ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಗಿರಿ | ತಾಲ್ಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿ: ತಂಗಡಗಿ

Published 24 ಆಗಸ್ಟ್ 2024, 14:26 IST
Last Updated 24 ಆಗಸ್ಟ್ 2024, 14:26 IST
ಅಕ್ಷರ ಗಾತ್ರ

ಕನಕಗಿರಿ: 'ಸಂಘದ ನಡೆ, ಶಾಲೆಯ ಕಡೆಗೆ', ಸರ್ಕಾರಿ ಶಾಲೆಗಳಿಗೆ‌ ಸ್ಪರ್ಧಾತ್ಮಕ ಡೈಜಿಸ್ಟ್ ವಿತರಣೆ ಹಾಗೂ ಪ್ರವೇಶ ಪರೀಕ್ಷೆಗೆ ಉಚಿತ ತರಬೇತಿ ನೀಡುವ‌‌ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ‌ ವಿಶಿಷ್ಟ ರೀತಿಯಲ್ಲಿ ಕೆಲಸ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ‌’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಗಂಗಾವತಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಸಹಯೋಗದಲ್ಲಿ ಶನಿವಾರ ಇಲ್ಲಿನ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ‘ತಾಲ್ಲೂಕು ಮಟ್ಟದ ಶೈಕ್ಷಣಿಕ ಕಾರ್ಯಾಗಾರ, ಎನ್ಎಂಎಂಎಸ್, ನವೋದಯ, ಮೊರಾರ್ಜಿ ದೇಸಾಯಿ ಇತರೆ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಯ ಉಚಿತ ತರಬೇತಿ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರದ ಜತೆಗೆ ಸಂಘ-ಸಂಸ್ಥೆಗಳು ಕೈ ಜೋಡಿಸಿದಾಗ ಮಾತ್ರ ಸರ್ಕಾರಿ ಶಾಲೆಗಳು ಮತ್ತಷ್ಟು ಸಬಲೀಕರಣಗೊಳ್ಳುತ್ತವೆ’ ಎಂದರು.

‘ಪಟ್ಟಣದಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ‌ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ‌ ಶಾಲೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿ ನಿಲಯ ಸ್ಥಾಪಿಸಲಾಗುತ್ತಿದೆ. ನವಲಿ ಗ್ರಾಮಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ‌ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ‌ ಶಾಲೆ ಮಂಜೂರು ಆಗಿದ್ದು ಹಣ ಬಿಡುಗಡೆಯಾಗಿದೆ. ಶ್ರೀರಾಮನಗರಕ್ಕೆ ಅಲ್ಪ ಸಂಖ್ಯಾತರ ಕಲ್ಯಾಣ‌ ಇಲಾಖೆಯ ವಸತಿ‌ ನಿಲಯ ಮಂಜೂರಾಗಿದೆ’ ಎಂದು ತಿಳಿಸಿದರು.

‘ಕ್ಷೇತ್ರದ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಸೇರಿದಂತೆ ಶೈಕ್ಷಣಿಕ ಹಾಗೂ ಮೂಲ ಸೌಲಭ್ಯ ಕಲ್ಪಿಸಲು ಅಕ್ಷರ ಆವಿಷ್ಕಾರ ಯೋಜನೆಯಲ್ಲಿ ₹13.36 ಕೋಟಿ‌ ಮಂಜೂರು ಆಗಿದ್ದು ಕಾಮಗಾರಿಗೆ ಅನುಮೋದನೆ ದೊರೆತ ನಂತರ ಕೆಲಸ‌ ಆರಂಭಿಸಲಾಗುವುದು’ ಎಂದರು.

ಲೇಖಕ ವಿ. ವಿ.‌ಗೊಂಡಬಾಳ ಮಾತನಾಡಿ, ‘ವಿದ್ಯಾರ್ಥಿ ದೆಸೆಯಿಂದಲೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು ಅನಿವಾರ್ಯ ಹಾಗೂ ಅವಶ್ಯಕವಾಗಿದೆ, ಈ ಕೆಲಸಕ್ಕೆ ಶಿಕ್ಷಕರ ಸಂಘ ಬುನಾದಿ ಹಾಕುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಶಂಶಾದ್‌ ಬೇಗಂ ಮಾತನಾಡಿ, ‘ಒಪಿಎಸ್‌ ಜಾರಿಗೆ ಆಗ್ರಹಿಸಿದರು. ಸಂಘದ‌ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ತಹಶೀಲ್ದಾರ್ ವಿಶ್ವನಾಥ ಮುರುಡಿ, ಬಿಇಒ ವೆಂಕಟೇಶ, ತಾಲ್ಲೂಕು ಪಂಚಾಯಿತಿ ಪ್ರಭಾರ‌ ಇಒ ರಾಜಶೇಖರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಉಪ ಪ್ರಾಂಶುಪಾಲ ಜಗದೀಶ ಹಾದಿಮನಿ, ಮುಖ್ಯಶಿಕ್ಷಕರಾದ ಎಸ್.ಶಿವಕುಮಾರ, ತುಳಜಾ ನಾಯಕ, ಸಂಘದ ಗೌರವಾಧ್ಯಕ್ಷ ಶೇಖರಯ್ಯ ಕಲ್ಮಠ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಶಿರಿಗೇರಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಗಂಗಾಧರಸ್ವಾಮಿ, ಜಿ.ಪಂ.ಮಾಜಿ ಸದಸ್ಯ ವೀರೇಶ ಸಮಗಂಡಿ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರಮೇಶ‌ ನಾಯಕ, ದಲ್ಲಾಳಿ ವರ್ತಕರ ಸಂಘದ ಅಧ್ಯಕ್ಷ ಮಹಾಂತೇಶ ಸಜ್ಜನ್, ಜಿ.ಪಂ. ಕೆಡಿಪಿ ಸದಸ್ಯ ನಾಗಪ್ಪ ಹುಗ್ಗಿ, ಪಟ್ಟಣ‌ ಪಂಚಾಯಿತಿ ಸದಸ್ಯರಾದ ಸಂಗಪ್ಪ ಸಜ್ಜನ್, ರಾಜಾಸಾಬ ನಂದಾಪುರ, ಶರಣೆಗೌಡ ಪಾಟೀಲ,
ಪ್ರಮುಖರಾದ  ಸಿದ್ದಪ್ಪ ನೀರ್ಲೂಟಿ, ಬಸಂತಗೌಡ, ವಾಗೀಶ‌ ಹಿರೇಮಠ, ಸಣ್ಣ ಕನಕಪ್ಪ ಇತರರು ಹಾಜರಿದ್ದರು.

ಗೀತಾ ಹಂಚಾಟೆ ಪ್ರಾರ್ಥಿಸಿದರು. ಜಗದೀಶ ಟಿ.‌ಎಸ್. ಸ್ವಾಗತಿಸಿದರು. ಪವಿತ್ರಾ ಹಾಗೂ ವಿನೋದ ನಿರೂಪಿಸಿದರು. ಇದೇ ಸಮಯದಲ್ಲಿ ಕಳೆದ ಸಾಲಿನ‌ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು, ತರಬೇತಿ‌ ನೀಡಿದ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT