ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಕಮನಗುಳೆ ಭೂ ಸ್ವಾಧೀನಕ್ಕೆ ವಿರೋಧ

ಜಿಲ್ಲಾ ಕೇಂದ್ರದಲ್ಲಿ ಒಂದೇ ದಿನ ನಾಲ್ಕು ಪ್ರತಿಭಟನೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
Published 26 ಜೂನ್ 2024, 5:25 IST
Last Updated 26 ಜೂನ್ 2024, 5:25 IST
ಅಕ್ಷರ ಗಾತ್ರ

ಕೊಪ್ಪಳ: ಪವರ್‌ ಗ್ರಿಡ್‌ ಸ್ಟೇಷನ್‌ ನಿರ್ಮಾಣಕ್ಕಾಗಿ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಲಕಮನಗುಳೆ ಗ್ರಾಮದ ಫಲವತ್ತಾದ ಜಮೀನುಗಳ ಭೂಸ್ವಾಧೀನಕ್ಕೆ ಜಿಲ್ಲಾಡಳಿತ ಮುಂದಾಗಿದ್ದು ಈ ಪ್ರಕ್ರಿಯೆ ಕೈಬಿಡಬೇಕು ಎಂದು ಗ್ರಾಮಸ್ಥರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಪ್ರಮುಖರು ಸೋಮವಾರ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಭಾನುವಾರ ಅಧಿಕಾರಿಗಳು ಲಕಮನಗುಳೆಗೆ ಭೇಟಿ ನೀಡಿದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಗ್ರಾಮಕ್ಕೆ ಸೇರಿದ ಫಲವತ್ತಾದ ಜಮೀನುಗಳಲ್ಲಿ ಪವರ್ ಗ್ರಿಡ್ ಸ್ಟೇಷನ್‌ಗಾಗಿ ಭೂ ಸ್ವಾಧೀನಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಸ್ಟೇಷನ್ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ; ಆದರೆ ಇದಕ್ಕಾಗಿ ಫಲವತ್ತಾದ ಭೂಮಿ ನೀಡುವುದು ಸರಿಯಲ್ಲ ಎಂದರು.

ಈ ಜಮೀನಿನಲ್ಲಿ ಬಹುವಾರ್ಷಿಕ ಬೆಳೆಗಳು ಸೇರಿ ವರ್ಷಕ್ಕೆ ಕನಿಷ್ಠ ಎರಡು ವಾಣಿಜ್ಯ ಬೆಳೆಗಳನ್ನು ಪಂಪ್‌ಸೆಟ್‌ ನೀರಾವರಿ ಜಮೀನುಗಳ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿರುವುದನ್ನು ವಿರೋಧಿಸುತ್ತೇವೆ. ಭೂ ಸ್ವಾಧೀನಕ್ಕೆ ಮುಂದಾದ ಜಮೀನು ಫಲವತ್ತಾಗಿವೆ. ಇವುಗಳಲ್ಲಿ ರೈತ ಕುಟುಂಬಗಳು ಹಲವು ತಲೆಮಾರುಗಳಿಂದ ಶ್ರಮಪಟ್ಟು ಬಂಡವಾಳ ತೊಡಗಿಸಿ ಫಲವತ್ತಾದ ಜಮೀನುಗಳಾಗಿ ಬದಲಾಯಿಸಿದ್ದಾರೆ. ಇವುಗಳಲ್ಲಿ ಗ್ರಾಮಗಳ ಕೃಷಿ ಕೂಲಿಕಾರರ ಶ್ರಮ ಅಡಗಿದೆ. ಆದ್ದರಿಂದ ಭೂ ಸ್ವಾಧೀನ ಮಾಡಬಾರದು ಎಂದು ಆಗ್ರಹಿಸಿದರು.

ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ನಾಗರಾಜ, ಮುಖಂಡರಾದ ದೊಡ್ಡನಗೌಡ ಪಾಟೀಲ, ಕಾಸೀಂಸಾಬ್, ಸಿದ್ದಪ್ಪ ಶಿವಪೂಜೆ, ಗವಿಸಿದ್ದಯ್ಯ ಹಿರೇಮಠ, ದೇವಪ್ಪಗೌಡ ಮಾಲಿಪಾಟೀಲ, ಅಡಿವೆಪ್ಪ ವದ್ನಾಳ, ಶಂಕರಮ್ಮ ಸಸಿ, ದೇವಮ್ಮ ಮುಗ್ತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಬಂಧಿಸಲು ಆಗ್ರಹ: ಯುಜಿಸಿ ನೆಟ್‌ ಪರೀಕ್ಷೆಯ ಅಕ್ರಮದಲ್ಲಿ ಭಾಗವಹಿಸಿದವರನ್ನು ತಕ್ಷಣವೇ ಬಂಧಿಸಬೇಕು ಮತ್ತು ಪರೀಕ್ಷೆ ನಡೆಸುವ ಎನ್‌.ಟಿ.ಎ ಏಜೆನ್ಸಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌ (ಎಐಡಿವೈಒ) ಪ್ರಮುಖರು ಪ್ರತಿಭಟಿಸಿದರು.

ಬೇರೆ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ನೆರಳು ಈಗ ರಾಷ್ಟ್ರೀಯ ಮಟ್ಟದ ಪರೀಕ್ಷೆಗೂ ಅಂಟಿಕೊಂಡಿದೆ. ಆದ್ದರಿಂದ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು. ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು. ಸಂಘದ ಜಿಲ್ಲಾ ಸಂಚಾಲಕ ಶರಣು ಗಡ್ಡಿ, ದೇವರಾಜ ಹೊಸಮನಿ, ಮಲ್ಲಪ್ಪ, ಓದೇಶ, ಮಹೇಶ, ಹನುಮಂತರಾಯ್‌ ಪಾಲ್ಗೊಂಡಿದ್ದರು.

ಎನ್‌ಎಸ್‌ಯುಐ ಹೋರಾಟ: ಇಲ್ಲಿನ ಅಶೋಕ ವೃತ್ತದಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ)ದ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಶೈಕ್ಷಣಿಕ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುತ್ತೇವೆ. ಭ್ರಷ್ಟಾಚಾರಕ್ಕೆ ಅವಕಾಶವನ್ನೇ ಕೊಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಳ್ಳು ಭರವಸೆಗಳನ್ನು ನೀಡಿದೆ. ಈಗ ಇದೇ ಕ್ಷೇತ್ರದಲ್ಲಿ ಸಾಕಷ್ಟು ಭ್ರಷ್ಟಾಚಾರದ ವಿಷಯಗಳು ಒಂದೊಂದಾಗಿ ಹೊರಗಡೆ ಬರುತ್ತಿವೆ ಎಂದು ಆರೋಪಿಸಿದರು.

ನೀಟ್ ಪರೀಕ್ಷೆಯ ಫಲಿತಾಂಶ ವಿವಾದಗಳಿಂದ ಕೂಡಿದ್ದು ಭಾರಿ ಅಕ್ರಮ ನಡೆದಿರುವ ಸಾಧ್ಯತೆ ಮೇಲ್ನೋಟಕ್ಕೆ ಕಾಣಿಸುತ್ತದೆ. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ವಿವಾದಾತ್ಮಕ ಫಲಿತಾಂಶದ ಕಾರಣದಿಂದ ದೇಶದ ಲಕ್ಷಾಂತರ ವೈದ್ಯಕೀಯ ಸೀಟು ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದರು.

ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಶಿವಕುಮಾರ್ ಕಾರಟಗಿ, ಮುಖಂಡರಾದ ಮಂಜುನಾಥ ಗೊಂಡಬಾಳ, ಹನುಮೇಶ ಬೆಣ್ಣಿ, ಮಹೇಶ್ ಭೋವಿ, ಮರಿಯಪ್ಪ, ಶಿವು, ಶಂಕರ, ದೇವರಾಜ ಭಾಗವಹಿಸಿದ್ದರು.

ಯುಜಿಸಿ ನೆಟ್‌ ಪರೀಕ್ಷೆಯ ಅಕ್ರಮ ಖಂಡಿಸಿ ಕೊಪ್ಪಳದಲ್ಲಿ ಎಐಡಿವೈಒ ಪ್ರಮುಖರು ಪ್ರತಿಭಟನೆ ನಡೆಸಿದರು
ಯುಜಿಸಿ ನೆಟ್‌ ಪರೀಕ್ಷೆಯ ಅಕ್ರಮ ಖಂಡಿಸಿ ಕೊಪ್ಪಳದಲ್ಲಿ ಎಐಡಿವೈಒ ಪ್ರಮುಖರು ಪ್ರತಿಭಟನೆ ನಡೆಸಿದರು
ಕೊಪ್ಪಳದಲ್ಲಿ ಸೋಮವಾರ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಮುಖಂಡರನ್ನು ವಶಕ್ಕೆ ಪಡೆದು ಪೊಲೀಸರು ವಾಹನದಲ್ಲಿ ಕರೆದುಕೊಂಡ ಹೋದ ಚಿತ್ರಣ 
ಕೊಪ್ಪಳದಲ್ಲಿ ಸೋಮವಾರ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಮುಖಂಡರನ್ನು ವಶಕ್ಕೆ ಪಡೆದು ಪೊಲೀಸರು ವಾಹನದಲ್ಲಿ ಕರೆದುಕೊಂಡ ಹೋದ ಚಿತ್ರಣ 
ಕೊಪ್ಪಳದ ಅಶೋಕ ವೃತ್ತದಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ)ದ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು
ಕೊಪ್ಪಳದ ಅಶೋಕ ವೃತ್ತದಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ)ದ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು

ಬಿಜೆಪಿ ಕಾರ್ಯಕರ್ತರ ವಶ; ಬಿಡುಗಡೆ

ಕೊಪ್ಪಳ: 1975ರಲ್ಲಿ ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರಿ ಧೋರಣೆಯಿಂದ ದೇಶದ ಮೇಲೆ ತುರ್ತು ಪರಸ್ಥಿತಿ ಹೇರಿ ಈ ದೇಶದ ಜನರ ಪ್ರಜಾಪ್ರಭುತ್ವದ ಹಕ್ಕನ್ನು ಕಸಿದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ನಾಯಕರು ಸೋಮವಾರ ನಗರದಲ್ಲಿ ಕಾಂಗ್ರೆಸ್‌ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು. ತಹಶೀಲ್ದಾರ್‌ ಕಚೇರಿಯಿಂದ ಮೆರವಣಿಗೆ ಆರಂಭಿಸಿ ಮುಖ್ಯರಸ್ತೆಗೆ ಬರುವ ಹೊತ್ತಿಗೆ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು ಬಸ್‌ನಲ್ಲಿ ಕರೆದುಕೊಂಡು ಹೋದರು. ಕೆಲ ಹೊತ್ತಿನ ಬಳಿಕ ಬಿಡುಗಡೆ ಮಾಡಿದರು. ಕಾಂಗ್ರೆಸ್‌ ಸಂವಿಧಾನ ವಿರೋಧಿ ನೀತಿ ಅನುಸರಿಸಿತ್ತು ಎಂದು ಮುಖಂಡರು ಕಾಂಗ್ರೆಸ್‌ ವಿರುದ್ಧ ಘೋಷಣೆಗಳನ್ನು ಕೂಗಿದರು. ತುರ್ತು ಪರಿಸ್ಥಿತಿ ಸಮಯದಲ್ಲಿ ಆದ ಘಟನೆಗಳ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು. ಅಂದು ತುರ್ತು ಪರಿಸ್ಥಿತಿ ವಿರೋಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮೌನಕ್ಕೆ ಜಾರಿದ್ದಾರೆ ಎಂದರು. ಪಕ್ಷದ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮುಖಂಡರಾದ ಸುನಿಲ್‌ ಹೆಸರೂರು ರಮೇಶ ನಾಡಿಗೇರ ಪ್ರದೀಪ ಹಿಟ್ನಾಳ ಮಹೇಶ ಹಾದಿಮನಿ ಅಮರೇಶ ಮುರಡಿ ರಮೇಶ ಕವಲೂರು ನೀಲಕಂಠಯ್ಯ ಹಿರೇಮಠ ವಕ್ತಾರ ಸೋಮಶೇಖರ ಗೌಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT