ಸೋಮವಾರ, ಆಗಸ್ಟ್ 15, 2022
27 °C
ಕುಷ್ಟಗಿ: 36 ಪಂಚಾಯಿತಿ ವ್ಯಾಪ್ತಿಯಲ್ಲಿ 10 ಕೃಷಿ ಹೊಂಡ ನಿರ್ಮಾಣ ಗುರಿ

ಕಂದಕ,ಬದು ನಿರ್ಮಾಣಕ್ಕೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ದುಡಿಯುವ ಕೈಗಳಿಗೆ ಕೆಲಸ, ಭೂ ಸವಕಳಿ ತಡೆ, ಮಳೆ ನೀರಿನ ಸದ್ಬಳಕೆ ಹೀಗೆ ವಿವಿಧ ಪರಿಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಲ್ಲಿಯ ತಾಲ್ಲೂಕು ಪಂಚಾಯಿತಿ ನರೇಗಾ ಯೋಜನೆಯನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳಿಸುತ್ತಿದೆ.

ಕೋವಿಡ್ ಕಾರಣಕ್ಕೆ ನಿಗದಿತ ಅಂತರ ಕಾಯ್ದುಕೊಳ್ಳಲು ಸೂಚಿಸಿ ಕೂಲಿಕಾರರಿಗೆ ಕೆಲಸ ಒದಗಿಸಿಕೊಟ್ಟು ಗುಳೆ ಹೋಗುವುದನ್ನು ತಡೆಯುವ ಜವಾಬ್ದಾರಿ ಒಂದೆಡೆ. ನರೇಗಾ ಯೋಜನೆಯಲ್ಲಿ ಖರ್ಚಾಗುವ ಹಣಕ್ಕೆ ಸರಿಸಮಾನವಾಗಿ ಆಸ್ತಿ ನಿರ್ಮಾಣವಾಗಬೇಕು ಎಂಬುವ ಸರ್ಕಾರದ ಉದ್ದೇಶ ಇನ್ನೊಂದೆಡೆ.

ಮಳೆಗಾಲದ ಅರಂಭದಲ್ಲಿ ರೈತರು ಹೊಲಗದ್ದೆಗಳ ಅಂಚಿನಲ್ಲಿ ಒಡ್ಡುಗಳನ್ನು ನಿರ್ಮಿಸಿಕೊಳ್ಳುತ್ತಿದ್ದು, ಅವರ ಜಮೀನಿನಲ್ಲಿಯೇ ಕಂದಕ ಬದುಗಳನ್ನು ಹಾಕಿಕೊಳ್ಳಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

‘ತಾಲ್ಲೂಕಿನಲ್ಲಿರುವ 36 ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ 50 ಕಂದಕ ಬದುಗಳು ಹಾಗೂ 10 ಕೃಷಿ ಹೊಂಡಗಳನ್ನು ನಿರ್ಮಿಸುವುದಕ್ಕೆ ಗುರಿ ನಿಗದಿಪಡಿಸಲಾಗಿದೆ. ರೈತರ ಬೇಡಿಕೆಗೆ ಅನುಸಾರ ಇನ್ನೂ ಹೆಚ್ಚು ಕೆಲಸ ನೀಡಲು ಪಂಚಾಯಿತಿಗಳಿಗೆ ಸೂಚಿಸಲಾಗಿದೆ’ ಎಂದು ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ವೆಂಕಟೇಶ ವಂದಾಲ ಮಾಹಿತಿ ನೀಡಿದರು.

ಕೃಷಿ ಹೊಂಡಗಳು ಹಾಗೂ ಕಂದಕ ಬದುಗಳ ನಿರ್ಮಾಣದಿಂದ ಮಳೆ ನೀರಿನ ಸಂರಕ್ಷಣೆಯಾಗಿ ಅಂತರ್ಜಲ ಹೆಚ್ಚಳವಾಗುತ್ತದೆ. ಜಮೀನಿನಲ್ಲಿ ತೇವಾಂಶ ಕಾಪಾಡಲು ಸಾಧ್ಯವಾಗುತ್ತದೆ. ಇದರಿಂದ ಜಮೀನಿನಲ್ಲಿಯ ಫಲವತ್ತಾದ ಮಣ್ಣು ಮಳೆ ರಭಸಕ್ಕೆ ಕೊಚ್ಚಿ ಹೋಗುವುದನ್ನು ತಡೆಯಬಹುದು. ಹಾಗಾಗಿ ಈ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ವಿವರಿಸಿದರು. ಬದುಗಳ ನಿರ್ಮಾಣಕ್ಕೆ ಕೆಲ ರೈತರು ಹಿಂದೇಟು ಹಾಕುತ್ತಿರುವುದು ಕಂಡುಬಂದಿದ್ದು ಈ ಕುರಿತು ಜನರಿಗೆ ಅಗತ್ಯ ರೀತಿಯಲ್ಲಿ ಮನವರಿಕೆ ಮಾಡಿಕೊಡಬೇಕು. ನರೇಗಾ ಯೋಜನೆಯ ಪ್ರಯೋಜನ ಪಡೆಯುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.