ಭಾನುವಾರ, ಆಗಸ್ಟ್ 14, 2022
28 °C

ವಿಶೇಷ ಪ್ಯಾಕೇಜ್‌ ಘೋಷಿಸಬೇಕು: ಕಾರ್ಮಿಕರಿಂದ ಶಾಸಕರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ಲಾಕ್‌ಡೌನ್‌ ಕಾರಣಕ್ಕೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತತ್ತರಿಸಿರುವ ತಾಲ್ಲೂಕಿನ ಶಾಮಿಯಾನ ಮತ್ತು ಡೆಕೋರೇಶನ್ ಕಾರ್ಮಿಕರು ಹಾಗೂ ಮಾಲೀಕರಿಗೆ ಆರ್ಥಿಕ ಪ್ಯಾಕೇಜ್‌ ಘೋಷಿಸಬೇಕು ಎಂದು ಶಾಮಿಯಾನ ಡೆಕೋರೇಶನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ವಿಷಯ ಕುರಿತು ಭಾನುವಾರ ಇಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಪದಾಧಿಕಾರಿಗಳು ಈ ಕಾರ್ಮಿಕರ ಸಮಸ್ಯೆಯ ಬಗ್ಗೆ ಸರ್ಕಾರದ ಗಮನಸೆಳೆಯುವ ಮೂಲಕ ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ಕೋವಿಡ್‌ ಮೊದಲನೇ ಅಲೆಯಿಂದ ಸಮಸ್ಯೆ ಎದುರಿಸುತ್ತಿದ್ದ ಕಾರ್ಮಿಕರು ಇನ್ನೇನೂ ಚೇತರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಎರಡನೇ ಅಲೆ ಆರಂಭಗೊಂಡಿತು. ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿದ ನಂತರ ಯಾವುದೇ ರೀತಿಯ ಸಾರ್ವಜನಿಕ ಆಚರಣೆಗಳು, ಧಾರ್ಮಿಕ, ಸಾಮಾಜಿಕ ಮತ್ತು ಸರ್ಕಾರದ ಕಾರ್ಯಕ್ರಮಗಳು ನಡೆಯಲಿಲ್ಲ. ಇದರಿಂದ ಮಾಲೀಕರು ಆರ್ಥಿಕ ನಷ್ಟ ಅನುಭವಿಸಿದರೆ ಕಾರ್ಮಿಕರು ದೈನಂದಿನ ಬದುಕು ನಡೆಸುವುದಕ್ಕೆ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ. ಕೋವಿಡ್‌ ಸಮಸ್ಯೆ ಸದ್ಯದಲ್ಲಿ ಬಗೆಹರಿಯುವ ಲಕ್ಷಣಗಳು ಇಲ್ಲದ ಕಾರಣ ಕಾರ್ಮಿಕರ ಕುಟುಂಬಗಳು ಬೀದಿಗೆ ಬರುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರ ನೆರವು ಘೋಷಿಸಬೇಕು ಎಂದರು.

ಮನವಿ ಸ್ವೀಕರಿಸಿ ಕಾರ್ಮಿಕರು, ಮಾಲೀಕರೊಂದಿಗೆ ಚರ್ಚೆ ನಡೆಸಿದ ಶಾಸಕ ಬಯ್ಯಾಪುರ, ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸುವ ಅನಿವಾರ್ಯತೆಯ ಬಗ್ಗೆ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದರು. ಅಲ್ಲದೆ ಕೋವಿಡ್‌ ಪರಿಸ್ಥಿತಿಯನ್ನು ಸಾಧ್ಯವಾದಷ್ಟು ಮಟ್ಟಿಗೆ ಎದುರಿಸಲು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು. ಸರ್ಕಾರ ನಿಮ್ಮ ನೆರವಿಗೆ ಬರುವ ಭರವಸೆ ಇದೆ ಎಂದು ಕಾರ್ಮಿಕರಿಗೆ ಹೇಳಿದರು.

ಸಂಘದ ಅಧ್ಯಕ್ಷ ನಬಿಸಾಬ್ ದೋಟಿಹಾಳ, ಪ್ರಮುಖರಾದ ಫಕೀರಪ್ಪ ಹೊಸವಕ್ಕಲ, ಬಸವರಾಜ ಶೆಟ್ಟರ, ಶಶಿ ಹೊಸವಕ್ಕಲ, ಶರಣಪ್ಪ ವಂದಾಲ, ಶಾಮಣ್ಣ ಕಟ್ಟಿಮನಿ, ಅಂದಾನಯ್ಯ ಹಿರೇಮಠ, ಬಸವರಾಜ ಯಾಳಗಿ, ಹಸನಸಾಬ್ ನಿಲೋಗಲ್, ವಿರುಪಾಕ್ಷಯ್ಯ ಅಂಗಡಿ, ಸುಭಾಷ್, ಮುತ್ತಪ್ಪ, ಪ್ರಶಾಂತ್ ಹಾಗೂ ನಾಗರಾಜ ಮಾಳಿಗಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.