ಗಂಗಾವತಿ: ತಾಲ್ಲೂಕಿನ 15 ಪರೀಕ್ಷಾ ಕೇಂದ್ರಗಳಲ್ಲಿ ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್/ಡಿಎಆರ್)-420 ಹುದ್ದೆಗಳ ನೇಮಕಾತಿಗೆ ಭಾನುವಾರ ಲಿಖಿತ ಪರೀಕ್ಷೆ ಸುಸೂತ್ರವಾಗಿ ಜರುಗಿತು.
ಪರೀಕ್ಷೆ ಬರೆಯಲು ಬೆಳಿಗ್ಗೆ 7 ಗಂಟೆಯಿಂದಲೇ ವಿವಿಧ ಜಿಲ್ಲೆ, ತಾಲ್ಲೂಕುಗಳಿಂದ ವಿದ್ಯಾರ್ಥಿಗಳು ನಗರಕ್ಕೆ ಬಂದಿದ್ದರು. ನಂತರ ತಮ್ಮ ಪರೀಕ್ಷಾ ಕೇಂದ್ರಗಳತ್ತ ತೆರಳಿ ಸೂಚನಾ ಫಲಕಗಳಿಗೆ ಅಳವಡಿಸಿದ ನೋಂದಣಿ ಸಂಖ್ಯೆ ಪರಿಶೀಲಿಸಿ ಕೊಂಡರು.
ಪರೀಕ್ಷಾ ಕೇಂದ್ರಗಳ ಸುತ್ತ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿತ್ತು.
ತಾಲ್ಲೂಕಿನ ಎಸ್.ಕೆ.ಎನ್.ಜಿ, ಜೂನಿಯರ್, ಎಂಎನ್ಎಂ, ಎಚ್.ಜಿ.ರಾಮುಲು ಮೆಮೋರಿಯಲ್, ಲಯನ್ಸ್ ಸಂಯುಕ್ತ, ಸಂಕಲ್ಪ, ವಿದ್ಯಾನಿಕೇತನ, ಕೊಟ್ಟೂರೇಶ್ವರ, ಕಾರುಣ್ಯ, ಶ್ರೀರಾಮನಗರದ ಎ.ಕೆ.ಆರ್ ಕಾಲೇಜು ಹಾಗೂ ಬೇಥಲ್, ಲಿಟಲ್ ಹಾರ್ಟ್ಸ್, ಜನತಾ ಸೇವಾ, ಸೇಂಟ್ ಫಾಲ್, ಚೈತನ್ಯ ಟೆಕ್ನೊ, ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 6800 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟ ಗೋಡಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.