ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಬಹುದಿನದ ಕನಸು ನನಸು

ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಅಭಿಮತ
Last Updated 7 ಸೆಪ್ಟೆಂಬರ್ 2020, 12:14 IST
ಅಕ್ಷರ ಗಾತ್ರ

ಕುಷ್ಟಗಿ: ‘ಅರ್ಹ ಬಡವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಮೂಲಕ ರಾಜ್ಯ ಸರ್ಕಾರ ತಾಲ್ಲೂಕಿಗೆ 715 ಮನೆಗಳನ್ನು ಮಂಜೂರು ಮಾಡಿದೆ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ತಿಳಿಸಿದರು.

ಇಲ್ಲಿನ ಕಂದಕೂರು ರಸ್ತೆಯ ಮಾರುತಿ ನಗರದ ನಿವಾಸಿಗಳಿಗೆ ಸೋಮವಾರ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

200 ಮನೆಗಳನ್ನು ಮಾರುತಿ ನಗರದ ಮಂಡಳಿಯ ಜಾಗದಲ್ಲಿ ನಿರ್ಮಿಸಲಾಗುತ್ತದೆ. ಉಳಿದ ಮನೆಗಳನ್ನು ನಿಡಶೇಸಿ ರಸ್ತೆಯಲ್ಲಿ ಹಿಂದಿನ ಸರ್ಕಾರ ಖರೀದಿಸಿರುವ ಜಮೀನಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಹಕ್ಕುಪತ್ರ ನೀಡುವುದಕ್ಕೆ ಅಡ್ಡಿಯಾಗಿದ್ದ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಕಾನೂನಾತ್ಮಕ ಪರಿಹಾರ ಕಂಡುಕೊಂಡಿದ್ದರಿಂದ ಜನರ ಬಹಳ ದಿನಗಳ ಕನಸು ನನಸಾಗಿದೆ ಎಂದು ಹೇಳಿದರು.

ಸುರಕ್ಷಿತ ಮತ್ತು ಉತ್ತಮ ವಾತಾವರಣದಲ್ಲಿ ಬಡವರ್ಗದವರು ಬದುಕು ರೂಪಿಸಿಕೊಳ್ಳಲಿ ಎಂಬ ಆಶಯದೊಂದಿಗೆ ಸರ್ಕಾರ ಕೊಳಗೇರಿ ಅಭಿವೃದ್ಧಿ ಮಂಡಳಿ ಮೂಲಕ ಮನೆಗಳನ್ನು ನಿರ್ಮಿಸಿದೆ. ಆದರೆ ಕೆಲವರು ತಲಾ ಎರಡು ಮನೆಗಳನ್ನು ಹೊಂದಿರುವುದು, ಕೆಲವರು ಮನೆಗಳನ್ನೇ ಬೇರೆಯವರಿಗೆ ಮಾರಾಟ ಮಾಡಿ ಯೋಜನೆಯನ್ನು ಕೆಲವರು ದುರ್ಬಳಕೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಒಂದು ಕುಟುಂಬಕ್ಕೆ ಒಂದೇ ಮನೆ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಅರ್ಹರಿಗೆ ಮನೆಗಳನ್ನು ಒದಗಿಸಿಕೊಡುವಂತೆ ಶಾಸಕ ಬಯ್ಯಾಪುರ, ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದರು.

ಜನರಿಗೆ ಅಗತ್ಯ ಮೂಲಸೌಲಭ್ಯಗಳನ್ನೂ ಒದಗಿಸುವಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಅದಕ್ಕೆ ಜನರ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಮಾರುತಿ ನಗರ ದೊಡ್ಡನಗರವಾಗಲಿದೆ. ಬರುವ ಚುನಾವಣೆ ವೇಳೆಗೆ ಪ್ರತ್ಯೇಕ ವಾರ್ಡ್ ಆಗಿ ಪರಿವರ್ತನೆಯಾಗಲಿದೆ ಎಂದು ಶಾಸಕ ವಿವರಿಸಿದರು.

ಮಂಡಳಿಯ ಗದಗ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುಧಾಕರ ಕಟ್ಟಿಮನಿ ಮಾತನಾಡಿ, 1992-94ರ ಅವಧಿಯಲ್ಲಿ ಹುಡ್ಕೊದಿಂದ ಈ ಮನೆಗಳನ್ನು ನಿರ್ಮಿಸಲಾಗಿದೆ. ಮನೆಗಳಲ್ಲಿ ವಾಸವಾಗಿರುವ ಅರ್ಹರಿಗೆ ಮತ್ತು ಇಲ್ಲಿಯವರೆಗಿನ ವಿದ್ಯುತ್ ಬಾಕಿ ಪಾವತಿಸಿ ಜೆಸ್ಕಾಂನಿಂದ ನಿರಪೇಕ್ಷಣಾ ಪತ್ರ ನೀಡಿರುವ 150 ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ವಿದ್ಯುತ್‌ ಬಿಲ್‌ ಪಾವತಿಸಿದ ನಂತರವಷ್ಟೆ ಉಳಿದವರಿಗೂ ಹಕ್ಕುಪತ್ರ ನೀಡುವ ಸಂಬಂಧ ಕೊಳಗೇರಿ ಅಭಿವೃದ್ಧಿ ಮಂಡಳಿ ತೀರ್ಮಾನಿಸಿದೆ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪುರಸಭೆ ಸದಸ್ಯೆ ಗೀತಾ ಕೋಳೂರು, ಸದಸ್ಯ ವಸಂತ ಮೇಲಿನಮನಿ ಮಾತನಾಡಿ,‘ಅನೇಕ ವರ್ಷಗಳಿಂದಲೂ ಇಲ್ಲಿಯ ಜನರ ಸಮಸ್ಯೆಗಳ ಬಗ್ಗೆ ಯಾರು ಗಮನ ಹರಿಸಿರಲಿಲ್ಲ. ಶಾಸಕ ಅಮರೇಗೌಡ ಬಯ್ಯಾಪುರ ಅವರು ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಪ್ರಯತ್ನ ನಡೆಸಿದ್ದರಿಂದ ಜನರು ಹಕ್ಕುಪತ್ರಗಳನ್ನು ಪಡೆಯುವಂತಾಯಿತು’ ಎಂದರು.

ಮಂಡಳಿಯ ವಿಷಯ ನಿರ್ವಾಹಕ ಶ್ರೀಪಾದ, ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ ಇದ್ದರು. ಪುರಸಭೆ ವ್ಯವಸ್ಥಾಪಕ ಪ್ರಹ್ಲಾದ ಜೋಷಿ ನಿರೂಪಿಸಿದರು. ಮಾರುತಿ ನಗರದ ಪ್ರಮುಖರು, ನಿವಾಸಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT