ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗ ಪಡೆಯದ ನವಲಿ ಜಲಾಶಯ ನಿರ್ಮಾಣ

ಕೊಪ್ಪಳ, ರಾಯಚೂರು ಜಿಲ್ಲೆಗಳ ಕೊನೆ ಭಾಗದ ರೈತರಿಗೂ ದಕ್ಕಲಿದೆ ನೀರು: ವಿಶೇಷ ಕಾಳಜಿ ವಹಿಸಲು ರೈತರ ಆಗ್ರಹ
Last Updated 5 ಏಪ್ರಿಲ್ 2021, 2:47 IST
ಅಕ್ಷರ ಗಾತ್ರ

ಕಾರಟಗಿ: ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿ, ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿ, ಲಭ್ಯವಿರುವ ಪಾಲಿನ ನೀರನ್ನು ಬಳಸಿಕೊಳ್ಳದ ಪರಿಸ್ಥಿತಿ ಹಲವು ದಶಕಗಳಿಂದಲೂ ಇದೆ.

ಮಳೆಗಾಲದಲ್ಲಿ ಬರುವ ನೀರನ್ನು ಸಂಗ್ರಹ ಮಾಡಿಕೊಳ್ಳಲಾಗದೇ, ನದಿ ಮೂಲಕ ವ್ಯರ್ಥವಾಗಿ ಹರಿದರೂ ಅದನ್ನು ಸದ್ವಿನಿಯೋಗ ಮಾಡಿಕೊಳ್ಳುವ ಆಂಧ್ರ ಕ್ರಮದಿಂದ ಅರಿತುಕೊಂಡಿರುವ ಜನಪ್ರತಿನಿಧಿಗಳು ನವಲಿ ಬಳಿ ‘ಸಮನಾಂತರ ಜಲಾಶಯ’ (ಪ್ರವಾಹ ಹರಿವು ಕಾಲುವೆ) ನಿರ್ಮಿಸಲು ಅಣಿಯಾಗಿದ್ದಾರೆ.

ಈ ಸಂಕಲ್ಪ ಸಾಕಾರಗೊಂಡರೆ ಕೊಪ್ಪಳ ಜಿಲ್ಲೆ ಸಹಿತ ರಾಯಚೂರು ಜಿಲ್ಲೆಗೆ ವರದಾನ ಆಗಲಿದೆ. ಜಲಾಶಯದಿಂದ ಆರಂಭಗೊಳ್ಳುವ 15 ಕೆರೆಗಳೂ ಜಲಾಶಯಗಳಾಗಿ ಪರಿವರ್ತನೆಯಾಗಲಿವೆ. ಬರ ಪೀಡಿತ ಲಕ್ಷಾಂತರ ಎಕರೆ ಭೂಮಿ ನೀರು ಕಂಡು ಸಮೃದ್ದಿ ಮನೆ ಮಾಡಲಿದೆ.

ಕನಕಗಿರಿ ಕ್ಷೇತ್ರದ ಒಣ ಪ್ರದೇಶ, ಬರಗಾಲದ ಕರಿನೆರಳಿನ ಅಡಿ ಇರುವ ಅನೇಕ ಗ್ರಾಮಗಳು ‘ತುಂಗಾ ಪಾನ’ ಯೋಜನೆಯಿಂದ ಸಮೃದ್ದವಾಗಲಿವೆ. ಮಹತ್ವಾಕಾಂಕ್ಷಿ ರೈಸ್‌ಟೆಕ್ ಪಾರ್ಕ್‍ಗೆ ಕಾಯಕಲ್ಪ ದೊರೆಯಲಿದೆ. ನೀರು ಕಾಣದ ಸ್ಥಿತಿಯಲ್ಲಿರುವ ರಾಯಚೂರು ಕೊನೆಯ ಭಾಗದವರೆಗೂ ಸಮರ್ಪಕ ನೀರು ಪೂರೈಕೆಯಾಗಲಿದೆ. ನಮ್ಮ ಭಾಗದ ಕೊನೆಯ ಭಾಗದವರಿಗೆ ನೀರು ಮರೀಚಿಕೆ ಎಂಬ ಸಮಸ್ಯೆಗೆ ಶಾಶ್ವತ ಕಾಯಕಲ್ಪ ದೊರೆಯಲಿದೆ ಎನ್ನಲಾಗುತ್ತಿದೆ.

ಈ ಭಾಗದ ಜನಪ್ರತಿನಿಧಿಗಳು ಯೋಜನೆಯ ಕನಸು ಕಂಡಾಗ ತಗಲುವ ಯೋಜನಾ ವೆಚ್ಚ ಏರುತ್ತಲೇ ಹೊರಟಿದೆ. ಹಿಂದೆ ಮಾಜಿ ಸಚಿವ ಶಿವರಾಜ ತಂಗಡಗಿ ಅವಧಿಯಲ್ಲಿ ಯೋಜನಾ ವೆಚ್ಚ ₹5,800 ಕೋಟಿ. ಈಗ ಶಾಸಕ ಬಸವರಾಜ ದಢೇಸೂಗೂರು ಅವಧಿಯಲ್ಲಿ ಯೋಜನಾ ವೆಚ್ಚ ಸಾಮರ್ಥ್ಯಕ್ಕೆ ತಕ್ಕಂತೆ ₹9 ರಿಂದ ₹12 ಸಾವಿರ ಕೋಟಿ ಎನ್ನಲಾಗುತ್ತಿದೆ.

ಕಳೆದ ಸಾಲಿನ ಬಜೆಟ್‌ನಲ್ಲಿ ಡಿಪಿಆರ್‌ ಸಿದ್ದಪಡಿಸಲು ₹14.30 ಕೋಟಿ ಮೀಸಲಿರಿಸಿದ್ದರೆ, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಯೋಜನೆ ಕಾರ್ಯಗತಕ್ಕೆ ವಿಶೇಷ ಮುತುವರ್ಜಿ ವಹಿಸಲು ಸೂಚಿಸಲಾಗಿದೆ. ಒಂದೆರಡು ತಿಂಗಳಲ್ಲಿ ಡಿಪಿಆರ್‌ ಸಿದ್ದವಾಗಲಿದ್ದು, ಸರ್ಕಾರ ಬೃಹತ್‌ ಪ್ರಮಾಣದ ಅನುದಾನ ನೀಡಿದರೆ ಯೋಜನೆ ಕಾರ್ಯಗತಗೊಳ್ಳಲಿದೆ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಆರಂಭವಾಗಲು ಇಷ್ಟು ದಿನ ಬೇಕಾಯಿತು.

ತುಂಗಭದ್ರಾ ಜಲಾಶಯದಲ್ಲಿ 30ಕ್ಕೂ ಹೆಚ್ಚು ಟಿಎಂಸಿ ಹೂಳು ತುಂಬಿ, ಇಷ್ಟೇ ಪ್ರಮಾಣದ ನೀರಿನ ಸಂಗ್ರಹಣೆ ಪ್ರಮಾಣ ಕುಸಿದಿದೆ. ಪರಿಣಾಮವಾಗಿ ಯೋಜನಾ ವ್ಯಾಪ್ತಿಯ ರಾಯಚೂರು ಭಾಗಕ್ಕೂ, ನಮ್ಮ ಭಾಗದ ಕೆಳ ಭಾಗಕ್ಕೂ ನೀರು ತಲುಪಿಸುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಸಮಾನಾಂತರ ಜಲಾಶಯದ ಯೋಜನೆ ಸಾಕಾರಗೊಂಡರೆ, ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂಬ ಲೆಕ್ಕಾಚಾರ ಮುಂದಿದೆ.

ಯೋಜನೆ ಜಾರಿಯಾದರೆ ಅಣೆಕಟ್ಟೆಯಿಂದ ಪೋಲಾಗಿ ನದಿ ಮೂಲಕ ಪಕ್ಕದ ರಾಜ್ಯದ ಪಾಲಾಗುವ ನೀರಿನಿಂದಲೇ ನಮ್ಮ ಭಾಗದ ಬರಪೀಡಿತ ಪ್ರದೇಶಕ್ಕೆ ನೀರುಣಿಸುವ ಯೋಜನೆ ಇದಾಗಿದೆ. ಕಳೆದ ಕೆಲ ವರ್ಷದಲ್ಲಿ ಮಳೆಗಾಲದಲ್ಲಿ ಸಾಗರೋಪಾದಿಯಲ್ಲಿ ಹರಿದು ಬಂದ ನೀರನ್ನು ನದಿ ಮೂಲಕ ಬಿಟ್ಟಿರುವುದು ಎಷ್ಟೇಂಬುದು ಲೆಕ್ಕಕ್ಕಿಲ್ಲದಾಗಿದೆ. ಯೋಜನೆ ಜಾರಿಯಿಂದ ಅವಿಭಜಿತ ರಾಯಚೂರು ಜಿಲ್ಲೆಯ ಕುಡಿವ ನೀರಿನ ಸಮಸ್ಯೆ ನೀಗಿಸಲು ಮತ್ತು ಕೃಷಿ ಚಟುವಟಿಕೆಗೆ ಅಗತ್ಯ ನೀರಾವರಿ ಸೌಲಭ್ಯ ಒದಗಿಸಲು, ಈ ಭಾಗದ ಬರ ಪ್ರದೇಶದಲ್ಲೂ ಹಚ್ಚಹಸಿರು ಪರಿಸರ ಸೃಷ್ಟಿಯಾಗಲಿದೆ.

ಜಲಾಶಯದಲ್ಲಿ ಹೂಳು ಸಂಗ್ರಹಣೆ ಹೆಚ್ಚುತ್ತಿದೆ. ಈಗಿನ ಪ್ರಮಾಣ40 ಟಿಎಂಸಿ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ. ಇದೇ ಪ್ರಮಾಣದಷ್ಟು ನೀರಿನ ಸಂಗ್ರಹಣೆ ಕುಸಿದಿದೆ. ಹೂಳು ತಗೆಯುವುದು ಅಸಾಧ್ಯ ಎಂಬ ನಿರ್ಧಾರಕ್ಕೆ ಬರಲಾಗಿದೆಯಾದರೂ, ಪರ್ಯಾಯವಾಗಿ ನೀರು ಸಂಗ್ರಹಣೆ, ನಮ್ಮ ಪಾಲಿನ ನೀರಿನ ಹಕ್ಕು
ಪಡೆಯುವ ಕಾರ್ಯ ಎಂದೋ ಆಗಬೇಕಿರುವುದು ಇದೀಗ ಸಕಾರದ ನೆರಳು ಮಾತ್ರ ಗೋಚರಿಸುತ್ತಿದೆ.

‘ಕೊಪ್ಪಳ ತಾಲ್ಲೂಕಿನ 5, ಗಂಗಾವತಿ ತಾಲ್ಲೂಕಿನ 6, ಕುಷ್ಟಗಿ ಮತ್ತು ಸಿಂಧನೂರು ತಾಲ್ಲೂಕಿನ ತಲಾ 1 ಹಾಗೂ ಲಿಂಗಸೂಗೂರು ತಾಲ್ಲೂಕಿನಲ್ಲಿ 2 ಹೀಗೆ ಒಟ್ಟು 15 ಸಮತೋಲನಾ ಜಲಾಶಯಗಳ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕಾಗುತ್ತದೆ ಎನ್ನುತ್ತಾರೆ’ ಮಾಜಿ ಸಚಿವ ಶಿವರಾಜ ತಂಗಡಗಿ.

ಶಾಸಕ ಬಸವರಾಜ ದಢೇಸೂಗೂರು ಪ್ರತಿಕ್ರಿಯಿಸಿ ‘ಹೂಳಿಗೆ ಪರ್ಯಾಯ ಸಮಾನಾಂತರ ಜಲಾಶಯ ಅವಶ್ಯಕ. ಈಗಾಗಲೇ ಸರ್ಕಾರದ ಮೇಲೆ ಒತ್ತಡ ಏರಲಾಗಿದೆ. ಪ್ರಸ್ತುತ ವರ್ಷವೇ ಯೋಜನೆಗೆ ಚಾಲನೆ ನೀಡುವ ಚಿಂತನೆ ಮುಖ್ಯಮಂತ್ರಿಗಳದ್ದಾಗಿದೆ. ಒಟ್ಟು 20ಕ್ಕೂ ಹೆಚ್ಚು ಗ್ರಾಮಗಳಿಗೆ ಪರ್ಯಾಯ ವ್ಯವಸ್ಥೆ, ಪರಿಹಾರ ದೊರಕಿಸಲಾಗುವುದು. ಇನ್ನೂ3 ವರ್ಷದಲ್ಲಿ ಯೋಜನೆಯ ಪ್ರಗತಿ ಶೇ 50ರಷ್ಟಾಗಲಿದೆ. ಯೋಜನೆ ಸಾಕಾರದಿಂದ ನಮ್ಮ ಭಾಗ ಸಹಿತ ಪಕ್ಕದ ಜಿಲ್ಲೆ ನೀರಿನ ಸಮಸ್ಯೆಯಿಂದ ಮುಕ್ತವಾಗಲಿದೆ’ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ನಾಲ್ಕು ದಶಕದ ಕನಸು

ನವಲಿ ಬಳಿಯ ಸಮಾನಾಂತರ ಜಲಾಶಯ (ಫ್ಲಡ್ ಪ್ಲೋ ಕೆನಾಲ್). ತುಂಗಭದ್ರಾ ನದಿ ನೀರನ್ನು ಬಳಸಿಕೊಂಡು ನೀರಾವರಿ ಕೈಗೊಳ್ಳಲು 1861ರಲ್ಲಿ ಸರ್ ಅರ್ಥಲ್ ಕಾಟನ್ ಎಂಬುವವರು ಯೋಜನೆ ರೂಪಿಸಿದ್ದರು. ರಾಯಚೂರು ಭಾಗಕ್ಕೆ ಕೊಪ್ಪಳ ಕಾಲುವೆ. ಬಳ್ಳಾರಿ ಭಾಗಕ್ಕೆ ಸಂಡೂರು ಕಾಲುವೆ ಮತ್ತು ಆಂಧ್ರಕ್ಕೆ ಕರ್ನೂಲ್, ಕಡಪಾ ಕಾಲುವೆಯ ಯೋಜನೆಗಳನ್ನು ರೂಪಿಸಿ, ಸಮೀಕ್ಷೆ ಕಾರ್ಯವನ್ನು ಪೂರ್ತಿ ಮಾಡಿ ನೀಲ ನಕ್ಷೆ ಸಿದ್ದಪಡಿಸಿದ್ದರು. ಯೋಜನೆ ಮಾತ್ರ ಸಾಕಾರಗೊಳ್ಳಲಿಲ್ಲ.

26-09-2008ರಂದು ಕಲಬುರ್ಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನೆಯ ಸರ್ವೆಗೆ ಅನುಮತಿ ದೊರೆತು, ₹1.10 ಕೋಟಿ ನೀಡಲಾಗಿತ್ತು. ಅಂದಿನ ಯೋಜನೆಯ ನೀಲನಕ್ಷೆ, ಯೋಜನಾ ವೆಚ್ಚ ₹5800 ಕೋಟಿ ಇತ್ತು. ಈಗ ₹12 ಸಾವಿರ ಕೋಟಿ ಆಗಿದೆ. ಜಾರಿ ಕಾರ್ಯ ನನೆಗುದಿಗೆ ಬಿದ್ದರೆ ಯೋಜನಾ ವೆಚ್ಚ ದ್ವಿಗುಣವಾಗಲಿದ್ದು, ಯೋಜನೆ ಜಾರಿಗೆ ಸರ್ಕಾರ ಮುಂದಾಗಬೇಕು ಎಂಬುದು ಜನಪ್ರತಿನಿಧಿಗಳ, ಜನರ ಧ್ವನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT