ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗೊಂದಿ ರಾಯರಡ್ಡಿ ಹೇಳಿಕೆ ಖಂಡಿಸಿ ಪ್ರತಿಭಟನೆ

Published 11 ಜುಲೈ 2023, 14:37 IST
Last Updated 11 ಜುಲೈ 2023, 14:37 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ರಾಜ್ಯದ ಪ್ರಮುಖ ಮಾದಕವಸ್ತು ಮಾಫಿಯಾ ಕೇಂದ್ರವಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರು ನೀಡಿದ ಹೇಳಿಕೆಯನ್ನು ಖಂಡಿಸಿ, ಆನೆಗೊಂದಿ ಭಾಗದ ರೆಸಾರ್ಟ್ ಮಾಲೀಕರು ಮತ್ತು ಕೆಆರ್‌ಪಿಪಿ ಮುಖಂಡರು ಕೃಷ್ಣದೇವರಾಯ ವೃತ್ತದಲ್ಲಿ ರಾಯರಡ್ಡಿ ಭಾವಚಿತ್ರ ದಹಿಸಿ ಪ್ರತಿಭಟಿಸಿದರು.

ಕೆಆರ್‌ಪಿಪಿ ಮುಖಂಡ ಜಿಲಾನಿ ಪಾಷಾ ಮಾತನಾಡಿ ‘ಗಂಗಾವತಿ ಕ್ಷೇತ್ರದ ಶಾಸಕ ಜಿ.ಜನಾರ್ದನ ರೆಡ್ಡಿ ಅಧಿವೇಶನದಲ್ಲಿ ಆನೆಗೊಂದಿ ಭಾಗದಲ್ಲಿ ಬಹುತೇಕರು ಜಮೀನುಗಳಲ್ಲಿ ರೆಸಾರ್ಟ್ ಮಾಡಿಕೊಂಡು ಉಪಜೀವನ ನಡೆಸುತ್ತಿದ್ದಾರೆ. ಇದೀಗ ಅನಧಿಕೃತ, ಅಕ್ರಮವಾಗಿವೆಯೆಂದು ಅಧಿಕಾರಿಗಳು ತೆರವು ಮಾಡುತ್ತಿದ್ದು, ಅವರಿಗೆ ಬದುಕಲು ಅವಕಾಶ ಮಾಡಿಕೊಡಿ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದ್ದರು. ಈ ವೇಳೆ ರಾಯರಡ್ಡಿ ಮಾತನಾಡಿದ್ದಾರೆ’ ಎಂದರು.

‘ಗಂಗಾವತಿ ಕ್ಷೇತ್ರಕ್ಕೆ ಸಂಬಂಧವಿಲ್ಲದ ರಾಯರಡ್ಡಿ, ಅಧಿವೇಶನದ ನಡುವೆ ಆನೆಗೊಂದಿ ಡ್ರಗ್ ಮಾಫಿಯಾ ಕೇಂದ್ರ ಅಂತ ಹೇಳಿಕೆ ನೀಡಿದ್ದಾರೆ. ಹಿಂದೆ ಸಚಿವರಿದ್ದಾಗ ರಾಯರಡ್ಡಿ ವಿರೂಪಾಪುರ ಗಡ್ಡೆಗೆ ಬಂದು ಮಾದಕವಸ್ತು ಸೇವನೆ ಮಾಡುತ್ತಿದ್ದರು. ನಾಲ್ಕೈದು ದಿನ ಅಲ್ಲೆ ಉಳಿಯುತ್ತಿದ್ದರು. ಆಗ ಗೊತ್ತಾಗಿರಲಿಲ್ಲವೇ? ಅಧಿವೇಶನದಲ್ಲಿ ನೀಡಿದ ಹೇಳಿಕೆ ವಾಪಸ್‌ ಪಡೆಯಬೇಕು. ಜನರ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

ರೆಸಾರ್ಟ್ ಮಾಲೀಕ ಸುನೀಲ್ ಮಾತನಾಡಿ ‘ರಾಯರಡ್ಡಿ ರಾಜ್ಯದಲ್ಲಿ ಅಂಜನಾದ್ರಿ ಭಾಗ ಮಾದಕವಸ್ತು ಕೇಂದ್ರ ಹೇಳುತ್ತಿದ್ದಾರಲ್ಲ. ಅವರ ಬಾಯಿಚಪಲ ಜತೆಗೆ ಹೊಸಪೇಟೆ ರೆಸಾರ್ಟ್ ಮಾಲೀಕರ ಸಂಘದ ಲಾಬಿ ಸಹ ಇದೆ. ಅವೆರಲ್ಲ ಒಗ್ಗಟ್ಟಾಗಿ ಆನೆಗೊಂದಿ ಭಾಗದಲ್ಲಿ ರೆಸಾರ್ಟ್ ಮಾಡಿಕೊಂಡವರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ರಾಯರಡ್ಡಿ ಯಾವಾಗಲೂ ಮಲ್ಲಿಗೆ ಹೋಟಲಿನಲ್ಲಿ ಉಳಿದುಕೊಳ್ಳುತ್ತಾರೆ. ಸದನಕ್ಕೂ ಹೊಟೇಲ್ ಮಾಲೀಕರ ಜತೆ ಮುನ್ನ ಚರ್ಚೆ ನಡೆ, ಲಾಬಿ ಮಾಡಿಕೊಡುವ ಉದ್ದೇಶದಿಂದ ಅಧಿವೇಶನದಲ್ಲಿ ಆನೆಗೊಂದಿ ಭಾಗದ ಬಗ್ಗೆ ಮಾತನಾಡಿದ್ದಾರೆ. ಇದು ಕಿಷ್ಕಿಂದಾ ಕ್ಷೇತ್ರಕ್ಕೆ ಮಾಡಿದ ಅಪಮಾನವಾಗಿದೆ’ ಎಂದು ಹೇಳಿದರು.

ನಂತರ ರೆಸಾರ್ಟ್ ಮಾಲೀಕರು ಕೃಷ್ಣದೇವರಾಯ ವೃತ್ತದಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ವಿರುದ್ದ ಧಿಕ್ಕಾರ ಕೂಗಿ, ಶಿರಸ್ತೇದಾರ್ ರವಿಕುಮಾರ ಅವರಿಗೆ ಮನವಿ ಸಲ್ಲಿಸಿದರು. ಕೆಆರ್‌ಪಿಪಿ ಮುಖಂಡ ಚಂದ್ರು ಹೀರೂರು, ಮಂಜುನಾಥ ಕಲಾಲ್, ಮಲ್ಲಿಕಾರ್ಜುನ ಸ್ವಾಮಿ, ಪುಟ್ಟ, ಬಸವ, ಸಂತೋಷ, ವಿರೇಶ ಅಂಜನಾದ್ರಿ, ರೆಸಾರ್ಟ್ ಮಾಲೀಕರಾದ ರವಿ, ಗೋಪಿ, ಮಾರುತಿ, ಸುನೀಲ, ವಿಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT