇವಸ್ಥಾನ, ಮಂಟಪ, ಬೆಟ್ಟ, ವನ್ಯಜೀವಿ, ವಿಜಯನಗರ ಕಾಲುವೆ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆ ಆಗಲಿದೆ. ಇಲ್ಲಿರುವ ಪ್ರವಾಸಿ ತಾಣ, ಪ್ರಕೃತಿ ಸವಿಯಲು ಸಾವಿರಾರು ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ. ಅಭಿವೃದ್ಧಿ ಹೆಸರಿನಲ್ಲಿ ಕಟ್ಟಡಗಳನ್ನು ನಿರ್ಮಿಸಿದರೆ, ಪ್ರಕೃತಿ ಹಾಳು ಮಾಡಿದಂತಾಗುತ್ತದೆ. ಹಾಗಾಗಿ ರೈತರು ಭೂಮಿ ನೀಡಿಲ್ಲ’ ಎಂದು ಈ ಹಿಂದೆ ಕಿಷ್ಕಿಂದಾ ರಕ್ಷಣಾ ಸಮಿತಿ ವಿರೋಧ ಮಾಡಿತ್ತು.

ವಿರೋಧದ ಸಭೆ ಆಯೋಜನೆ: ಅಂಜನಾದ್ರಿ ಅಭಿವೃದ್ಧಿಗೆ ಸರ್ಕಾರ ಕೈಗೊಂಡ ಕಟ್ಟಡಗಳ ನಿರ್ಮಾಣ ವಿರೋಧಿಸಿ ವಕೀಲರು, ವೈದ್ಯರು, ರಾಜವಂಶಸ್ಥರು, ಸಂಶೋಧಕರು ಆನೆಗೊಂದಿಯಲ್ಲಿ ಭಾನುವಾರ ನಡೆಸಿದ್ದಾರೆ. ಅಂಜನಾದ್ರಿ ಸುತ್ತಲಿನ ನೈಸರ್ಗಿಕ ಪ್ರಕೃತಿ ಹಾಳಾಗದಂತೆ ತಡೆಯಲು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಜೊತೆಗೆ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ, ಕಟ್ಟಡ ನಿರ್ಮಿಸದಂತೆ ಮನವರಿಕೆ ಮಾಡಲು ತೀರ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT