ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ| ರಾಜಕೀಯ ಜಟಾಪಟಿ; ಬಲಿಪಶುವಾದ ನೀರಾವರಿ

ಕೊಪ್ಪಳ ವಿಧಾನಸಭಾ ಕ್ಷೇತ್ರ: ರಸ್ತೆ ಅಭಿವೃದ್ಧಿಗೆ ಆದ್ಯತೆ, ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಿಗಬೇಕಿದೆ ಇನ್ನಷ್
Last Updated 27 ಫೆಬ್ರುವರಿ 2023, 6:08 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲಾ ಕೇಂದ್ರ, ಮುನಿರಾಬಾದ್‌, ಹಿಟ್ನಾಳ, ಅಳವಂಡಿ ಹೋಬಳಿ ಹೀಗೆ ಅನೇಕ ಪ್ರಮುಖ ಪ್ರದೇಶಗಳನ್ನು ಒಳಗೊಂಡ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡು ಬಾರಿ ಶಾಸಕರಾದ ರಾಘವೇಂದ್ರ ಹಿಟ್ನಾಳ್‌ ಮೊದಲ ಅವಧಿಯಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆಯಾದರೂ, ಅಷ್ಟೇ ಕೆಲಸಗಳು ಎರಡನೇ ಅವಧಿಯಲ್ಲಿ ಆಗಲಿಲ್ಲ ಎನ್ನುವ ಮಾತುಗಳು ಕ್ಷೇತ್ರದ ಜನರಿಂದ ಕೇಳಿ ಬಂದಿವೆ.

2013ರಲ್ಲಿ ಮೊದಲ ಬಾರಿಗೆ ಶಾಸಕರಾದಾಗ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರಿಂದ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಹಿಟ್ನಾಳ್‌ ಸಾವಿರಾರು ಕೋಟಿ ಅನುದಾನ ತಂದರು. ಎರಡನೇ ಬಾರಿಗೆ ಶಾಸಕರಾದಾಗ ಬಿಜೆಪಿ ಅಧಿಕಾರಕ್ಕೆ ಬಂದಿತು. ಇದು ಅಭಿವೃದ್ಧಿಯ ಕಾರ್ಯದ ಮೊದಲಿನ ವೇಗಕ್ಕೆ ಕಡಿವಾಣ ಹಾಕಿತು ಎನ್ನುತ್ತಾರೆ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು. ಈ ಕುರಿತು ಹಿಟ್ನಾಳ್‌ ಹಲವು ಬಾರಿ ತಮ್ಮ ಭಾಷಣದಲ್ಲಿಯೂ ಪ್ರಸ್ತಾಪಿಸಿದ್ದಾರೆ. ’ಅಧಿಕಾರದಲ್ಲಿರುವ ಬಿಜೆಪಿ ಕೊಪ್ಪಳ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಡಲಿಲ್ಲ’ ಎಂದು ಟೀಕಿಸುತ್ತಲೇ ಬಂದಿದ್ದಾರೆ.

ಕೊಪ್ಪಳಕ್ಕೆ ₹135 ಕೋಟಿ ವೆಚ್ಚದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಲೋಕೋಪಯೋಗಿ ಇಲಾಖೆಯಿಂದ ₹140 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ, ಜಿಲ್ಲಾ ಕೇಂದ್ರದಲ್ಲಿ ₹16 ಕೋಟಿ ವೆಚ್ಚದಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ನೆರವಿನಿಂದ 337 ಮನೆಗಳ ನಿರ್ಮಾಣ, ಜೆಸ್ಕಾಂ ವತಿಯಿಂದ ₹6.66 ಕೋಟಿ ವೆಚ್ಚದಲ್ಲಿ ವಿದ್ಯುತ್‌ ವಿತರಣಾ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಲು ಅನುದಾನ, ನವೋದಯ ಮಾದರಿಯ ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ₹25 ಕೋಟಿ, ಬಹದ್ದೂರ್‌ ಬಂಡಿ ಗ್ರಾಮದಲ್ಲಿ ಬಂಜಾರ ಕ್ಷೇತ್ರದ ಅಭಿವೃದ್ಧಿಗೆ ₹7.50 ಕೋಟಿ, ಅಳವಂಡಿ–ಬೆಟಗೇರಿ ಏತ ನೀರಾವರಿ ಯೋಜನೆಗೆ ₹88 ಕೋಟಿ ಹೀಗೆ ಅನೇಕ ಕೆಲಸಗಳಿಗೆ ಅನುದಾನ ತಂದಿದ್ದಾರೆ ಎನ್ನುತ್ತಾರೆ ಕ್ಷೇತ್ರದ ಜನತೆ. ಅಳವಂಡಿ ಭಾಗದ 225 ಶಾಲೆಗಳಲ್ಲಿ ಕೊಠಡಿ ಹಾಗೂ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ.

ಎರಡು ಅವಧಿಗೆ ಸತತವಾಗಿ ಶಾಸಕರಾಗಿರುವ ಹಿಟ್ನಾಳ್‌ ಅವರ ಅಭಿವೃದ್ಧಿ ಕಾರ್ಯಗಳ ಪಟ್ಟಿ ಬೆಳೆದಂತೆ ಮಾಡದ ಕೆಲಸಗಳ ಪಟ್ಟಿಯೂ ಅಷ್ಟೇ ದೊಡ್ಡದಿದೆ. ಹಲವು ವರ್ಷಗಳ ಬೇಡಿಕೆಯಾಗಿದ್ದ ವಿಶ್ವವಿದ್ಯಾಲಯ ಜಿಲ್ಲೆಗೆ ಮಂಜೂರಾದರೂ ಜಾಗದ ಕೊರತೆಯಿಂದ ಆ ವಿ.ವಿ. ಕೊಪ್ಪಳ ಬಿಟ್ಟು ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಆರಂಭಿಸಲು ಸರ್ಕಾರ ಸಜ್ಜಾಯಿತು. ಕೊಪ್ಪಳ ತಾಲ್ಲೂಕು ಅಳವಂಡಿ ರಸ್ತೆ ಅವ್ಯವಸ್ಥೆ, ನೀರಲ್ಲದೆ ಬರಡಾದ ಕೆರೆ, ಸಾಕಾರಗೊಳ್ಳದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಎರಡು ದಶಕಗಳಿಂದ ಬಾಕಿ ಉಳಿದ ಸಿಂಗಟಾಲೂರು ಏತ ನೀರಾವರಿ ಯೋಜನೆ ಹೀಗೆ ಅನೇಕ ಕೆಲಸಗಳನ್ನು ಮಾಡುವಲ್ಲಿ ಹಿಟ್ನಾಳ್‌ ವಿಫಲರಾಗಿದ್ದಾರೆ ಎಂದು ಕ್ಷೇತ್ರದ ಜನ ದೂರುತ್ತಾರೆ.

ಅಳವಂಡಿ ಬೆಟಗೇರಿ ಏತ ನೀರಾವರಿ ಕಾಮಗಾರಿ ಈಗಲೂ ನಡೆಯುತ್ತಿದೆ. ಯೋಜನೆಗೆ ಭೂಮಿ ನೀಡಿದ ರೈತರಿಗೆ ಇದುವರೆಗೂ ಭೂಸ್ವಾಧೀನದ ಪರಿಹಾರ ಕೊಟ್ಟಿಲ್ಲ. ಜಿಲ್ಲಾ ಕೇಂದ್ರದಲ್ಲಿಯೇ ಇದ್ದರೂ ಭಾಗ್ಯನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಗ್ರಾಮೀಣ ಭಾಗಗಳಲ್ಲಿ ಕಾಣದ ರಸ್ತೆಗಳ ಸುಧಾರಣೆ, ಅಳವಂಡಿ ಹೋಬಳಿ ವ್ಯಾಪ್ತಿಯ ನೀರಾವರಿ ವಂಚಿತ ಹನ್ನೊಂದು ಗ್ರಾಮಗಳಿಗೆ ಕಲ್ಲಳ್ಳಿ ಆಂಜನೇಯ ಏತ ನೀರಾವರಿ ಯೋಜನೆ ಜಾರಿ ಮಾಡಿಲ್ಲ. ಕೊಪ್ಪಳ ತಾಲ್ಲೂಕಿನ ರಾಜ್ಯ ಹೆದ್ದಾರಿ 23 ಕಲ್ಮಲಾ–ಶಿಗ್ಗಾವ್‌ ರಸ್ತೆ ಕುಂಟುತ್ತಾ ಸಾಗಿದೆ.

ಉತ್ತರ ಕರ್ನಾಟಕದ ದೊಡ್ಡ ಧಾರ್ಮಿಕ ಕೇಂದ್ರ ಹುಲಿಗಿ ಕೂಡ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿದೆ. ಈ ಕೇಂದ್ರದಲ್ಲಿ ಬಸ್ ನಿಲ್ದಾಣ ಸೇರಿದಂತೆ ಅನೇಕ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಮಂಗಳವಾರ, ಶುಕ್ರವಾರ, ಹುಣ್ಣಿಮೆ ಮತ್ತು ಜಾತ್ರೆಯ ವಿಶೇಷ ಸಂದರ್ಭದಲ್ಲಿ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಬರುತ್ತಾರೆ. ವಾರ್ಷಿಕ ₹ 8ರಿಂದ ₹9 ಕೋಟಿ ಆದಾಯ ಸಂಗ್ರಹವಾದರೂ ಅದಕ್ಕೆ ತಕ್ಕಂತೆ ಹುಲಗಿ ಅಭಿವೃದ್ಧಿಗೆ ಇಚ್ಛಾಶಕ್ತಿ ತೋರಿಲ್ಲ ಎಂದು ಕ್ಷೇತ್ರದ ಮತದಾರರು ಬೇಸರ ವ್ಯಕ್ತಪಡಿಸುತ್ತಾರೆ.

**

ನೀರಾವರಿಗೆ ಹಣ ಕೊಡದೇ ಇದ್ದವರು ಅದರ ಬಗ್ಗೆ ಟೀಕೆ ಮಾಡುತ್ತಾರೆ. ಕೆಲಸ ಮುಗಿದಾಗಲೆಲ್ಲ ಸರ್ಕಾರ ಅನುದಾನ ನೀಡಿದ್ದರೆ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಕ್ಷೇತ್ರದ ಜನರಿಗೆ ಬಿಜೆಪಿ ಅನ್ಯಾಯ ಮಾಡಿದೆ. ಅಭಿವೃದ್ಧಿಯ ಬಗ್ಗೆ ನನ್ನದೇ ಆದ ಕನಸುಗಳು ಇವೆ. ಇನ್ನಷ್ಟು ಕೆಲಸ ಮಾಡುವ ಆಸೆ ಹೊಂದಿದ್ದೇನೆ. ಐದು ವರ್ಷಗಳ ಕೆಲಸ ಸಂಪೂರ್ಣ ತೃಪ್ತಿ ನೀಡಿದೆ. –ರಾಘವೇಂದ್ರ ಹಿಟ್ನಾಳ್‌, ಶಾಸಕ

**

ಅಳವಂಡಿ ಭಾಗದಲ್ಲಿ ರಸ್ತೆ ಮತ್ತು ಶಾಲಾ ಕೊಠಡಿಗಳ ನಿರ್ಮಾಣದಲ್ಲಿ ಶಾಸಕರು ಗಣನೀಯ ಸಾಧನೆ ಮಾಡಿದ್ದಾರೆ. ನೀರಾವರಿ ಯೋಜನೆಗಳ ತ್ವರಿತಗತಿ ಅನುಷ್ಠಾನಕ್ಕೆ ಕ್ರಮ ಕೈಗೊಂಡಿದ್ದಾರೆ. ಕೋಳೂರು–ಹಂದ್ರ ಗ್ರಾಮಗಳ 174 ಕೆರೆಗಳನ್ನು ತುಂಬಿಸಿದ್ದಾರೆ. ಅಲ್ಪಸಂಖ್ಯಾತರಿಗೆ ಹಾಗೂ ಹಿಂದುಳಿದವರಿಗೆ ಸರ್ಕಾರದ ಸೌಲಭ್ಯಗಳನ್ನು ಮುಟ್ಟಿಸಿದ್ದಾರೆ.

–ಕೃಷ್ಣಾರೆಡ್ಡಿ ಜಿ. ಗಲಬಿ, ಅಧ್ಯಕ್ಷ ಬ್ಲಾಕ್ ಕಾಂಗ್ರೆಸ್ ಕೊಪ್ಪಳ ಗ್ರಾಮೀಣ

**
ಕ್ಷೇತ್ರದ ಅಭಿವೃದ್ಧಿಯಂದರೆ ಕೇವಲ ರಸ್ತೆ ಮಾತ್ರವಲ್ಲ. ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರ ಹುಲಿಗಿಯಲ್ಲಿ ಕನಿಷ್ಠ ಮೂಲ ಸೌಲಭ್ಯಗಳು ಇಲ್ಲ. ಈ ಕೇಂದ್ರವನ್ನೇ ಪ್ರಧಾನವಾಗಿಟ್ಟುಕೊಂಡು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬಹಳಷ್ಟು ಎತ್ತರದ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲು ಸಾಕಷ್ಟು ಅವಕಾಶವಿತ್ತು. ಆ ಯಾವ ಕೆಲಸವನ್ನೂ ಶಾಸಕರು ಮಾಡಿಲ್ಲ.

–ಸಂಜೀವ ನಾಯಕ್, ನಿವೃತ್ತ ಸೈನಿಕ, ಹುಲಿಗಿ

**
ಶಾಸಕರು ಹಲವು ಜನಪರ ಕೆಲಸಗಳನ್ನು ಮಾಡಿದ್ದಾರೆ. ಹೋಬಳಿ ಕೇಂದ್ರ ಹಿಟ್ನಾಳದಿಂದ ಅಂಜನಾದ್ರಿ ಬೆಟ್ಟದವರೆಗೆ ₹ 11 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಿದ್ದಾರೆ. ಬಂಡಿ ಹರ್ಲಾಪುರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪದವಿ ಕಾಲೇಜು ಸ್ಥಾಪಿಸಲಾಗಿದೆ. ₹ 300 ಕೋಟಿ ವೆಚ್ಚದಲ್ಲಿ ಗ್ರಾಮೀಣ ಭಾಗಕ್ಕೆ ಕುಡಿಯುವ ನೀರಿನ ಯೋಜನೆ ಸೇರಿದಂತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದಿದ್ದಾರೆ. -ಸಿದ್ದಿ ಬಾಷಾ ಗೋರೇಬಾಳ, ಯುವಕ, ಬಂಡಿಹರ್ಲಾಪುರ

**
ಅಳವಂಡಿ ಹೋಬಳಿ ವ್ಯಾಪ್ತಿಯ ರೈತರ ಜಮೀನುಗಳಿಗೆ ಜೀವನಾಡಿಯಾಗಬೇಕಿದ್ದ ಸಿಂಗಟಲೂರು ಏತ ನೀರಾವರಿ ಯೋಜನೆ ಈಗಲೂ ಅನುಷ್ಠಾನಗೊಂಡಿಲ್ಲ. ಶಿಗ್ಗಾವ್‌–ಕಲ್ಮಲಾ ರಾಜ್ಯ ಹೆದ್ದಾರಿ ಅಭಿವೃದ್ಧಿಯಾಗದ ಕಾರಣ ಜನ ನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾಗಿದೆ. ಘಟ್ಟಿರಡ್ಡಿಹಾಳ, ಕವಲೂರು, ಬೋಚನಹಳ್ಳಿ , ಕಾತರಕಿ ಗುಡ್ಲಾನೂರ, ತಿಗರಿ, ನಿಲೋಗಿಪುರ ಸೇರಿದಂತೆ ಅನೇಕ ಬಸ್ ಸಮಸ್ಯೆ ಕಾಡುತ್ತಿದೆ. -ಶರಣಪ್ಪ ಜಡಿ, ಹೋರಾಟಗಾರ ಅಳವಂಡಿ

**

ಕೊಪ್ಪಳದ ಶಾಸಕರು ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ತಂದಿದ್ದ ಅನುದಾನವನ್ನೇ ಬಳಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಶೇ 40ರಷ್ಟು ಪರ್ಸಂಟೇಜ್‌ ಅವ್ಯವಹಾರ ಮಾಡಿದರೆ, ಜಿಲ್ಲೆಯಲ್ಲಿ ಬೋಗಸ್‌ ಬಿಲ್‌ಗಳ ಹಾವಳಿ ಹೆಚ್ಚಾಗಿದೆ. ನೀರಾವರಿ ಯೋಜನೆ ಜಾರಿಯ ಸುಳ್ಳು ಭರವಸೆ ನೀಡಲಾಗಿದೆ. ಸಾವಿರಾರು ಕೋಟಿ ಖರ್ಚು ಮಾಡಲಾಗುವುದು ಎಂದಿದ್ದಾರೆ. ಇಷ್ಟೆಲ್ಲ ಹೇಳುವ ಬದಲು ರೈತರಿಗೆ ಹೊಲದಲ್ಲಿ ಬೋರ್‌ ಹಾಕಿಸಿಕೊಟ್ಟಿದ್ದರೂ ಸಾಕಿತ್ತು.

-ವೀರೇಶ್‌ ಮಹಾಂತಯ್ಯನಮಠ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ

**
ಸತತ ಎರಡು ಬಾರಿ ಶಾಸಕರಾಗಿದ್ದವರಿಗೆ ಕೊಪ್ಪಳ ಕ್ಷೇತ್ರವನ್ನು ಗಮನಾರ್ಹವಾಗಿ ಬದಲಾವಣೆ ಮಾಡಲು ಇದ್ದ ಅವಕಾಶವನ್ನು ಬಳಸಿಕೊಂಡಿಲ್ಲ. ಕೊಪ್ಪಳ ತಾಲ್ಲೂಕಿನಲ್ಲಿ ಓಡಾಡಲು ಯಾವ ರಸ್ತೆಗಳೂ ಚೆನ್ನಾಗಿಲ್ಲ. ನೀರಾವರಿ ಯೋಜನೆ ಜಾರಿಗೊಂಡಿಲ್ಲ. ಮಹಿಳೆಯರ ಆರ್ಥಿಕ ಸಬಲೀಕರಣ ನಿಟ್ಟಿನಲ್ಲಿ ಕೆಲಸಗಳಾಗಿಲ್ಲ. ನನ್ನ ದೃಷ್ಟಿಯಲ್ಲಿ ಅಭಿವೃದ್ಧಿ ಶೂನ್ಯ.

-ಸಿ.ವಿ. ಚಂದ್ರಶೇಖರ್‌, ಬಿಜೆಪಿ ಮುಖಂಡ

ಪೂರಕ ಮಾಹಿತಿ: ಗುರುರಾಜ ಅಂಗಡಿ,
ಜುನಾಸಾಬ್‌ ವಡ್ಡಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT