ಭಾನುವಾರ, ಮೇ 29, 2022
21 °C
ಕುಷ್ಟಗಿ ತಾಲ್ಲೂಕಿನಲ್ಲಿ ಸರಳ, ಸಂಭ್ರಮದ ಗಣರಾಜ್ಯೋತ್ಸವ

‘ಪ್ರಜಾಪ್ರಭುತ್ವದ ಬೇರು ಗಟ್ಟಿಗೊಳ್ಳಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ‘ಕೇವಲ ಹಕ್ಕುಗಳನ್ನು ಪ್ರತಿಪಾದಿಸುವುದಷ್ಟೇ ಅಲ್ಲ ಪ್ರಜೆಗಳು ಸಂವಿಧಾನದಲ್ಲಿ ಅಡಕವಾಗಿರುವ ಕರ್ತವ್ಯಗಳನ್ನೂ ಅರಿತು ನಡೆಯುವ ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಬೇಕಿದೆ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,‘ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಲಾಗಿದೆ. ಭವಿಷ್ಯದ ಯುವ ಪೀಳಿಗೆ ರಾಷ್ಟ್ರೀಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಆಲೋಚನೆ ನಡೆಸಬೇಕಿದೆ’ ಎಂದರು.

ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಎಂ.ಸಿದ್ದೇಶ್‌ ಮಾತನಾಡಿ,‘ಸಂವಿಧಾನ ಭಾರತೀಯರ ಪವಿತ್ರ ಗ್ರಂಥವಾಗಿದೆ. ಪ್ರತಿಯೊಬ್ಬರೂ ಗೌರವಿಸಬೇಕು’ ಎಂದರು.

ಪ್ರಾರಂಭದಲ್ಲಿ ಪೊಲೀಸ್‌, ಗೃಹರಕ್ಷಕದಳ, ಸ್ಕೌಟ್‌ ಮತ್ತು ಗೈಡ್ಸ್‌, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ವೀರಪ್ಪ ನಾಯಕ ನೇತೃತ್ವದಲ್ಲಿ ಪಥಸಂಚಲನ ನಡೆಸಿದರು. ಶಾಸಕ ಅಮರೇಗೌಡ ಬಯ್ಯಾಪುರ ಗೌರವವಂದನೆ ಸ್ವೀಕರಿಸಿದರು.

ಶಾಲಾ ಮಕ್ಕಳು ರಾಷ್ಟ್ರಗೀತೆಗಳನ್ನು ಪ್ರಸ್ತುತಪಡಿಸಿದರು. ಕೋವಿಡ್‌ ಸಂದರ್ಭದಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಜಯರಾಂ ಚವ್ಹಾಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಚನ್ನಬಸಪ್ಪ, ಸರ್ಕಲ್‌ ಇನ್‌ಸ್ಪೆಕ್ಟರ್ ಎನ್‌.ಆರ್‌.ನಿಂಗಪ್ಪ, ಪುರಸಭೆ ಮುಖ್ಯಾಧಿಕಾರಿ ಉಮೇಶ ಹಿರೇಮಠ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ನಾಗಪ್ಪ ಬಿಳಿಯಪ್ಪನವರ, ಜೀವನಸಾಬ್ ವಾಲಿಕಾರ ನಿರೂಪಿಸಿದರು.

ಸಂತೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಪುರಸಭೆ ಕಚೇರಿಯಲ್ಲಿ ಅಧ್ಯಕ್ಷ ಜಿ.ಕೆ.ಹಿರೇಮಠ ಧ್ವಜಾರೋಹಣ ನೆರವೇರಿಸಿದರು. ಗಣರಾಜ್ಯೋತ್ಸವದ ನಿಮಿತ್ತ ಪುರಸಭೆ ಕಚೇರಿ ಮತ್ತು ಆವರಣವನ್ನು ವಿದ್ಯುತ್‌ ದೀಪಗಳು, ತಳಿರುತೋರಣಗಳಿಂದ ಅಲಂಕರಿಸಿದ್ದು, ಗಮನಸೆಳೆಯಿತು. ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ದೇವೇಂದ್ರಪ್ಪ ಬಳೂಟಗಿ ಅವರಿಂದ ಧ್ವಜಾರೋಹಣ ನಡೆಯಿತು.

ಬಾಲಕರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಬಾಳಪ್ಪ ಬೇವಿನಕಟ್ಟಿ ಧ್ವಜಾರೋಹಣ ನಡೆಸಿದರು. ಮುಖ್ಯಶಿಕ್ಷಕಿ ರತ್ನಮ್ಮ ದೇಸಾಯಿ ಇತರರು ಇದ್ದರು.

ತಳುವಗೇರಾದಲ್ಲಿನ ವಿರುಪಾಕ್ಷಲಿಂಗ ಪತ್ತಿನ ಸೌಹಾರ್ದ ಸಹಕಾರ ಸಂಘದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಅಧ್ಯಕ್ಷ ಮಲ್ಲಪ್ಪ ಗೊಣ್ಣಾಗರ ನೆರವೇರಿಸಿದರು. ವ್ಯವಸ್ಥಾಪಕಿ ಶಿವಮ್ಮ ಕಂದಕೂರ, ನಿರ್ದೇಶಕರಾದ ವೀರಪ್ಪ ಕೈಲವಾಡಗಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಮದ್ದಾನಪ್ಪ ಬಂಡಿ ಉಪಾಧ್ಯಕ್ಷ ಕನಕಪ್ಪ ಹಳ್ಳದಮಾಳಿ, ಸಂಗಮೇಶ ಕಂದಕೂರ, ಶಿವಪ್ಪ ಬಂಡಿ, ಅಂದಾನಗೌಡ ಮರೇಗೌಡ್ರ, ಶರಣು ಹುಲಿಹೈದರ, ಮಲ್ಲಪ್ಪ ಮುರಡಿ, ಶರಣಪ್ಪ ಚೌಡಿ ಹಾಗೂ ಇತರರು ಇದ್ದರು.

ಜುಮಲಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯಶಿಕ್ಷಕ ಸೋಮನಗೌಡ ಪಾಟೀಲ ರಾಷ್ಟ್ರಧ್ವಜಾರೋಹಣ ನೆರವೇರಿಸಿ ರಾಷ್ಟ್ರ ಪ್ರೇಮ ನಮ್ಮೆಲ್ಲರ ಗುರಿಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಶಾಲೆಗೆ 100 ಊಟದ ತಟ್ಟೆಗಳನ್ನು ದೇಣಿಗೆ ನೀಡಿದ ದಾನಿ ಚನ್ನಮಲ್ಲಮ್ಮ ಶರಣಗೌಡ ಗೊರೆಬಾಳ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಬಸವರಾಜ ಕೊರ್ಲಿ, ರಾಮಣ್ಣ ಹಡಗಲಿ, ಮಹದೇವಪ್ಪ ಗಂಗಾಮತ, ಹನುಮಂತಪ್ಪ ಚನ್ನದಾಸರ ಇತರರು ಇದ್ದರು. ಶಿಕ್ಷಕಿ ಅಕ್ಕಮ್ಮ ವಿಶೇಷ ಉಪನ್ಯಾಸ ನೀಡಿದರು. ಚಂದ್ರಶೇಖರ ಮಾತನಾಡಿದರು. ಶಿಕ್ಷಕ ಚಿದಾನಂದಪ್ಪ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು