ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗಿನ ರಾಜಕಾರಣ ನನಗೆ ಸರಿ ಹೊಂದುತ್ತಿಲ್ಲ: ಶಾಸಕ ರಾಯರಡ್ಡಿ

Published 21 ಅಕ್ಟೋಬರ್ 2023, 12:35 IST
Last Updated 21 ಅಕ್ಟೋಬರ್ 2023, 12:35 IST
ಅಕ್ಷರ ಗಾತ್ರ

ಕೊಪ್ಪಳ: ’ಎಲ್ಲ ಪಕ್ಷಗಳಲ್ಲಿ ದ್ವೇಷ, ಅಸೂಯೆ, ಜಾತಿ ಹಾಗೂ ಹಣದ ಬಲವೇ ನಡೆಯುತ್ತಿದೆ. ಹೀಗಾಗಿ ಪ್ರಸ್ತುತ ರಾಜಕಾರಣ ನನಗೆ ಸರಿಹೊಂದುತ್ತಿಲ್ಲ. ನಿವೃತ್ತಿ ಪಡೆಯುವುದು ಉತ್ತಮವೆಂದು ಮನಸ್ಸಿಗೆ ಅನಿಸುತ್ತಿದೆ’ ಎಂದು ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಕುಕನೂರು ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನನಗೂ ಈಗ 67 ವರ್ಷ ಆಯಿತು. ರಾಜಕಾರಣ ಹೊಂದುವುದಿಲ್ಲ ಎನ್ನುವ ಭಾವನೆ ನನ್ನ ಮನಸ್ಸಿಗೆ ಮೂಡಿದೆ. ಚಿಲ್ಲರೆ ರಾಜಕಾರಣ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಆತ್ಮಾವಲೋಕ ಮಾಡಿಕೊಳ್ಳಬೇಕಾದ ಅಗತ್ಯವಿದೆ’ ಎಂದರು.

ರಾಜಕೀಯ ವೈರಾಗ್ಯದ ಮಾತು ಯಾಕೆ ಎನ್ನುವ ಪ್ರಶ್ನೆಗೆ ’ಈಗಿನ ವ್ಯವಸ್ಥೆ’ ಎಂದಷ್ಟೇ ಹೇಳಿದರು.

‘ಮಸಬ ಹಂಚಿನಾಳ ಗ್ರಾಮದ ಜನ ಚುನಾವಣೆಯಲ್ಲಿ ನನಗೆ ಮತ ನೀಡದೇ ಇರಬಹುದು. ನನ್ನ ಎದುರು ಸೋತ ಹಾಲಪ‍್ಪ ಆಚಾರ್‌ ಇದೇ ಊರಿನವರು. ಅವರಿಗೆ ನಮ್ಮೂರಿಗೆ ಏನೂ ಅಭಿವೃದ್ಧಿ ಮಾಡಿಲ್ಲವೆನ್ನುವ ಭಾವನೆ ಬರಬಾರದು ಎನ್ನುವ ಕಾರಣಕ್ಕಾಗಿಯೇ ಈ ವರ್ಷದ ಅಭಿವೃದ್ಧಿ ಕೆಲಸಗಳಿಗೆ ಅವರ ಊರಿನಿಂದಲೇ ಚಾಲನೆ ನೀಡಲಾಗಿದೆ. ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ’ ಎಂದರು.

‘ಬೆಳಗಾವಿಯಲ್ಲಿ ಯಾವುದೇ ರಾಜಕೀಯ ನಡೆದಿಲ್ಲ. ಅದನ್ನು ಸೃಷ್ಟಿ ಮಾಡಲಾಗಿದೆಯಷ್ಟೇ. ಡಿ.ಕೆ. ಶಿವಕುಮಾರ್‌ ಅಲ್ಲಿಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದಿಢೀರ್‌ ಹೋಗಿದ್ದರಿಂದ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ಅಲ್ಲಿನ ಕೆಲ ಶಾಸಕರು ಹೇಳಿದ್ದಾರೆ. ನಮ್ಮ ಪಕ್ಷ ಪೂರ್ಣ ಐದು ವರ್ಷ ಆಡಳಿತ ನಡೆಸುತ್ತದೆ’ ಎಂದರು.

‘ಸಚಿವ ಸ್ಥಾನದ ಬಗ್ಗೆ ಯಾರೂ ನನ್ನನ್ನು ಕೇಳಿಲ್ಲ. ನಾನೂ ಕೇಳುವುದಿಲ್ಲ. ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್‌ ಹಾಗೂ ಸಿದ್ದರಾಮಯ್ಯ ತೀರ್ಮಾನಿಸುತ್ತಾರೆ. ಎರಡನೇ ಅವಧಿ ಇದೆಯೇ ಇಲ್ಲವೊ ಎನ್ನುವುದು ಗೊತ್ತಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT