ಮಂಗಳವಾರ, ಸೆಪ್ಟೆಂಬರ್ 21, 2021
27 °C

ಕೊಪ್ಪಳ: ಸ್ಮಶಾನವಿಲ್ಲದೆ ಅಂತ್ಯಕ್ರಿಯೆಗೆ ಪರಿಶಿಷ್ಟರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಳವಂಡಿ (ಕೊಪ್ಪಳ ಜಿಲ್ಲೆ): ಗ್ರಾಮದ ಅಂಬೇಡ್ಕರ್ ಕಾಲೊನಿಯ ಪರಿಶಿಷ್ಟ ಜಾತಿಯ ಜನರು ಬುಧವಾರ ಅಂತ್ಯಕ್ರಿಯೆಗೆ ಸ್ಮಶಾನವಿಲ್ಲದೇ, ಶವ ಹೊತ್ತು ಪರದಾಡಿದರು.

ಮಹಿಳೆಯ ಶವವನ್ನು ಕಾಲೊನಿಯ ಜನರು ಕಷ್ಟಪಟ್ಟು ಹೊತ್ತು ನಡೆದರೆ, ಅಂತ್ಯಕ್ರಿಯೆಗೆ ಕಟ್ಟಿಗೆ ತುಂಬಿಕೊಂಡು ತರುತ್ತಿದ್ದ ಟ್ರ್ಯಾಕ್ಟರ್‌ ಕೆಸರಿನಲ್ಲಿ ಸಿಲುಕಿ ಇನ್ನಷ್ಟು ಸಮಸ್ಯೆ ಉಂಟಾಯಿತು. ಮೂರು ತಾಸುಗಳ ನಂತರ ಪ್ರಯಾಸದಿಂದ ಅಂತ್ಯಕ್ರಿಯೆ ನಡೆಯಿತು.

‘ಅಂತ್ಯಕ್ರಿಯೆ ನಡೆಸುತ್ತಿದ್ದ ಜಾಗದಲ್ಲಿ ಈಗ ಚೆಕ್ ಡ್ಯಾಂ ನಿರ್ಮಿಸಲಾಗಿದೆ. ಅದಕ್ಕೆ ಅಳವಂಡಿ-ಭೈರಾಪುರದ ಕಾಲ್ನಡಿಗೆ ದಾರಿಯ ಹಳ್ಳದಲ್ಲಿ ಅಂತ್ಯಕ್ರಿಯೆ ಮಾಡಬೇಕಿದೆ. ಚೆಕ್ ಡ್ಯಾಂ ನಿರ್ಮಾಣ  ಕಾಮಗಾರಿ ಸ್ಥಗಿತಗೊಳಿಸಿ, ಸ್ಮಶಾನಕ್ಕೆ ಜಾಗ ನೀಡುವಂತೆ ಒತ್ತಾಯಿಸಿದರೂ ಜಿಲ್ಲಾಡಳಿತ ಸ್ಪಂದಿಸಲಿಲ್ಲ. ದಾರಿ ಮಧ್ಯದ ಜಮೀನಿನ ಮಾಲೀಕರು ಅಂತ್ಯಕ್ರಿಯೆಗೆ ಅಡ್ಡಿಪಡಿಸಿದರೆ, ಮತ್ತಷ್ಟು ದೂರ ಹೋಗಬೇಕು’ ಎಂದು ನಿವಾಸಿಗಳು ನೋವು ತೋಡಿಕೊಂಡರು.

‘ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 300ಕ್ಕೂ ಹೆಚ್ಚು ಕುಟುಂಬಗಳಿವೆ. ಮೃತಪಟ್ಟರೆ, ಹಳ್ಳದ ದಂಡೆ ಅಥವಾ ದೂರದ ಪ್ರದೇಶಕ್ಕೆ ಹೋಗಿ ಅಂತ್ಯಕ್ರಿಯೆ ಮಾಡಬೇಕು. ಮಳೆಗಾಲದಲ್ಲಿ ಒಂದು ಕಿ.ಮೀ. ಉದ್ದದ ರಸ್ತೆ ಕೆಸರುಮಯ ಆಗಿರುತ್ತದೆ. ಸ್ಮಶಾನಕ್ಕೆ ಬೇಡಿಕೆಯಿಟ್ಟು ದಶಕವಾದರೂ ಪರಿಸ್ಥಿತಿ ಸುಧಾರಿಸಿಲ್ಲ’ ಎಂದು ಅವರು ದೂರಿದರು.

'ಸಂಕಷ್ಟದಲ್ಲೇ ಜೀವನ ಕಳೆಯುವ ಪರಿಶಿಷ್ಟ ಜಾತಿಯ ಸಮುದಾಯಕ್ಕೆ ಸತ್ತ ಮೇಲೂ ಶಾಂತಿ ಸಿಗುವುದಿಲ್ಲ. ಸ್ಮಶಾನಕ್ಕಾಗಿ ಹಕ್ಕೊತ್ತಾಯ ಮಾಡಿದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸದಿದ್ದರೆ, ನಮ್ಮ ಪರಿಸ್ಥಿತಿ ಏನಾಗಬೇಕು’ ಎಂದು ಸಮುದಾಯದ ದುರಗೇಶ ತಂಬೂರಿ ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು