ಕೊಪ್ಪಳ: ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎಸ್. ಫಣೀಂದ್ರ ಅವರು ಶನಿವಾರದಿಂದ ಮೂರು ದಿನ ಇಲ್ಲಿನ ಸರ್ಕಿಟ್ ಹೌಸ್‌ನಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ವಿಚಾರಣೆ ನಡೆಸಲಿದ್ದಾರೆ ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್. ಅರಸಿದ್ಧಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಸರ್ಕಾರಿ ಅಧಿಕಾರಿ ಅಥವಾ ನೌಕರರಿಂದ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಕಾನೂನು ರೀತಿಯಲ್ಲಿ ಆಗಬೇಕಾದ ಕೆಲಸಗಳು ವಿಳಂಬವಾಗಿದ್ದರೆ, ಮಾಡಿಕೊಡಲು ಅಧಿಕಾರಿಗಳು ತೊಂದರೆ ನೀಡಿದರೆ ಅಂಥವರು ದೂರು ನೀಡಬಹುದು’ ಎಂದು ತಿಳಿಸಿದರು.
ಮೂರು ದಿನಗಳ ಅವಧಿಯಲ್ಲಿ ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 1.30 ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 5ರ ತನಕ ಕುಂದುಕೊರತೆ ಸಭೆ ಜರುಗಲಿದೆ. ಜಿಲ್ಲೆಗೆ ಸಂಬಂಧಿಸಿದ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾದ ತನಿಖೆ ಅಥವಾ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳಿಗೆ ಸಂಬಂಧಿಸಿದ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಉಪ ಲೋಕಾಯುಕ್ತರು ವಿಚಾರಣೆ ನಡೆಸುವರು. ಈ ಕಾರ್ಯಕ್ರಮವು ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ನಡೆಯಲಿದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಲೋಕಾಯುಕ್ತ ಕೊಪ್ಪಳ ಕಚೇರಿಯ ಪೊಲೀಸ್ ಉಪಾಧೀಕ್ಷಕ ಸಲೀಂ ಪಾಶಾ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಲೋಕಾಯುಕ್ತ ಪೊಲೀಸ್ ಇನ್‌ಸ್ಟೆಕ್ಟರ್‌ಗಳಾದ ಗಿರೀಶ್ ರೋಡಕರ್, ಚಂದ್ರಪ್ಪ, ರಾಜೇಶ ಮತ್ತು ಕೊಪ್ಪಳ ಲೋಕಾಯುಕ್ತ ಕಚೇರಿಯ ಸಿಬ್ಬಂದಿ ರಾಮಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.